ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಅದ್ಧೂರಿ ಚಾಲನೆ: ಗಮನ ಸೆಳೆದ ಮೆರವಣಿಗೆ, ಮೊಳಗಿದ ಜಯಘೋಷ
ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಜರುಗಿದೆ.

Published : February 28, 2026 at 5:34 PM IST
ಬೆಳಗಾವಿ : ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ನಿಮಿತ್ತ ಅದ್ಧೂರಿ ಮೆರವಣಿಗೆ ಜರುಗಿತು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವೀರರಾಣಿ ಬೆಳವಡಿ ಮಲ್ಲಮ್ಮನ ಹುಟ್ಟೂರು ಶಿರಸಿ ಸಮೀಪದ ಸೋಂದಾದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ, ಬೆಳವಡಿಗೆ ಆಗಮಿಸಿದ ವೀರಜ್ಯೋತಿಯನ್ನು ಮಲ್ಲಮ್ಮಾಜಿ ವೃತ್ತದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಸೇರಿ ಮತ್ತಿತರ ಗಣ್ಯರು ಸಂಭ್ರಮದಿಂದ ಬರಮಾಡಿಕೊಂಡರು.
ಈ ವೇಳೆ ರಾಣಿ ಮಲ್ಲಮ್ಮ, ರಾಜ ಈಶಪ್ರಭು ಪರ ಜಯಘೋಷಗಳು ಮೊಳಗಿದವು. ಬಳಿಕ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಶಾಸಕರು ಅದ್ಧೂರಿ ಚಾಲನೆ ನೀಡಿದರು.
ಗಮನ ಸೆಳೆದ ಮೆರವಣಿಗೆ : ನಂತರ ಗಣ್ಯರು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ರಾಣಿ ಮಲ್ಲಮ್ಮನ ವೇಷಧಾರಿಗಳು, ಡೊಳ್ಳುಕುಣಿತ, ಗೊಂಬೆಕುಣಿತ, ವೀರಗಾಸೆ, ಕುದುರೆಕುಣಿತ, ಜನಪದ ವಾದ್ಯಗಳು, ನಗಾರಿ ವಾದನ, ಕುಂಭ ಹೊತ್ತ ನೂರಾರು ಮಹಿಳೆಯರು ಹಾಗೂ ಕಥಕ್ಕಳಿ ತಂಡಗಳ ಪ್ರದರ್ಶನಗಳು ನೋಡುಗರನ್ನು ಆಕರ್ಷಿಸಿದವು. ಮಲ್ಲಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿತು.

ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿದ ಗಣ್ಯರು : ಬಳಿಕ ಬೆಳವಡಿ ಮಲ್ಲಮ್ಮನವರ ಪುತ್ಥಳಿಗೆ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಜಿ. ಪಂ. ಮಾಜಿ ಸದಸ್ಯೆ ರೋಹಿಣಿ ಪಾಟೀಲ ಸೇರಿ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿದರು.
ಈ ವೇಳೆ ಐಪಿಎಸ್ ಪ್ರೊಬೇಷನರಿ ಅಧಿಕಾರಿ ಡಾ. ಭಾನುಪ್ರಕಾಶ ಜೆ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿ ಅನೇಕ ಅಧಿಕಾರಿಗಳು, ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಸಾಯಂಕಾಲ ಉದ್ಘಾಟನಾ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ : ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಸಾಯಂಕಾಲ ಉದ್ಘಾಟನಾ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ : ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ: ಹೂವುಗಳಲ್ಲಿ ಅರಳಿದ ವಿಧಾನ ಸೌಧ, ಕೈ ಬೀಸಿ ಕರೆಯುತ್ತಿದೆ ಹಂಪಿಯ ಕಲ್ಲಿನ ರಥ

