ಅಲೆಮಾರಿ ಸಮುದಾಯದಲ್ಲಿ ಪ್ರಪ್ರಥಮ ವಕೀಲ ಪದವೀಧರೆ; ದೊಡ್ಡಪ್ಪನ ಅಲೆದಾಟ ನೋಡಿ ಪಣತೊಟ್ಟ ಅರುಣಾ
ವಿ.ಅರುಣಾ ಅವರು ಅಲೆಮಾರಿ ಸಮುದಾಯದಲ್ಲಿ ಪ್ರಪ್ರಥಮ ವಕೀಲ ಪದವೀಧರೆಯಾಗಿ ಹೊರಹೊಮ್ಮಿದ್ದಾರೆ.

Published : February 28, 2026 at 6:03 AM IST
|Updated : February 28, 2026 at 9:21 AM IST
ವರದಿ: ಕೇಶವ್ ಎಂ
ಮೈಸೂರು: ಅಲೆಮಾರಿ ಸಮುದಾಯದಲ್ಲಿ ಪ್ರಪ್ರಥಮವಾಗಿ ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ಮೊದಲ ಕಾನೂನು ಪದವೀಧರೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ವಿ.ಅರುಣಾ.
ಪ್ರಕರಣವೊಂದರಲ್ಲಿ ತನ್ನ ದೊಡ್ಡಪ್ಪನನ್ನು ಕೋರ್ಟ್‌ಗೆ ಅಲೆದಾಡಿಸಿದ್ದರಿಂದ ಮನನೊಂದ ಅಲೆಮಾರಿ ಸಮುದಾಯದ ಯುವತಿ, ಛಲದಿಂದ ತಾನೂ ಕೂಡ ಕಾನೂನು ವಿದ್ಯಾಭ್ಯಾಸ ಮುಗಿಸಿದ್ದು, ಇವರು ರಾಜ್ಯದಲ್ಲಿಯೇ ತಮ್ಮ ಸಮುದಾಯದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಪಡೆದ ಯುವತಿಯಾಗಿ ಹೊರಹೊಮ್ಮಿದ್ದಾರೆ.
ಮೈಸೂರಿನ ಏಕಲವ್ಯ ನಗರದ ನಿವಾಸಿ, ಅಲೆಮಾರಿ ಸಮುದಾಯದವರಾದ ವಿ.ಅರುಣಾ ಅವರು ಬಾಲ್ಯದಿಂದಲೂ ಅಸ್ಪೃಶ್ಯತೆ, ಅಸಮಾನತೆಯನ್ನು ಕಂಡು ತನ್ನ ದೊಡ್ಡಪ್ಪ ಹಾಗೂ ತಂದೆಯ ಆಸೆಯಂತೆಯೇ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ.
2026ರ ಜೂನ್ 7ರಂದು ನಡೆಯಲಿರುವ ಆಲ್ ಇಂಡಿಯಾ ಬಾರ್ ಅಸೋಸಿಯೇಷನ್ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದು, ಈ ಪರೀಕ್ಷೆಯಲ್ಲಿ ಪಾಸಾದರೆ ಸುಪ್ರೀಂ ಕೋರ್ಟ್ ವಕೀಲೆಯಾಗಿ ಕೆಲಸ ಮಾಡುವ ಅವಕಾಶ ಒದಗಿ ಬರಲಿದೆ.
ತಂದೆ ವೆಂಕಟೇಶ್ ಅವರು ಆಟೋಚಾಲಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಮಂಗಳ ಅವರು ಗೃಹಿಣಿಯಾಗಿದ್ದಾರೆ. ಅರುಣಾ ಕಷ್ಟಗಳ ನಡುವೆ ಓದಿ ವಕೀಲೆಯಾಗಿರುವುದರಿಂದಾಗಿ ಕುಟುಂಬಸ್ಥರಲ್ಲಿ ಸಂತಸ ಹೆಚ್ಚಿದೆ. ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರೆಂಬ ಹೆಮ್ಮೆಯೂ ಮೂಡಿದೆ.
ವಿದ್ಯುತ್ ಇಲ್ಲದೇ ಓದು: ಏಕಲವ್ಯ ನಗರದ ಗೋಮಾಳದ ಶೆಡ್ ಮನೆಯಲ್ಲಿ 1ರಿಂದ 10ನೇ ತರಗತಿಯವರೆಗೂ ಸೀಮೆ ಎಣ್ಣೆ ದೀಪದಲ್ಲಿಯೇ ಓದಿದ ಅರುಣಾ, ಪಿಯುಸಿ ಓದುವಾಗ ಸರ್ಕಾರದಿಂದ ಜೆ.ಎನ್.ನರ್ಮ್ ಯೋಜನೆ ಅಡಿಯಲ್ಲಿ ತನ್ನ ಕುಟುಂಬಸ್ಥರಿಗೆ ನೀಡಿದ ಮನೆಯಲ್ಲಿ ವಿದ್ಯುತ್ ಬೆಳಕು ಕಂಡರು.
ನಂತರ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಮಹಾರಾಣಿ ಕಲಾ ಕಾಲೇಜಿನಲ್ಲಿ ಕಲಾ ವಿಷಯ, ಬಳಿಕ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ 2025ರಲ್ಲಿ ಕಾನೂನು ಶಿಕ್ಷಣ ಮುಗಿಸಿದರು. ಪ್ರಾಥಮಿಕ ಶಾಲೆಯಿಂದ ಲಾ ಶಿಕ್ಷಣದವರೆಗೆ ಅಧ್ಯಯನ ಮಾಡಿದ್ದು, ಕನ್ನಡ ಭಾಷೆಯಲ್ಲಿಯೇ.
ದೊಡ್ಡಪ್ಪನ ಅಲೆದಾಟ, ತಂದೆ-ಸಹೋದರರ ಇಚ್ಛೆ: ಪ್ರಕರಣವೊಂದರಲ್ಲಿ ತಮ್ಮ ದೊಡ್ಡಪ್ಪನವರು ಕೋರ್ಟ್‌ಗೆ ಅಲೆದಲೆದು ಬೇಸರಗೊಂಡಿದ್ದರು. ತಾನು ಕೋರ್ಟ್‌ಗೆ ಹೋಗುವಾಗ ನೀನು ಲಾಯರ್ ಆದರೆ ನನ್ನನ್ನು ಈ ಸಂಕಷ್ಟದಿಂದ ಪಾರು ಮಾಡಬಹುದಿತ್ತು ಎಂದು ತಮ್ಮ ಸಂಕಟ ತೋಡಿಕೊಳ್ಳುತ್ತಿದ್ದರು. ಅಲ್ಲದೇ, ತಂದೆಯೂ ಕೂಡ ಓದಿದರೆ ಕಾನೂನು ವಿಷಯವನ್ನು ಓದಬೇಕು ಹಠ ಮಾಡಿ ಓದಿಸಿದರು. ಇವರ ಓದಿಗೆ ಯಾವ ಸಂಘ ಸಂಸ್ಥೆಗಳ ನೆರವು ಕೇಳದೆ, ತಂದೆ-ಸಹೋದರ ಬೆನ್ನಿಗೆ ನಿಂತರು.
ಬಾಲ್ಯದಲ್ಲಿ ತನಗೆ ಸೇನೆಗೆ ಸೇರಬೇಕು ಎನ್ನುವ ಹಂಬಲ ಇತ್ತು. ಪಿಯುಸಿ ನಂತರ ಲಾಯರ್ ಓದಿ, ನೊಂದವರಿಗೆ ಸಹಾಯ ಮಾಡಬೇಕು ಎನ್ನುವ ಮನಸಾಯಿತು. ಹೈಕೋರ್ಟ್ ನ್ಯಾಯಾಧೀಶರಾಗಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ಅರುಣಾ, ಅವರು ವಕೀಲೆ ಶಿಲ್ಪ ಹಿರೇಮಠ ಅವರ ಬಳಿ ವಕೀಲಿಕೆ ಅಭ್ಯಾಸ ಮಾಡಿದರು. ಪ್ರಸ್ತುತ ವಕೀಲರಾದ ನಾಗರಾಜ್ ಅವರ ಬಳಿ ವಕೀಲಿಕೆ ಅಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಲು ಅರ್ಜಿ ಆಹ್ವಾನಿಸಿತು. ಆದರೆ, ಮೂರು ವರ್ಷ ವಕೀಲಿಕೆ ಅಭ್ಯಾಸ ಮಾಡಿದ್ದರೆ ಅರ್ಜಿ ಸಲ್ಲಿಸಬಹುದು ಎಂದು ಸೂಚನೆ ಹೊರಡಿಸಿದ ಪರಿಣಾಮ ಪರೀಕ್ಷೆ ಬರೆಯಲಿಲ್ಲ. ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲು ರೆಡಿಯಾಗುತ್ತಿದ್ದಾರೆ ವಿ.ಅರುಣಾ.
ಹೈಕೋರ್ಟ್ ನ್ಯಾಯಾಧೀಶೆಯಾಗಬೇಕು: ವಕೀಲ ವೃತ್ತಿ ಅಭ್ಯಾಸ ಮಾಡುತ್ತಿರುವ ವಿ.ಅರುಣಾ ಅವರು ಮಾತನಾಡಿ, "ನಾನು ಸೇನೆಗೆ ಸೇರಬೇಕೆಂದು ಆಸೆ ಇಟ್ಟುಕೊಂಡಿದ್ದೆ. ಆದರೆ, ದೊಡ್ಡಪ್ಪನ ಅಲೆದಾಟ ನೋಡಿ, ತಂದೆ-ಸಹೋದರರ ಇಚ್ಛೆಯಂತೆ ಸಮಾಜದಲ್ಲಿರುವ ವ್ಯವಸ್ಥೆಯಿಂದ ವಕೀಲಳಾಗಬೇಕು ಎಂದು ಗುರಿ ಇಟ್ಟುಕೊಂಡು ಓದಿದ್ದೇನೆ. ಹೈಕೋರ್ಟ್ ನ್ಯಾಯಾಧೀಶೆಯಾಗಬೇಕು ಎಂಬ ಛಲ ಇದೆ" ಎಂದು ಹೇಳುತ್ತಾರೆ.
ಅರುಣಾ ಅವರ ತಾಯಿ ಮಂಗಳ ಮಾತನಾಡಿ, "ಅಲೆಮಾರಿ ಸಮುದಾಯದಲ್ಲಿಯೇ ತಮ್ಮ ಮಗಳು ಉನ್ನತ ಶಿಕ್ಷಣ ಪಡೆದಿದ್ದಾಳೆ. ಅಲ್ಲದೇ ಕಾನೂನು ಪದವೀಧರೆಯಾಗಿರುವುದು ತುಂಬ ಖುಷಿಯಾಗುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ಪೇಟೆಂಟ್ ವೀರ ಬೆಳಗಾವಿಯ ಈ ಸಾಫ್ಟ್ವೇರ್ ಎಂಜಿನಿಯರ್: ರಸ್ತೆ ಅಪಘಾತ ತಡೆಗಟ್ಟುವುದು, ಉಚಿತ ಇಂಟರ್ನೆಟ್ ನೀಡುವ ಮಹದಾಸೆ

