ETV Bharat / state

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಸಿದ್ಧ: ಹಳ್ಳಿಗಳಲ್ಲೂ ರೈಲಿನ ಸದ್ದು! ಯೋಜನೆ ಬಗ್ಗೆ ಸೋಮಣ್ಣ ಹೇಳಿದ್ದಿಷ್ಟು

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಸಿದ್ಧಗೊಂಡಿದ್ದು, ಕೆಲವೇ ದಿನಗಳಲ್ಲಿ ರೈಲು ಓಡಾಡುವ ಸದ್ದು ಕೇಳಿ ಬರಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

WORK INSPECTION
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ಪರಿಶೀಲಿಸಿದರು. (ETV Bharat)
author img

By ETV Bharat Karnataka Team

Published : February 26, 2026 at 9:22 PM IST

5 Min Read
Choose ETV Bharat

ವಿಶೇಷ ವರದಿ - ನೂರುಲ್ಲಾ ಡಿ

ದಾವಣಗೆರೆ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಬೆಣ್ಣೆ ನಗರಿ ಜನರ ಬಹುವರ್ಷದ ಕನಸು. ಇದೀಗ ಈ ಕನಸು ನನಸಾಗುವ ಕಾಲ ಬಂದಿದೆ. ದಾವಣಗೆರೆ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಚುಕುಬುಕು ರೈಲು ಓಡುವ ಸದ್ದು ಕೇಳಿ ಬರಲಿದೆ.

ಈ ಜಿಲ್ಲೆಗಳ ಪ್ರತಿ ಹಳ್ಳಿಗಳಿಂದಲೇ ರಾಜ್ಯ ರಾಜಧಾನಿ ಬೆಂಗಳೂರಿಗೆ ಕಡಿಮೆ ಅವಧಿಯಲ್ಲಿ ತೆರಳಲು ಈ ರೈಲು ಮಾರ್ಗ ನೆರವಾಗಲಿದೆ. ದಾವಣಗೆರೆ ಜಿಲ್ಲೆಯ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಾಮಗಾರಿ ಕೂಡ ಮುಗಿಲು ಬಂದಿದೆ. ಹಳ್ಳಿಗಳಲ್ಲಿ ಈಗಾಗಲೇ ರೈಲ್ವೆ ನಿಲ್ದಾಣಗಳು ತಲೆ ಎತ್ತಿವೆ. ಹಳಿಗಳನ್ನು ಜೋಡಿಸುವ ಕಾರ್ಯ ನಡೆದಿದ್ದು, ಕೆಲವೇ ದಿನಗಳಲ್ಲಿ ರೈಲು ಓಡಾಡುವ ಸದ್ದು ಕೇಳಿ ಬರಲಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇಂದು ಟ್ರ್ಯಾಲಿ ಏರಿ ಕಾಮಗಾರಿ ವೀಕ್ಷಿಸಿದರು. ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ರೈಲು ನಿಲ್ಧಾಣದಿಂದ ಆರಂಭವಾದ ವೀಕ್ಷಣೆ ಆನಗೋಡು, ಹೆಬ್ಬಾಳು ಗ್ರಾಮಗಳು ರೈಲು ನಿಲ್ಧಾಣ ತನಕ ಕಾಮಗಾರಿ ಪರಿಶೀಲನೆ ನಡೆಸಿದರು.‌

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಯನ್ನು ಕೇಂದ್ರ ಸಚಿವ ವಿ ಸೋಮಣ್ಣ ಪರಿಶೀಲಿಸಿದರು. (ETV Bharat)

2027ಕ್ಕೆ ಕಾಮಗಾರಿ ಪೂರ್ಣ‌: ಇಂದು ನೇರ ರೈಲು ಮಾರ್ಗದ ಕಾಮಗಾರಿ ವೀಕ್ಷಣೆ ಮಾಡಿದ ಸಚಿವ ಸೋಮಣ್ಣ ಅವರು ಬೇಗ ಬೇಗ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಕೆಲ ಕಡೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಗಂಗಾಧರಸ್ವಾಮಿ ಜಿಎಂ ಅವರಿಗೆ ಸೂಚಿಸಿದರು. ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಕೆಲಸ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಚಿವರಿಗೆ ನೀಡಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ 2027ಕ್ಕೆ ಲೋಕಾರ್ಪಣೆ ಆಗಲಿದೆ. ಈ ಜನರ ಕನಸು ಈಗ ನನಸಾಗುತ್ತಿದೆ. ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಲೋಕಾರ್ಪಣೆಗೊಂಡಲ್ಲಿ ಈ ಮೂರು ಜಿಲ್ಲೆಯ ಜನರಿಗೆ ಬಹಳ ಅನುಕೂಲವಾಗಲಿದೆ. ದಶಕಗಳಿಂದ ರೈಲು ನೋಡದ ಹಳ್ಳಿಯ ಜನರು ರೈಲುಗಳನ್ನು ಹತ್ತಿರದಿಂದಲೇ ನೋಡಲಿದ್ದಾರೆ. ಇದೀಗ ಹಲವು ಗ್ರಾಮ ಹಾಗೂ ತಾಲೂಕುಗಳಲ್ಲಿ ಒಟ್ಟು 16 ಹೊಸ ರೈಲು ನಿಲ್ದಾಣಗಳು ತಲೆ ಎತ್ತಿದ್ದು, ಕೆಲವೇ ಕೆಲವು ಕಾಮಗಾರಿ ನಡೆಯುತ್ತಿದೆ. ತೋಳಹುಣಸೆ-ಆನಗೋಡು-ಹೆಬ್ಬಾಳು ಭಾಗದಲ್ಲಿ ಟ್ರಯಲ್​ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Union Minister V Somanna inspects the work on the Tumakuru-Chitradurga-Davanagere direct rail line
ನೂತನ ರೈಲು ಮಾರ್ಗ (ETV Bharat)

ಹೆಬ್ಬಾಳು-ಆನಗೋಡು ರೈಲು ನಿಲ್ದಾಣ ಸಿದ್ಧ: ದಾವಣಗೆರೆಯಿಂದ 15 ಕಿ.ಮೀ ದೂರವಿರುವ ಹೆಬ್ಬಾಳು ಗ್ರಾಮದ ಜನ ರೈಲನ್ನೇ ನೋಡಿಲ್ಲ. ಇದೀಗ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆಯಡಿ ಈ ಗ್ರಾಮಕ್ಕೆ ರೈಲು ಬರಲಿದೆ. ಗ್ರಾಮದ ಹೊರವಲಯದಲ್ಲಿ ಭವ್ಯವಾದ ರೈಲು ನಿಲ್ದಾಣ ತಲೆ ಎತ್ತಿದೆ. ಆನಗೋಡು, ಭರಮಸಾಗರದಲ್ಲೂ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.‌ ಕೆಲವೇ ಕೆಲವು ಕಾಮಗಾರಿ ಬಾಕಿ ಇದೆ. ಇದಲ್ಲದೇ ಆನಗೋಡು ಗ್ರಾಮಕ್ಕೂ ರೈಲು ಸಂಪರ್ಕ ಸಿಗಲಿದೆ. ಆ ಗ್ರಾಮದ ಜನ ರೈಲು ಹತ್ತುವ ದಿನಗಳು ಸಮೀಪಿಸುತ್ತಿವೆ. ಈ ಗ್ರಾಮಕ್ಕೂ ರೈಲ್ವೆ ನಿಲ್ದಾಣ ತಲೆ ಎತ್ತಿದೆ. ಹೆಬ್ಬಾಳು, ಆನಗೋಡಿನಲ್ಲಿ ರೈಲು ನಿಲ್ದಾಣ ಅಲ್ಲದೇ ಫ್ಲಾಟ್​ಫಾರ್ಮ್, ರೈಲು ಹಳಿಗಳು, ಮೇಲ್ಸೇತುವೆ, ಶೌಚಾಲಯ, ಎಲ್ಲವನ್ನೂ ನಿರ್ಮಿಸಲಾಗಿದೆ.‌ ಇನ್ನು ತೋಳಹುಣಸೆ ಗ್ರಾಮಕ್ಕೆ ಈಗಾಗಲೇ ಹಳೆ ರೈಲು ನಿಲ್ದಾಣ ಇದ್ದು, ರೈಲು ಎಂದಿನಂತೆ ಸಂಚರಿಸಲಿದೆ.‌ ದಾವಣಗೆರೆಯಲ್ಲಿ ಮುಖ್ಯ ನಿಲ್ದಾಣ ಇದೆ. ಇದರ ಮುಖಾಂತರ ಹುಬ್ಬಳ್ಳಿ-ಧಾರವಾಡ-ಬೆಳಗಾವಿಗೆ ರೈಲುಗಳು ಸಂಚರಿಸಲಿವೆ. ಆನಗೋಡು ರೈಲು ನಿಲ್ದಾಣದಲ್ಲಿ ಎಕ್ಸ್​ಪ್ರೆಸ್​ ರೈಲು ನಿಲುಗಡೆ ಮಾಡುವಂತೆ ಕೇಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಚಿತ್ರದುರ್ಗದ ಹಳ್ಳಿಗಳಿಗು ರೈಲು: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಕೆಲ ಗ್ರಾಮ ಹಾಗೂ ತಾಲೂಕುಗಳಿಗೂ ಕೂಡ ರೈಲು ಓಡಲಿದೆ. ಈಗಾಗಲೇ ಅಲ್ಲಿ ನಿಲ್ದಾಣಗಳನ್ನು ಮಾಡುವ ಕಾರ್ಯ ನಡೆಯುತ್ತಿದೆ. ದುರಂತ ಎಂದರೆ ಚಿತ್ರದುರ್ಗ ಭಾಗದಲ್ಲಿ ಒಟ್ಟು 111 ಎಕರೆ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ ಎಂದು ಸಚಿವ ವಿ. ಸೋಮಣ್ಣ ಇದೇ ವೇಳೆ ಮಾಹಿತಿ ನೀಡಿದರು.

Union Minister V Somanna inspects the work on the Tumakuru-Chitradurga-Davanagere direct rail line
ನೂತನ ರೈಲು ಮಾರ್ಗ (ETV Bharat)

ರೈಲು ಸಂಪರ್ಕಕ್ಕೆ ರೈ,ಲ್ವೆ ಇಲಾಖೆ ಜಾಗ ಗುರುತಿಸಿ ಈಗಾಗಲೇ ಮ್ಯಾಪ್ ಸಿದ್ಧಪಡಿಸಿದೆ. ಆ ಮ್ಯಾಪ್ ಮೂಲಕ ನೋಡುವುದಾದರೆ ಹಿರಿಯೂರು ತಾಲೂಕಿಗೆ ಮೇಟಿಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿಗಳಿಗೂ ರೈಲು ಸಂಚರಿಸಲಿದೆ.‌ ಚಿತ್ರದುರ್ಗ (ಹಳೆ ನಿಲ್ದಾಣ) ಮೂಲಕ ಸಿರಿಗೆರೆ ಕ್ರಾಸ್‌, ಭರಮಸಾಗರ ಹೆಬ್ಬಾಳು, ಆನಗೋಡು ಮೂಲಕ ದಾವಣಗೆರೆ ಕಡೆ ರೈಲು ಸಂಚರಿಸಲಿದೆ. ತುಮಕೂರು ಜಿಲ್ಲೆಯಲ್ಲೂ ಆರು ಗ್ರಾಮಗಳಿಗೆ ಹಾಗೂ ಒಂದು ತಾಲೂಕಿಗೆ ರೈಲು ಸಂಪರ್ಕ ಸಿಗಲಿದೆ‌. ರೈಲು ನಿಲ್ದಾಣಗಳೂ ತಲೆ ಎತ್ತಿವೆ. ತುಮಕೂರು (ಹಳೆ ನಿಲ್ದಾಣ), ಉರಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ತಾವರೆಕೆರೆ, ಆನೆಸಿದ್ರಿ ಇಷ್ಟು ಗ್ರಾಮದ ಜನ ರೈಲು ನೋಡಲಿದ್ದಾರೆ. ಇನ್ನು ಶಿರಾ ತಾಲೂಕಿಗೂ ಈ ರೈಲು ಸಂಪರ್ಕ ಸಿಗಲಿದೆ ಎಂದು ಈ ಹಿಂದೆ ರೈಲ್ವೆ ಇಲಾಖೆ ತಯಾರಿಸಿರುವ ಮ್ಯಾಪ್ ನೋಡಬಹುದಾಗಿದೆ ಎಂದರು.

ಬೆಂಗಳೂರು-ಮುಂಬೈ ನಡುವೆ 150-180 ಕಿ.ಮೀ ಕಡಿತ: ಈ ನೇರ ರೈಲು ಮಾರ್ಗದಿಂದ ಜನರ ಸಮಯ ಉಳಿತಾಯ ಆಗಲಿದೆ. ದಾವಣಗೆರೆಯಿಂದ ಚಿತ್ರದುರ್ಗಕ್ಕೆ ತೆರಳಲು ಕೇವಲ 45 ನಿಮಿಷ ತಗುಲಲಿದೆ. ಈ ಮಾರ್ಗ ಪೂರ್ಣಗೊಂಡರೆ ಬೆಂಗಳೂರು-ಮುಂಬೈ ನಡುವೆ 150-180 ಕಿ.ಮೀ ಕಡಿಮೆ ಆಗಲಿದೆ‌. ತುಮಕೂರು To ದಾವಣಗೆರೆ ಮಧ್ಯೆ ಹಾಗೂ ಬೆಳಗಾವಿ ಕಿತ್ತೂರು ಭಾಗದಲ್ಲಿಯೂ ಕಿ.ಮೀ ಕಡಿಮೆ ಆಗಲಿದೆ‌. ಸದ್ಯ ಮುಂಬೈಗೆ ಗುಂತಕಲ್​ ಮೂಲಕ ರೈಲುಗಳು ತೆರಳುತ್ತಿದ್ದವು. ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಪೂರ್ಣಗೊಂಡರೆ 150-180 ಕಿಮೀ ಕಡಿತ ಆಗಲಿದೆ. ಅಲ್ಲದೆ ಈ ಮಾರ್ಗ ಪೂರ್ಣಗೊಳ್ಳುವುದರಿಂದ ಮುಂಬೈ-ಬೆಂಗಳೂರು ತನಕ ಒಟ್ಟು 13 ಜಿಲ್ಲೆಗಳಿಗೆ ಸಹಕಾರಿ ಆಗಲಿದೆ. ಇದರಿಂದ ಕೈಗಾರಿಕೆ ಬೆಳೆಯಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆಯ ಐತಿಹಾಸಿಕ ಸ್ಥಳಗಳಿಗೆ ತೆರಳಲು ಸುಲಭವಾಗಲಿದೆ. 2-3 ವರ್ಷದೊಳಗೆ ಇಡೀ ಕಾಮಗಾರಿ ಮುಕ್ತಾಯ ಆಗಿ ರೈಲು ಗಾಡಿಗಳು ಒಡಲಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Union Minister V Somanna inspects the work on the Tumakuru-Chitradurga-Davanagere direct rail line
ಆನಗೋಡು ರೈಲ್ವೆ ನಿಲ್ದಾಣ (ETV Bharat)

ರೈಲು ಹತ್ತಲು ದಾವಣಗೆರೆಗೆ ತೆರಳಬೇಕಿತ್ತು: ಹೆಬ್ಬಾಳು-ಆನಗೋಡು ಗ್ರಾಮದ ಜನ ರೈಲು ಹತ್ತಬೇಕೆಂದರೆ ದಾವಣಗೆರೆಗೆ ತೆರಳಬೇಕಿತ್ತು. ಈಗ ಈ ಮಾರ್ಗದಿಂದ ಅದು ತಪ್ಪಲಿದೆ. ಹಳ್ಳಿಗೂ ರೈಲು ಬರುತ್ತಿರುವುದಿಂದ ಜನರಲ್ಲಿ ಖುಷಿ ಇದೆ. ಸುತ್ತ ಹತ್ತು ಹಳ್ಳಿಗಳಿಗೆ ಉಪಯೋಗ ಆಗಲಿದೆ. ರೈಲು ಬರುತ್ತಿರುವುದರಿಂದಾಗಿ ಬೆಂಗಳೂರಿಗೆ ತೆರಳಲು ಉಪಯೋಗ ಆಗಲಿದೆ. ಚಿನ್ನಸಮುದ್ರ, ಹೊಸಹಳ್ಳಿ, ಗುಡಾಳು, ಗುಮ್ಮನೂರು, ಹಾಲುವರ್ತಿ, ಹೆಬ್ಬಾಳು, ಹೆಬ್ಬಾಳು ಬಡಾವಣೆ, ಹುಣಸೆಕಟ್ಟೆ, ಮಡ್ಲೂರು,‌ ಲಕ್ಕಮುಕ್ತೇನಹಳ್ಳಿ ಸೇರಿದಂತೆ ಇನ್ನಿತರ ಹಳ್ಳಿಯ ಜನರಿಗೆ ಉಪಯೋಗ ಆಗಲಿದೆ. ಬೆಂಗಳೂರಿಗೆ ತೆರಳಲು 6-7 ತಾಸು ಆಗುತ್ತಿತ್ತು. ಈ ಮಾರ್ಗದಿಂದ 3-4 ಗಂಟೆ ಕಡಿತ ಆಗಲಿದೆ. ಸಮಯದ ಜೊತೆಗೆ ಹಣ ಕೂಡ ಉಳಿತಾಯ ಆಗಲಿದೆ. ದಾವಣಗೆರೆಗೆ ಹೋಗುವುದು ತಪ್ಪುತ್ತದೆ. ಹೆಬ್ಬಾಳು-ಆನಗೋಡು ರೈಲು ನಿಲ್ದಾಣದಿಂದಲೇ ಎಲ್ಲೆಡೆ ಹೋಗಬಹುದು.

Union Minister V Somanna inspects the work on the Tumakuru-Chitradurga-Davanagere direct rail line
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರೊಂದಿಗೆ ಇತರೆ ರಾಜಕೀಯ ಮುಖಂಡರು (ETV Bharat)

ರೈಲ್ವೆ ಇಲಾಖೆಯಲ್ಲಿ 52 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಹಳೇ ಯೋಜನೆಗಳಿಗೆ ನೀಡಲಾಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ, ತಾಳಗುಪ್ಪ ಸೇರಿ ಬೇರೆ ಬೇರೆ ಯೋಜನೆಗಳಿಗೆ ನೀಡಲಾಗಿದೆ. 7,008 ಕೋಟಿ ಇದಕ್ಕಾಗಿ ನೀಡಲಾಗಿದೆ. ಈ ನೇರ ರೈಲು ಮಾರ್ಗದ ಯೋಜನೆಗೆ ಎರಡು ಸಾವಿರ ಚಿಲ್ಲರೆ ಎಕರೆ ಭೂಮಿ ಬೇಕಾಗಿತ್ತು. 246 ಎಕರೆ ಹೊರತು ಪಡಿಸಿದರೆ ಉಳಿದ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದರಲ್ಲಿ 211 ಎಕರೆ ಒಂದೇ ಕಡೆ ಇದ್ದು ಭೂಸ್ವಾಧಿನ ಆಗಬೇಕಿದೆ. ಅಲ್ಲದೆ ಇದರಲ್ಲಿ 111 ಎಕರೆ ಚಿತ್ರದುರ್ಗದಲ್ಲಿ ಸ್ವಾಧೀನ ಆಗಬೇಕಿದೆ. ಇನ್ನು ಎರಡು ತಿಂಗಳಲ್ಲಿ ಎಲ್ಲವೂ ಸರಿ ಮಾಡಿ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ. ತುಮಕೂರು-ದಾವಣಗೆರೆ-ಚಿತ್ರದುರ್ಗ ಒಂದು ನಾಣ್ಯದ ಎರಡು ಮುಖಗಳಾಗಿವೆ. ಎಲ್ಲಾ ಕಡೆ ಭೂ ಸ್ವಾಧೀನದ ಬಳಿಕ ಜೂನ್ ತಿಂಗಳ ಒಳಗೆ ಪಾವಗಡ-ಕುಕ್ಕುವಾಡ ರೈಲು ಬರಲಿದೆ. ಮೆಡೆಕ್ಸ್ ರೈಲು ಬರಲಿದೆ. ಟೆಕ್ನಿಕಲ್ ಭೇಟಿ ಬಳಿಕ ಈ ಭಾಗದಲ್ಲು ರೈಲು ಓಡಲಿದೆ. - ವಿ.ಸೋಮಣ್ಣ, ಕೇಂದ್ರ ಸಚಿವ

ಗ್ರಾಮಸ್ಥರ ಹರ್ಷ: ಸ್ಥಳೀಯರಾದ ಪ್ರಕಾಶ್ ಹಾಗೂ ಸುಭಾಷ್ ಎಂಬವರು ಮಾತನಾಡಿ "ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಮಾಡಿರುವ ನೇರ ರೈಲು ಮಾರ್ಗವನ್ನು ಸ್ವಾಗತಿಸುತ್ತೇವೆ. ನಮ್ಮ ಜಮೀನು, ರೈತರ ಜಮೀನು ಹೋಗಿದೆ. ನಮ್ಮೂರಿಗೆ ರೈಲು ನಿಲ್ದಾಣ ಆಗಿರುವುದು ಒಳ್ಳೆಯ ವಿಚಾರ. ಇಲ್ಲಿ ಎಕ್ಸ್​ಪ್ರೆಸ್ ರೈಲುಗಳ ಓಡಾಟದ ವೇಳೆ ನಮ್ಮ ರೈಲ್ವೆ ನಿಲ್ದಾಣಕ್ಕೆ ನಿಲುಗಡೆ ಕೊಡಬೇಕು. ಆನಗೋಡು ಸಾಕಷ್ಟು ಹಳ್ಳಿಗಳಿಗೆ ಕೇಂದ್ರ ಬಿಂದು. ಇದು ಮೇನ್ ಜಂಕ್ಷನ್. ಹರಪನಹಳ್ಳಿ, ಕೊಟ್ಟುರು, ಕೂಡ್ಲಿಗಿ, ದಾವಣಗೆರೆ, ಮಾಯಕೊಂಡ ಹೀಗೆ... ಸಾಕಷ್ಟು ಭಾಗದಿಂದ ಜನ ಇಲ್ಲಿ ಬರಲಿದ್ದಾರೆ. ಅದಕ್ಕಾಗಿ ಇದನ್ನು ಜಂಕ್ಷನ್ ಮಾಡ್ಬೇಕಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಇನ್ನು ಇಲಾಖೆಗೆ ಜಮೀನು ಕೊಟ್ಟಿದ್ದೇವೆ. ಅದರೆ, ರೈತರು ಹೊಲಕ್ಕೆ ಓಡಾಡಲು, ಧನಕರು ಹೋಗಲು ಇಲಾಖೆಯವರು ನಮಗೆ ಸರಿಯಾದ ರಸ್ತೆ ಮಾಡಿಕೊಟ್ಟಿಲ್ಲ. ಸೋಮಣ್ಣ ಅವರು ರಸ್ತೆ ಹಾಗೂ ರೈಲು ನಿಲುಗಡು ಮಾಡಿಕೊಡುತ್ತೇವೆಂದು ಮಾತು ಕೊಟ್ಟಿದ್ದಾರೆ" ಎಂದರು.

ಇದನ್ನೂ ಓದಿ: ಮಂಗಳೂರಿನಲ್ಲಿ ''ಊಟಕ್ಕಿಲ್ಲದ ಉಪ್ಪಿನಕಾಯಿ'' ಆದ ವಂದೇ ಭಾರತ್: ಬೆಂಗಳೂರು – ಗೋವಾ ರೈಲಿಗೆ ನಿಲ್ದಾಣವೇ ಇಲ್ಲವೆಂದು ಅಸಮಾಧಾನ