ETV Bharat / state

₹17 ಕೋಟಿ ಮೌಲ್ಯದ ವಿವಿಧ ಮಾದಕವಸ್ತು ಜಪ್ತಿ: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂವರನ್ನ ಬಂಧಿಸಿದ ಖಾಕಿ

₹17 ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ಜಪ್ತಿ ಮಾಡಿರುವ ಬೆಂಗಳೂರು ಪೊಲೀಸರು, ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

NARCOTICS SEIZED
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : March 3, 2026 at 7:08 PM IST

2 Min Read
Choose ETV Bharat

ಬೆಂಗಳೂರು: ರಾಜಧಾನಿ ಪೊಲೀಸರಿಂದ ಡ್ರಗ್ಸ್ ಬೇಟೆ ಮುಂದುವರೆದಿದ್ದು, ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ₹17 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ವ್ಯವಸ್ಥಿತ ಜಾಲದ ಮೂಲಕ ದುಬಾರಿ ಬೆಲೆಯ ಮಾದಕವಸ್ತುಗಳನ್ನ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 17 ಕೋಟಿ ಮೌಲ್ಯದ 8,335 ಎಲ್​ಎಸ್​ಡಿ ಸ್ಟ್ರಿಪ್ಸ್​ಗಳು, 5 ಕೆ.ಜಿ. ಹೈಡ್ರೋಗಾಂಜಾ, 534 ಗ್ರಾಂ ಚರಸ್ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Various narcotics worth Rs 17 crore seized In Bengaluru
ವಶಪಡಿಸಿಕೊಳ್ಳಲಾದ ಮಾದಕವಸ್ತುಗಳು (ETV Bharat)

ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಥೈಲ್ಯಾಂಡ್​ನಿಂದ ತರಿಸಿಕೊಂಡು ಬಾಗಲೂರಿನ ಪ್ಲ್ಯಾಡ್​ವೊಂದರಲ್ಲಿ ಇಟ್ಟುಕೊಂಡು ದಂಧೆ ನಡೆಸಲು ಸಿದ್ಧತೆ ನಡೆಸುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಡಿಸಿಪಿ-2 ರಾಜ ಇಮಾಮ್ ಖಾಸಿಮ್ ಮತ್ತು ಎಸಿಪಿ ಮಹಾನಂದ್ ನೇತೃತ್ವದ ಸಿಸಿಬಿ ನಾರ್ಕೋಟಿಕ್ಸ್ ತಂಡವು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬುವರನ್ನು ಬಂಧಿಸಿದೆ. ಡ್ರಗ್ಸ್ ಮಾರಾಟವನ್ನೇ ಕಸುಬು ಮಾಡಿಕೊಂಡಿದ್ದ ಆರೋಪಿಗಳು, ಥೈಲ್ಯಾಂಡ್‌ನಲ್ಲಿರುವ ವಿನ್ಸೆಂಟ್ ಎಂಬಾತನಿಂದ ಡ್ರಗ್ಸ್ ಪಡೆಯುತ್ತಿದ್ದರು. ವಿನ್ಸಂಟ್ ಸೂಚಿಸಿದ ಜಾಗಗಳಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು, ಬೇಡಿಕೆಗನುಗುಣವಾಗಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಎಲ್​ಎಸ್​ಡಿ ಸ್ಟ್ರಿಪ್ಸ್ ವಶಕ್ಕೆ ಪಡೆಯಲಾಗಿದೆ. ಒಂದು ಎಲ್​ಎಸ್​ಡಿ ಸ್ಟ್ರಿಪ್ಸ್ ಸುಮಾರು 3 ಸಾವಿರವಿದೆ. ಖಚಿತ ಮಾಹಿತಿ ಆಧರಿಸಿ ಫ್ಲ್ಯಾಟ್​ವೊಂದರ ಮೇಲೆ ತಪಾಸಣೆ ನಡೆಸಿದಾಗ 8,335 ಸ್ಟ್ರಿಪ್ಸ್, 5 ಕೆ.ಜಿ. ಹೈಡ್ರೋಗಾಂಜಾ, 534 ಗ್ರಾಂ ಚರಸ್ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಕಲೇಟ್, ಬಿಸ್ಕತ್ ಬಾಕ್ಸ್​ನಲ್ಲಿ ಡ್ರಗ್ಸ್: ಯಾರಿಗೂ ಅನುಮಾನ ಬಾರದಿರಲಿ ಎಂದು ಚಾಕಲೇಟ್ ಹಾಗೂ ಬಿಸ್ಕತ್ ಬಾಕ್ಸ್​ಗಳಲ್ಲಿ ಹೈಡ್ರೋಗಾಂಜಾ ಪ್ಯಾಕ್ ಮಾಡಿ ವಿದೇಶದಿಂದ ನಗರದ ಅಂಚೆ ಕಚೇರಿಗೆ ಪಾರ್ಸೆಲ್ ಮಾಡಿದ್ದ ದಂಧೆಕೋರರ ಯೋಜನೆಯನ್ನು ಪೊಲೀಸರು ತಲೆಕೆಳಗಾಗಿಸಿದ್ದಾರೆ. ವಿದೇಶದಿಂದ ನಗರದ ಕೆಂಪೇಗೌಡನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗೆ ಬಂದಿದ್ದ ಪಾರ್ಸೆಲ್​ವೊಂದನ್ನು ಬಿಚ್ಚಿ ನೋಡಿದಾಗ ಬಿಸ್ಕತ್ ಹಾಗೂ ಚಾಕಲೇಟ್ ಬಾಕ್ಸ್​ಗಳಲ್ಲಿ 1.5 ಕೋಟಿ ಮೌಲ್ಯದ ಒಂದೂವರೆ ಹೈಡ್ರೋಗಾಂಜಾ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಿದೇಶದಿಂದ ಯಾರಿಗೆ ಅಪರಿಚಿತ ಆರೋಪಿ ಕಳುಹಿಸಿದ್ದ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

55 ಲಕ್ಷ ಮೌಲ್ಯದ ಹ್ಯಾಸಿಸ್ ಆಯಿಲ್ ವಶ: ವ್ಯವಸ್ಥಿತ ಜಾಲದ ಮೂಲಕ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾರಾಟ ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ ಆರೋಪದಡಿ ಲಿಂಗರಾಜ್ ದಾಸ್ ಎಂಬುವನನ್ನ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 55 ಲಕ್ಷ ಮೌಲ್ಯದ 27 ಕೆ.ಜಿ.ಗಾಂಜಾ 3, 200 ಕೆ.ಜಿ. ಹ್ಯಾಸಿಸ್ ಆಯಿಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತ್ಯೇಕ ಮೂರು ಪ್ರಕರಣಗಳಲ್ಲಿ 17 ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನ ವಶಕ್ಕೆ ಪಡೆದು ಮೂವರನ್ನ ಬಂಧಿಸಲಾಗಿದೆ. ಯಾರಿಂದ ಡ್ರಗ್ಸ್ ತರಿಸಿಕೊಂಡು ಯಾರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. - ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ

ಇದನ್ನೂ ಓದಿ: ಕ್ಯಾಂಡಿ, ಸಿಹಿ ಪದಾರ್ಥಗಳಲ್ಲಿ ಅಡಗಿಸಿಟ್ಟು ಗಾಂಜಾ, ಡ್ರಗ್ಸ್​ ಕಳ್ಳಸಾಗಣೆ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಇಬ್ಬರು ಸೆರೆ