ಸ್ವತಂತ್ರ ಮಹಿಳಾ ಸೈನ್ಯ ಸ್ಥಾಪಿಸಿದ್ದ ಧೀರ ಕನ್ನಡತಿ: ರಾಜ್ಯ, ರಾಷ್ಟ್ರಮಟ್ಟದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮಗೆ ಸಿಗಬೇಕಿದೆ ಗೌರವ
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಲ್ಲಮ್ಮನವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಬೆಳವಡಿಯ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Published : March 1, 2026 at 4:28 PM IST
ವರದಿ : ಸಿದ್ದನಗೌಡ ಪಾಟೀಲ್
ಬೆಳಗಾವಿ: ಮಹಿಳೆಯರು ಮನೆ ಬಿಟ್ಟು ಹೊರಗೆ ಬಾರದ ಕಾಲದಲ್ಲಿ 348 ವರ್ಷಗಳ ಹಿಂದೆ 2 ಸಾವಿರ ಮಹಿಳೆಯರ ಸೈನ್ಯ ಕಟ್ಟಿದ್ದ ವೀರರಾಣಿ ಬೆಳವಡಿ ಮಲ್ಲಮ್ಮ, ಇಡೀ ಸ್ತ್ರೀ ಕುಲಕ್ಕೆ ಸ್ವಾಭಿಮಾನದ ಪ್ರತೀಕ. ಪುರುಷರಿಗೆ ಸರಿಸಮಾನವಾಗಿ ತಮ್ಮ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಜಗತ್ತಿನ ಇತಿಹಾಸದಲ್ಲೆ ಅಪರೂಪ. ಅಂತ ಮಲ್ಲಮ್ಮಾಜಿ ಶೌರ್ಯ, ಸಾಹಸ ಇಂದಿನ ಪೀಳಿಗೆಗೆ ಪರಿಚಯಿಸಲು ರಾಜ್ಯ ಸರ್ಕಾರ ಏನೋ ಎರಡು ದಿನ ಉತ್ಸವ ಆಚರಿಸುತ್ತದೆ. ಆದರೆ, ಅದು ಬೆಳವಡಿಗೆ ಮಾತ್ರ ಸೀಮಿತವಾಗಿದ್ದು, ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಲ್ಲಮ್ಮನವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಈ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಬೆಳವಡಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಉತ್ಸವ ನಡೆಯುತ್ತಿದೆ. ಉತ್ಸವದಲ್ಲಿ ಮಲ್ಲಮ್ಮನವರ ಸಾಹಸಗಾಥೆ ಕುರಿತು ವಿಚಾರ ಸಂಕೀರ್ಣ ಸೇರಿ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವ ಬಂದಾಗ ಮಾತ್ರ ಮಲ್ಲಮ್ಮ ನೆನಪಾಗುತ್ತಾರೆ. ಆ ಮೇಲೆ ವರ್ಷಪೂರ್ತಿ ಮರೆತು ಬಿಡುತ್ತಾರೆ. ಹಾಗಾಗಿ, ಮಲ್ಲಮ್ಮನ ಅಭಿಮಾನಿಗಳ ಬಹುದಿನಗಳ ಬೇಡಿಕೆ ಆಗಿರುವ ಮಲ್ಲಮ್ಮ ಸಮಾಧಿ ಸ್ಥಳ ಗುರುತಿಸುವುದು, ರಾಕ್ ಗಾರ್ಡನ್ ನಿರ್ಮಾಣ, ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ, ಮಲ್ಲಮ್ಮನವರ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮನಸ್ಸು ಮಾಡದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕಿರು ಪರಿಚಯ : ಇಂದಿನ ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನ ಸೋಂಧಾದಲ್ಲಿ 1,660ರಲ್ಲಿ ಮಲ್ಲಮ್ಮ ಜನಿಸಿದರು. ತಂದೆ ರಾಜ ಮಧುಲಿಂಗನಾಯಿಕ, ತಾಯಿ ರಾಣಿ ವೀರಮ್ಮಾಜಿ. ಬಾಲ್ಯದಲ್ಲೇ ಅಪ್ರತಿಮ ವೀರಳಾಗಿದ್ದ ಮಲ್ಲಮ್ಮಳನ್ನು 1676ರಲ್ಲಿ ಬೆಳವಡಿ ಸಂಸ್ಥಾನದ ರಾಜ ಈಶ ಪ್ರಭುವಿನ ಜೊತೆ ಮದುವೆ ಮಾಡಿಕೊಡುತ್ತಾರೆ. 1678ರಲ್ಲಿ ರಾಜಾ ಈಶಪ್ರಭು ನಿಧನಾ ನಂತರ ಮಲ್ಲಮ್ಮ ಸುಮಾರು 40 ವರ್ಷ ಆಡಳಿತ ನಡೆಸಿದ್ದಾರೆ. ಅದರಲ್ಲಿ 20 ವರ್ಷ ಸ್ವತಂತ್ರ ಆಡಳಿತ ನಡೆಸಿದ್ದರೆ, ಉಳಿದ 20 ವರ್ಷ ಪುತ್ರ ರಾಜಾ ನಾಗಭೂಷಣನಿಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿದ್ದರು. 1,712 ರಲ್ಲಿ ರಾಣಿ ಮಲ್ಲಮ್ಮ ಅವರು ಲಿಂಗೈಕ್ಯರಾದರು.
ಸಮರ್ಥ ಮಹಿಳಾ ಸೈನ್ಯ ಕಟ್ಟಿದ್ದರು : ಸ್ವತಃ ಯುದ್ಧ ನೈಪುಣ್ಯತೆ ಹೊಂದಿದ್ದ ಮಲ್ಲಮ್ಮ ತಮ್ಮ ಸೈನಿಕರನ್ನು ಸಮರಕ್ಕೆ ಹುರಿಗೊಳಿಸಿದ್ದರು. ಈ ವೇಳೆ 2 ಸಾವಿರ ಮಹಿಳೆಯರು, 15 ಸಾವಿರ ಸಶಸ್ತ್ರ ಪುರುಷ ಸೈನಿಕರು, 25 ಸಾವಿರಕ್ಕೂ ಅಧಿಕ ಯುವಕರು ಯುದ್ಧ ತರಬೇತಿ ಪಡೆದು ಆಪತ್ಕಾಲದಲ್ಲಿ ಸಂಸ್ಥಾನಕ್ಕೆ ಪ್ರಾಣಕೊಡಲು ಸಜ್ಜಾಗಿದ್ದರು. ಅದೇ ರೀತಿ ಗುಪ್ತಚರ ವ್ಯವಸ್ಥೆ ಕೂಡ ಬಲಿಷ್ಠವಾಗಿತ್ತು. ಶಿವಾಜಿ ಸೈನಿಕರ ವಿರುದ್ಧ ಯುದ್ಧದ ನಂತರವೂ ಕಿತ್ತೂರು ಸಂಸ್ಥಾನ ಮತ್ತು ಸವಣೂರಿನ ನವಾಬರ ನಿರಂತರ ಉಪಟಳದ ನಡುವೆಯೂ 20 ವರ್ಷಗಳ ಕಾಲ ಸುಭದ್ರ, ಜನಪರ ಆಡಳಿತ ನೀಡಿದ ಕೀರ್ತಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಎಂದು ಇತಿಹಾಸ ಹೇಳುತ್ತದೆ.

ಮಲ್ಲಮ್ಮ ಸ್ತ್ರೀ ಕುಲಕ್ಕೆ ಸ್ಫೂರ್ತಿಯ ಸೆಲೆ : 'ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿದ್ದ ದಿಟ್ಟ ಮಹಿಳೆ ಬೆಳವಡಿ ಮಲ್ಲಮ್ಮ. ಮಲ್ಲಮ್ಮಾಜಿ ಶೌರ್ಯ, ಸಾಹಸ, ವಾತ್ಸಲ್ಯಕ್ಕೆ ಮನಸೋತ ಶಿವಾಜಿ ಮಹಾರಾಜ, ಅವರನ್ನು ಸಹೋದರಿ ಅಂತಾ ಒಪ್ಪಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶಿವಾಜಿ ಮಹಾರಾಜ, ರಾಣಿ ಮಲ್ಲಮ್ಮನ ಪುತ್ರ ನಾಗಭೂಷಣನಿಗೆ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಹಾಲು ಕುಡಿಸುತ್ತಿರುವುದನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು, ಅದು ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಈಗಲೂ ಕಾಣಬಹುದಾಗಿದೆ. ಅದಾದ ಬಳಿಕ ಶಿವಾಜಿ ಮಹಾರಾಜರ ಸೈನಿಕರು ಬೆಳವಡಿ ಸಂಸ್ಥಾನಕ್ಕೆ ನೆರಳಾಗಿದ್ದರು. ಇನ್ನು ಸ್ತ್ರೀ ಕುಲಕ್ಕೆ ಸ್ಫೂರ್ತಿಯ ಸೆಲೆಯಾಗಿ, ಲಿಂಗತಾರತಮ್ಯ ಹೋಗಲಾಡಿಸಿ, ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ಮಲ್ಲಮ್ಮ ನೀಡಿದ್ದರು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಕಲೆ, ಸಾಹಿತ್ಯಿಕವಾಗಿ ಕನ್ನಡನಾಡನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ರಾಣಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ' ಎಂದು ಡಾ. ಬಾಳಪ್ಪ ಚಿನಗುಡಿ ವಿವರಿಸಿದರು.
360 ಗ್ರಾಮಗಳು ಬೆಳವಡಿ ಸಂಸ್ಥಾನಕ್ಕೆ ಸೇರಿದ್ದವು : ಬೆಳವಡಿ ಸಂಸ್ಥಾನ ಚಿಕ್ಕ ಸಾಮ್ರಾಜ್ಯ ಆಗಿದ್ದರೂ ಅತ್ಯಂತ ಸಂಪದ್ಭರಿತವಾಗಿತ್ತು. ವಜ್ರ, ಚಿನ್ನ, ಬೆಳ್ಳಿ ಸೇರಿ ಬೆಲೆ ಬಾಳುವ ಅಪಾರವಾದ ಸಂಪತ್ತು ಹೊಂದಿತ್ತು. ಉತ್ತರಕನ್ನಡದ ಹಳಿಯಾಳದಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ವರೆಗೆ, ನಾಲ್ಕು ವಿಭಾಗಗಳಲ್ಲಿ 360 ಗ್ರಾಮಗಳು ಆಡಳಿತದ ವ್ಯಾಪ್ತಿಯ ಭಾಗವಾಗಿದ್ದವು. ಹತ್ತಿ, ದ್ವಿದಳ ಧಾನ್ಯಗಳು, ಎಣ್ಣೆ ಕಾಳು ಸೇರಿ ಇನ್ನಿತರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ವಿದೇಶಿ ವ್ಯಾಪಾರಿಗಳ ಜೊತೆಗೆ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಇದರಿಂದ ಜಾಗತಿಕವಾಗಿ ಬೆಳವಡಿ ಗುರುತಿಸಿಕೊಂಡಿತ್ತು ಎಂದು ಈಟಿವಿ ಭಾರತಕ್ಕೆ ಸಂಶೋಧಕ ಡಾ. ಬಾಳಪ್ಪ ಚಿನಗುಡಿ ತಿಳಿಸಿದರು.

ಬೆಳವಡಿ ಕುರುಹುಗಳನ್ನು ಸಂರಕ್ಷಿಸಿ : ಬೆಳವಡಿ ಗ್ರಾಮದಲ್ಲಿ ಐದು ಎಕರೆ ವ್ಯಾಪ್ತಿಯಲ್ಲಿ ರಾಣಿ ಮಲ್ಲಮ್ಮ ಜೀವನಚರಿತ್ರೆ ಮತ್ತು ಬೆಳವಡಿ ಸಂಸ್ಥಾನದ ಚರಿತ್ರೆ ಕಟ್ಟಿಕೊಡುವ ರಾಕ್ ಗಾರ್ಡನ್ ನಿರ್ಮಿಸಬೇಕು. ಅದನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಬೇಕು. ಬೆಳವಡಿ ಸಂಸ್ಥಾನಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಾಣದ ಅವಶ್ಯಕತೆ ಇದೆ. ಮಲ್ಲಮ್ಮನ ಸಾಹಸಗಾಥೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ನಿರ್ಮಿಸಬೇಕಿದೆ. ಅದೇ ರೀತಿ ಭಾರತೀಯ ಸೈನ್ಯದ ಮಹಿಳಾ ತುಕಡಿಗೆ ರಾಣಿ ಮಲ್ಲಮ್ಮ ಹೆಸರಿಡಬೇಕು. ಅದೇ ರೀತಿ ಬೆಳವಡಿ ಕುರುಹಗಳನ್ನು ಹುಡುಕಿ, ಅವುಗಳನ್ನು ರಕ್ಷಿಸುವ ಅವಶ್ಯಕತೆ ಇದೆ. ಹೂಲಿ ಬೃಹನ್ಮಠದಲ್ಲಿರುವ ದಾಖಲೆಗಳನ್ನು ಸರ್ಕಾರ ಡಿಜಿಟಲೀಕರಣ ಮಾಡಬೇಕು. ಬೆಳವಡಿ ಬೆನ್ನಿಗೆ ನಿಂತಿದ್ದ ಈ ಮಠವನ್ನು ಜೀರ್ಣೋದ್ಧಾರ ಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಅಧ್ಯಯನ ಪೀಠ, ಪ್ರಾಧಿಕಾರ ರಚಿಸಿ: ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಹಿರಿಯ ಸಾಹಿತಿ, ಕಾದಂಬರಿಕಾರ ಯ. ರು. ಪಾಟೀಲ ಅವರು, 'ಸಾಹಿತ್ಯದ ಮೂಲಕ ಮಲ್ಲಮ್ಮನ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಅವರ ಬಗ್ಗೆ 2006ರಲ್ಲಿ ಒಂದು ಸಂಶೋಧನಾ ಕೃತಿ ರಚಿಸಿದ್ದೇನೆ. 2016ರಲ್ಲಿ ಮಲ್ಲಮ್ಮಾಜಿ ಕುರಿತು ಒಂದು ಬೃಹತ್ ಕಾದಂಬರಿ ಬರೆದಿದ್ದೇನೆ. ಈಗ ಧೀರ ಕನ್ನಡತಿ ಎಂಬ ಕಾದಂಬರಿ ಬರೆದಿದ್ದು, ಅದು ಉತ್ಸವದಲ್ಲಿ ಉದ್ಘಾಟನೆ ಆಗುತ್ತಿದೆ. ಇನ್ನು ಹೆಚ್ಚು ಅಧ್ಯಯನ ಆಗುವ ಸಂಬಂಧ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆ ಆಗಿದೆ. ಈಗ ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆಗೆ ಅನುಮೋದನೆ ಕೊಟ್ಟು, ಈ ಬಜೆಟ್ನಲ್ಲಿ ಅಧ್ಯಯನ ಪೀಠ ಘೋಷಿಸಬೇಕು. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನವರ ರಾಕ್ ಗಾರ್ಡನ್ಗಳಂತೆ ಬೆಳವಡಿಯಲ್ಲೂ ಒಂದು ರಾಕ್ ಗಾರ್ಡನ್ ನಿರ್ಮಿಸಬೇಕು' ಎಂದು ಒತ್ತಾಯಿಸಿದರು.

ಮಲ್ಲಮ್ಮನಿಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ : ಬೆಳವಡಿ ಗ್ರಾಮದ ಸಾಮಾಜಿಕ ಹೋರಾಟಗಾರ ಪ್ರಕಾಶ ಹುಂಬಿ ಮಾತನಾಡಿ, 'ವರ್ಷದಿಂದ ವರ್ಷಕ್ಕೆ ಬೆಳವಡಿ ಉತ್ಸವಕ್ಕೆ ಹೆಚ್ಚು ಅನುದಾನ ಕೊಡುತ್ತಿರುವುದು ಖುಷಿಯ ವಿಚಾರ. ಆದರೆ, ಪ್ರಾಧಿಕಾರ ರಚಿಸಬೇಕೆಂಬ ನಮ್ಮ ಕೂಗಿಗೆ ಕಿವಿಗೊಡದೇ ಇರುವುದು ನೋವಿನ ಸಂಗತಿ. ಹಾಗಾಗಿ, ಈ ಬಾರಿಯಾದರೂ ನಮ್ಮ ಬೇಡಿಕೆ ಈಡೇರಿಸಬೇಕು. ಪ್ರಾಧಿಕಾರ, ಅಧ್ಯಯನ ಪೀಠ ಸ್ಥಾಪಿಸಬೇಕು. ರಾಕ್ ಗಾರ್ಡನ್ ನಿರ್ಮಿಸಬೇಕು. ಬೆಳಗಾವಿ ಸುವರ್ಣ ವಿಧಾನಸೌಧ, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅಶ್ವಾರೂಢ ಮಲ್ಲಮ್ಮಾಜಿ ಮೂರ್ತಿ ಪ್ರತಿಷ್ಠಾಪಿಸಬೇಕು. ಜೊತೆಗೆ ಶಾಲಾ ಪಠ್ಯದಲ್ಲಿ ಮಲ್ಲಮ್ಮನವರ ಪಾಠ ಪುನಃ ಸೇರಿಸಬೇಕು. ನಮ್ಮ ಈ ಎಲ್ಲಾ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ' ಎಂದು ಎಚ್ಚರಿಸಿದರು.
'ಬೆಳವಡಿ ರಾಣಿ ಮಲ್ಲಮ್ಮ ಕೇವಲ ಬೈಲಹೊಂಗಲ, ಬೆಳಗಾವಿ, ಕರ್ನಾಟಕಕ್ಕೆ ಸಿಮೀತ ಅಲ್ಲ. ಇಡೀ ದೇಶವೇ ಹೆಮ್ಮೆ ಪಡುವ ಮಹಾರಾಣಿ. ಅವರಿಗೆ ಸಿಗಬೇಕಾದ ಗೌರವ ಸಿಗಲೇಬೇಕು. ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಆಗಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಗಮನಹರಿಸಬೇಕು. ಬರೀ ಉತ್ಸವಕ್ಕೆ ಸೀಮಿತಗೊಳಿಸಬಾರದು' ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರು ಹೇಳಿದ್ದಾರೆ.
ಇದನ್ನೂ ಓದಿ : ಬೆಣ್ಣೆನಗರಿಯಲ್ಲಿ ಜಂಗಿ ಕುಸ್ತಿ: ದೇಶ-ವಿದೇಶದ ಪೈಲ್ವಾನ್ಗಳ ಕಾದಾಟ, ಇಂದು ಅಂತಿಮ ಸೆಣಸಾಟ

