ETV Bharat / state

ಖ್ಯಾತ ಪರಿಸರವಾದಿ ಮಾಧವ್​ ಗಾಡ್ಗೀಳ್​ ನಿಧನ: ಗಣ್ಯರಿಂದ ಸಂತಾಪ

ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪಶ್ಚಿಮ ಘಟ್ಟಗಳ ಸಂರಕ್ಷಣೆಯ ನೇತೃತ್ವವಹಿಸಿದ ಅವರು ಕರ್ನಾಟಕದೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದರು.

Veteran Ecologist Madhav Gadgil Passes Away; Nation Mourns His Demise
ಡಾ.ಮಾಧವ್​ ಗಾಡ್ಗೀಳ್​ (ETV Bharat Reporter)
author img

By ETV Bharat Karnataka Team

Published : January 8, 2026 at 10:40 AM IST

|

Updated : January 8, 2026 at 11:02 AM IST

2 Min Read
Choose ETV Bharat

ಹೈದರಾಬಾದ್​: ಖ್ಯಾತ ಪರಿಸರವಾದಿ, ಲೇಖಕ ಹಾಗೂ ಸಂಶೋಧಕ ಡಾ.ಮಾಧವ್​ ಗಾಡ್ಗೀಳ್​ ಅವರು ಬುಧವಾರ (ಜ.7) ರಾತ್ರಿ 11ಕ್ಕೆ ಪುಣೆಯ ಪ್ರಯಾಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 83 ವರ್ಷ ವಯಸ್ಸಾಗಿತ್ತು.

ಗಾಡ್ಗೀಳ್​ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನದವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ಗುರುವಾರ ಸಂಜೆ 4 ಗಂಟೆಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪರಿಸರ ವಿಜ್ಞಾನ ಮತ್ತು ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಗಾಡ್ಗೀಳ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.

1942ರ ಮೇ 24ರಂದು ಪುಣೆಯಲ್ಲಿ ಜನಿಸಿದ ಗಾಡ್ಗೀಳ್, ಪುಣೆ ವಿಶ್ವವಿದ್ಯಾಲಯ ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತ ಪರಿಸರ ವಿಜ್ಞಾನದಲ್ಲಿ ಪಿಹೆಚ್‌ಡಿ ಪಡೆದರು.

1973ರಿಂದ 2004ರವರೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರು ಪರಿಸರ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಇದು ಪರಿಸರ ವಿಜ್ಞಾನದಲ್ಲಿ ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ.

ಪಶ್ಚಿಮ ಘಟ್ಟಗಳ ತಜ್ಞರ ಸಮಿತಿಯ ನೇತೃತ್ವ: ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಹಾನಿ ಮತ್ತು ಸಂರಕ್ಷಣಾ ಅಗತ್ಯಗಳ ಕುರಿತ ಅಧ್ಯಯನದ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಇವರು ಸೇವೆ ಸಲ್ಲಿಸಿದ್ದರು. ಈ ಅಧ್ಯಯನ ಗಾಡ್ಗೀಳ್ ಆಯೋಗ ಎಂದೇ ಜನಪ್ರಿಯವಾಗಿದೆ.

ಪರಿಸರ ಸಂರಕ್ಷಣೆಯ ಕುರಿತು, ವಿಶೇಷವಾಗಿ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದಂತೆ, ಅವರಿಗೆ ವಿಶ್ವಸಂಸ್ಥೆಯ 2024ರ ಚಾಂಪಿಯನ್ಸ್ ಆಫ್ ದಿ ಅರ್ಥ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪರಿಸರ ಸಂರಕ್ಷಣೆಯನ್ನು ಕಾನೂನು ಮತ್ತು ಸರ್ಕಾರಿ ಆದೇಶಗಳಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ ಎಂದು ಗಾಡ್ಗೀಳ್ ದೃಢವಾಗಿ ನಂಬಿದ್ದರು. ಸ್ಥಳೀಯ ಸಮುದಾಯಗಳು ಪ್ರಕೃತಿಯನ್ನು ರಕ್ಷಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದರು.

ಗಾಡ್ಗೀಳ್​ ಅವರ ನಿಧನಕ್ಕೆ ದೇಶ ಕಂಬನಿ ಮಿಡಿದಿದ್ದು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ನಾಯಕ ಜೈರಾಮ್ ರಮೇಶ್, ಗಾಡ್ಗೀಳ್ ಅವರು ಒಬ್ಬ ಆದರ್ಶ ಮತ್ತು ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಎಂದು ಅವರನ್ನು ಸ್ಮರಿಸಿದ್ದಾರೆ.

ಖಂಡ್ರೆ ಸಂತಾಪ: ಗಾಡ್ಗೀಳ್​ ಅವರ ನಿಧನಕ್ಕೆ ಪರಿಸರ ಸಚಿವರಾಗಿರುವ ಈಶ್ವರ್​ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಪರಿಸರ ಸಂರಕ್ಷಣೆಗೆ ಮತ್ತು ಜೀವವೈವಿಧ್ಯತೆಯ ವಿಶ್ವದ ಅದ್ಭುತ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವಿಗೆ ಮತ್ತು ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ಗೀಳ್ ಅವರು ತಮ್ಮ 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ".

"ಹಲವು ನದಿಗಳ ಮೂಲ, ಆಮ್ಲಜನಕದ ಕಣಜ ಹಾಗೂ ಮುಂಗಾರು ಮಾರುತಗಳನ್ನು ತಡೆದು ದೇಶವ್ಯಾಪಿ ಮಳೆಯಾಗಲು ಸಹಕಾರಿಯಾಗಿರುವ ಪಶ್ಚಿಮಘಟ್ಟಗಳ ಗಿರಿ ಪ್ರದೇಶಗಳು ಗಣಿಗಾರಿಕೆ ಹಾಗೂ ಮಾಲಿನ್ಯ ಕಾರಕ ಕೈಗಾರಿಕೆಗಳಿಂದ ಕ್ರಮೇಣ ನಾಶವಾಗುತ್ತಿರುವ ಬಗ್ಗೆ ಸದಾ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದ ಗಾಡ್ಗೀಳ್ ಅವರು ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳು ಪ್ರಕೃತಿ ಪರಿಸರ ಸಂರಕ್ಷಣೆಗೆ ಭಾರತಕ್ಕೆ ಮಾರ್ಗದರ್ಶಿಸೂತ್ರಗಳಾಗಿವೆ" ಎಂದು ತಿಳಿಸಿದ್ದಾರೆ.

ಇವುಗಳನ್ನೂ ಓದಿ: ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಅಂತಿಮಗೊಳಿಸಲು ಗಡುವು ನೀಡಿದ ಎನ್​ಜಿಟಿ

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ಅಂತಿಮಗೊಳಿಸಲು ಗಡುವು ನೀಡಿದ ಎನ್​ಜಿಟಿ

Last Updated : January 8, 2026 at 11:02 AM IST