ಉಡುಪಿ: ಸರ್ಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ; ಅಧಿಕಾರಿಗಳಿಗೆ ತರಾಟೆ
ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಸರಕಾರಿ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Published : February 27, 2026 at 9:29 PM IST
ಉಡುಪಿ: ನಿನ್ನೆಯಿಂದ ಉಡುಪಿ ಪ್ರವಾಸದಲ್ಲಿರುವ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಇಂದು ಬೆಳಗ್ಗಿನಿಂದಲೇ ಹಲವು ಕಡೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಬೆಳಗ್ಗೆ ಏಳು ಗಂಟೆಯಿಂದ ಸರಕಾರಿ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಉಡುಪಿ ತಾಲೂಕು ಕಚೇರಿಯಲ್ಲಿ ಸುಮಾರು ಒಂದು ತಾಸು ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಲೋಪಗಳು ಕಂಡುಬಂದವು. ಮುಖ್ಯವಾಗಿ ತಾಲೂಕು ಕಚೇರಿ ಸಿಬ್ಬಂದಿ ಕಚೇರಿಗೆ ಬರುವ ಸಮಯವನ್ನು ಸೂಕ್ತ ರೀತಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ದಾಖಲು ಮಾಡುತ್ತಿರಲಿಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಬ್ಬಂದಿಯೊಬ್ಬ ತನ್ನ ಬ್ಯಾಗ್ನಲ್ಲಿ ಹಲವು ಕಡತಗಳನ್ನು ಇಟ್ಟುಕೊಂಡಿದ್ದ. ಇದನ್ನು ಪರಿಶೀಲಿಸಿದ ಉಪಲೋಕಾಯುಕ್ತರು, ನೀನೇನು ಇಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದಿಯಾ? ಅಥವಾ ಸರಕಾರಿ ಕೆಲಸ ಮಾಡುತ್ತಿದ್ದಿಯಾ? ಎಂದು ತರಾಟೆಗೆ ತೆಗೆದುಕೊಂಡರು. ಆತನ ವಿರುದ್ಧ ಕೇಸ್ ದಾಖಲಿಸಿಕೊಳ್ಳುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು.
ಅದೇ ರೀತಿ ತಾಲೂಕು ಕಚೇರಿಯ ವಿವಿಧ ಇಲಾಖೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತರು, ಹಲವು ಲೋಪಗಳನ್ನು ಪತ್ತೆಹಚ್ಚಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, "ಉಡುಪಿ ಜಿಲ್ಲೆಯ ಸರಕಾರಿ ನೌಕರರು ಬುದ್ದಿವಂತ ಮೋಸಗಾರರಾಗಿದ್ದಾರೆ. ನಾನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ಇಲ್ಲಿಯವರು ಬುದ್ಧಿವಂತರು. ಆದರೆ ಯಾಮಾರಿಸ್ತಾರೆ. ಸೂಕ್ತ ಉತ್ತರ ಕೊಡುವುದಿಲ್ಲ. ಕರ್ತವ್ಯ ಲೋಪ ಮತ್ತು ತಪ್ಪು ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇನೆ" ಎಂದರು.
"ಉಡುಪಿಯಂತಹ ಸಾಕ್ಷರ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಕಂಡು ಬಹಳ ನೋವಾಗಿದೆ. ನಿಟ್ಟೂರಿನ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸಂಪೂರ್ಣ ಹಾಳಾಗಿದ್ದು, ಕೊಳಕು ನೀರಿನ ಶುದ್ಧೀಕರಣ ಕಾರ್ಯ ನಡೆಯುತ್ತಿಲ್ಲ. ಗಲೀಜು ನೀರನ್ನು ಜನತೆಗೆ ಸರಬರಾಜು ಮಾಡಲಾಗುತ್ತಿದ್ದು, ಕೊಳಚೆ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಮೀನುಗಾರಿಕೆಗೆ ಹಾನಿಯಾಗಿದ್ದು, ರಾಸಾಯನಿಕ ಮಿಶ್ರಿತ ನೀರಿನಿಂದ ಮೀನು ಸಂಪತ್ತು ಕುಸಿತಗೊಂಡಿದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಈ ಸಂಬಂಧ ಬಂದರಿನ ಕೊಳಚೆ ಸಮಸ್ಯೆ ಹಾಗೂ ಶುದ್ಧೀಕರಣ ಘಟಕದ ಅಸಮರ್ಪಕ ನಿರ್ವಹಣೆ ಕುರಿತು ಸುಮೋಟೋ ಪ್ರಕರಣ ದಾಖಲಿಸಲಾಗುವುದು" ಎಂದು ತಿಳಿಸಿದ ಅವರು "ತಾಲೂಕು ಕಚೇರಿಯಲ್ಲಿ ಅನೇಕ ಪ್ರಕರಣಗಳು ಪೆಂಡಿಂಗ್ ಆಗಿರುವುದು ಗಮನಕ್ಕೆ ಬಂದಿದೆ. ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳನ್ನು ಖಾಸಗಿ ಬ್ಯಾಗಿನಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು" ಎಂದು ಎಚ್ಚರಿಸಿದರು.
ಇದನ್ನೂ ಓದಿ: ಕರ್ತವ್ಯದಿಂದ ವಜಾ ನಿರ್ಧಾರ ಹಿಂಪಡೆಯುವಿಕೆ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

