ETV Bharat / state

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ: ಸಿಐಡಿ ಮುಂದೆ ಅಭ್ಯರ್ಥಿಗಳಿಂದ ತಪ್ಪೊಪ್ಪಿಗೆ

ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣದಲ್ಲಿ ಅಕ್ರಮ ಎಸಗಿರುವ ಬಗ್ಗೆ ನಾಲ್ವರು ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

CID  KPSC RECRUITMENT SCAM  BENGALURU IAS OFFICER GYANENDRA KUMAR VETERINARY OFFICER RECRUITMENT CASE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : September 1, 2026 at 7:39 PM IST

1 Min Read
Choose ETV Bharat

ಬೆಂಗಳೂರು: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ರಾಜ್ಯ ಅಪರಾಧ ತನಿಖಾ ಇಲಾಖೆಯು (ಸಿಐಡಿ) ವಿಚಾರಣೆ ವೇಳೆ ಅಭ್ಯರ್ಥಿಗಳು ಹಣ ನೀಡಿ ಅಕ್ರಮವೆಸಗಿರುವುದನ್ನು ಕಂಡುಕೊಂಡಿದೆ. ಅಂತಿಮ ನೇಮಕಾತಿ ಪಟ್ಟಿಯಲ್ಲಿ ಅಯ್ಕೆಯಾಗಿದ್ದ ಆಭ್ಯರ್ಥಿಗಳ ಪೈಕಿ ನಾಲ್ವರು ಅಕ್ರಮ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮದಲ್ಲಿ ಭಾಗಿಯಾಗಿದ್ದ ನಾಲ್ವರು ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಪರೀಕ್ಷೆ ಮುನ್ನವೇ ಪ್ರಶ್ನೆ ಪತ್ರಿಕೆಯೊಂದಿಗೆ ಬೆಂಗಳೂರು, ತುಮಕೂರಿನ ದೇವರಾಯನದುರ್ಗ, ಆಂಧ್ರದ ರೆಸಾರ್ಟ್ ಸೇರಿದಂತ ಮೂರು ಕಡೆಗಳಲ್ಲಿ ಪರೀಕ್ಷೆ ಬರೆದಿರುವ ಬಗ್ಗೆ ಆಭ್ಯರ್ಥಿಗಳು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತನಿಖೆಗೆ ಅತ್ಯಗತ್ಯ ಸಾಕ್ಷ್ಯಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಹಾಗೂ ಹಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯನ್ನು ಸೀಜ್ ಮಾಡಿ ಕೀ ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ನ್ಯಾಯಾಲಯದಿಂದ ಅಧಿಕೃತ ಸರ್ಚ್ ವಾರಂಟ್​ ಪಡೆದುಕೊಂಡಿದ್ದ ಸಿಐಡಿ ತಂಡವು ಬಸವರಾಜ್ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿದೆ.

ಸಾಹುಕಾರ್ ಪ್ರಕರಣದ ಮೊದಲ ಆರೋಪಿ: ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ಆರೋಪಿಗಳ ಪಾತ್ರ ಬಯಲಾಗಿದೆ. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ A1, ಕೆಪಿಎಸ್ಸಿ ಸದಸ್ಯರು A2, ಕೆಪಿಎಸ್ಸಿ ಅಧಿಕಾರಿಗಳು A3, ಆಯ್ಕೆಯಾದ 29 ಅಭ್ಯರ್ಥಿಗಳು A4, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ A5 ಮತ್ತು ಬಸವರಾಜ್ ಕನ್ನಾಳೆ A6 ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಂಧಿತರಾಗಿರುವ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ 10 ದಿನಗಳ ಕಾಲ ವಶಕ್ಕೆ ಪಡೆದಿದೆ. ಇಬ್ಬರ ನಡುವಿನ ಸಂಪರ್ಕ ಹಾಗೂ ಅಭ್ಯರ್ಥಿಗಳೊಂದಿಗೆ ನಡೆಸಿದ ವ್ಯವಹಾರಗಳ ಕುರಿತು ವಿಚಾರಣೆಯನ್ನ ಸಿಐಡಿ ತೀವ್ರಗೊಳಿಸಿದೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿ ತನಿಖೆ ವೇಳೆ ಬೇರೆ ಅಕ್ರಮಗಳ ಬಗ್ಗೆಯೂ ಶಂಕೆ ಮೂಡಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಷ್ಟೇ ಅಲ್ಲ ಬೇರೆ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೆಪಿಎಸ್​ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಬೀದರ್ ಮೂಲದ ಬಸವರಾಜ್ ಕನ್ನಾಳೆ ಸಿಐಡಿ ಕಸ್ಟಡಿಗೆ