ETV Bharat / state

ಸಿಎಂ ಡಿಕೆಶಿ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ, ಹೊಸ ಎನ್ಯುಮರೇಷನ್​ಗೆ ಆಗ್ರಹಿಸಿದ್ದೇವೆ: ಪ್ರಲ್ಹಾದ್ ಜೋಶಿ

ರಾಜ್ಯದ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ‌ ನಡೆಯುತ್ತಿದೆ ಎಂದು ಆರೋಪಿಸಿ ಎನ್​ಡಿಎ ಮಿತ್ರ ಪಕ್ಷಗಳ ನಾಯಕರು ಕರ್ನಾಟಕ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದರು.

union-minister-pralhad-joshi-allegations-on-karnataka-government-sir-process
ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ, ಹೆಚ್​.ಡಿ.ಕುಮಾರಸ್ವಾಮಿ, ಇತರರು (ETV Bharat)
author img

By ETV Bharat Karnataka Team

Published : July 6, 2026 at 1:36 PM IST

3 Min Read
Choose ETV Bharat

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ಹೊಸದಾಗಿ ಎನ್ಯುಮರೇಷನ್ ಮಾಡಲು ಆಗ್ರಹ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಭೇಟಿಯಾಗಿ ರಾಜ್ಯದ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ‌ ನಡೆಯುತ್ತಿದೆ ಎಂದು ಆರೋಪಿಸಿ ದೂರು ನೀಡಿದ ಬಳಿಕ ಮಾತನಾಡಿದ ಅವರು, ಇಂದು ಎನ್​ಡಿಎ ಪಾರ್ಟನರ್‌ಗಳು ಕರ್ನಾಟಕ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ರಾಜ್ಯ ಸರ್ಕಾರದವರು ಕುಮ್ಮಕ್ಕು, ದಮ್ಕಿಯಿಂದ ಅಕ್ರಮವಾಗಿ ಎಸ್​ಐಆರ್ ಮಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ದೂರು ನೀಡಿದ್ದೇವೆ. ಮದರಸಾ, ಮಸೀದಿಗಳಲ್ಲಿ, ಕಾಂಗ್ರೆಸ್​​ನ ಚುನಾಯಿತ ಪ್ರತಿನಿಧಿಗಳ ಮನೆಯಲ್ಲಿ, ಒಂದೇ ಕಮ್ಯುನಿಟಿಯ, ಆ ಸಮುದಾಯದ ನಾಯಕರ ಮನೆಯಲ್ಲಿ, ಅವರೇ ಮಾಡಿಕೊಂಡು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

ಬಿಎಲ್​ಎಗಳನ್ನು ಕರೆದು ಮಾಡುತ್ತಿಲ್ಲ. ಈ ಬಗ್ಗೆ ದಾಖಲೆ ಇರುವ ಪೆನ್​ಡ್ರೈವ್ ನೀಡಿದ್ದೇವೆ. ವಾಟ್ಸ್​ಆ್ಯಪ್ ಗ್ರೂಪ್ ಮಾಡಿ, ಇಂತ ಸ್ಥಳಕ್ಕೆ ಬನ್ನಿ ಅಂತ ಹೇಳಿದ್ದಾರೆ. ಈ ಮೊದಲು ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ‌, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ದೂರು ನೀಡಿದ್ದಾರೆ. ಅಷ್ಟಾದರೂ ಸುಧಾರಣೆ ಆಗಿಲ್ಲ. ನಾವೆಲ್ಲಾ ಬಂದು ಇಂದು ಆಯೋಗಕ್ಕೆ ತೀವ್ರ ಆಗ್ರಹ ಮಾಡಿದ್ದೇವೆ. ಅನೇಕ ಉದಾಹರಣೆಗಳಿವೆ. ಉದ್ಧಟತನ ತೋರಿದ್ದು, ವಾಟ್ಸ್​ಆ್ಯಪ್ ಗ್ರೂಪ್, ಬಿಎಲ್​ಒಗಳ ಐಡಿ ಕಾರ್ಡ್​​ನಲ್ಲಿ ಶಾಸಕರ ಫೋಟೋ ಹಾಕಿದ್ದಾರೆ ಎಂದು ಜೋಶಿ ಟೀಕಿಸಿದರು.

ಹೊಸದಾಗಿ ಎನ್ಯುಮರೇಷನ್ ಮಾಡಬೇಕು. ಎಸ್​ಐಆರ್ ಪ್ರಕ್ರಿಯೆ ವಿಫಲಗೊಳಿಸುವ ತಂತ್ರವಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್ ಆದ ಬಳಿಕ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಾಂಗ್ಲಾದೇಶದವರನ್ನು ಮತಪಟ್ಟಿಗೆ ಸೇರಿಸಲು ಅವಕಾಶ ನೀಡಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ಎಸ್​ಐಆರ್ ಮಾಡಲು ಅವಕಾಶ ಇದೆ ಅಂತ ಹೇಳಿದೆ. ಅಪ್ಪ, ಅಮ್ಮ, ಕುಟುಂಬದವರಿಗೆ ಮಾತ್ರ ಅವಕಾಶ ಇದೆ. ಆದರೆ ಸಂಬಂಧಿಕರೂ ಆಗಬಹುದು ಅಂತ ಮಾಡಿದ್ದಾರೆ. ಇದನ್ನು ಕುತಂತ್ರದಿಂದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಶಿವಕುಮಾರ್ ಅಕ್ರಮವಾಗಿ ಜಿಬಿಎ ವ್ಯಾಪ್ತಿಯಲ್ಲಿ ಎಸ್​ಐಆರ್​ ಮಾಡುತ್ತಿದ್ದಾರೆ. ಅಕ್ರಮವಾಗಿ ಹಿಂಡು ಹಿಂಡಾಗಿ ಮಾಡಲಾಗುತ್ತಿದೆ. ಆಯ್ದ ಬೂತ್‌ಗಳಲ್ಲಿ ಪ್ರತ್ಯೇಕ ಎಸ್​ಐಆರ್ ಮಾಡುತ್ತಿದ್ದಾರೆ. ನಾವೆಲ್ಲಾ ಸಲಹೆ ಕೊಟ್ಟಿರುವವರು, ಎಲ್ಲೆಲ್ಲಿ ಸಮಸ್ಯೆ ಇದೆ. ಅಲ್ಲಿ ಮಾಡಬೇಕು ಅಥವಾ ಹೊಸದಾಗಿ ಎನ್ಯುಮರೇಷನ್ ಮಾಡಬೇಕು. ಪರಿಶೀಲನೆ ಮಾಡುವಾಗ ಒಂದೇ ಸರ್ ನೇಮ್ ಇದ್ದರೆ ಸಮಸ್ಯೆ ಆಗುತ್ತದೆ. ಯಾರಾದರೂ ಮೃತಪಟ್ಟಿದ್ದರೆ, ಅಲ್ಲಿ ಇನ್ಯಾರನ್ನೋ ಸೇರಿಸುತ್ತಾರೆ. ಕುಟುಂಬದವರು ಸಹಿ ಹಾಕಿದರೆ ಮುಗಿದು ಹೋಗಲಿದೆ. ಮನೆ ಮನೆಗೆ ಹೋಗದಿದ್ದರೆ ಅವನು ಭಾರತೀಯನೋ, ಬಾಂಗ್ಲಾದೇಶದವನೋ ಯಾರಿಗೆ ಗೊತ್ತಾಗಲಿದೆ ಎಂದು ಜೋಶಿ ಪ್ರಶ್ನಿಸಿದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಅಕ್ರಮ ನಡೆಯಲು ಪ್ರೋತ್ಸಾಹ: ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಚುನಾವಣಾ ಆಯೋಗ ಇಂಡಿಪೆಂಡೆಂಟ್ ಬಾಡಿ. ಅವಶ್ಯಕತೆ ಬಿದ್ದರೆ ನಾವೆಲ್ಲಾ ಎನ್​ಡಿಎ ಪಾರ್ಟನರ್​ಗಳು ಸೇರಿ ದೆಹಲಿಗೆ ಹೋಗಿ ದೂರು ಕೊಡ್ತೇವೆ. ಎಸ್​ಐಆರ್​​​ ಮೊದಲ ದಿನದಿಂದಲೇ ಅಕ್ರಮ ನಡೆಯಲು ಪ್ರೋತ್ಸಾಹ ನೀಡಿದ್ದಾರೆ. ಅಕ್ರಮವಾಗಿ, ಕಾನೂನು ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ದಾಖಲೆ ಸಹಿತ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿದ್ದೇವೆ. ಕೇಂದ್ರ ಚುನಾವಣಾ ಆಯೋಗ ಇಲ್ಲಿನ ಮಾಹಿತಿ ಪಡೆಯುತ್ತಿದೆ ಎಂದರು.

ಮಾಧ್ಯಮಗಳಲ್ಲಿ ಕೂಡ ಇಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಬಗ್ಗೆ ಪಾರದರ್ಶಕವಾಗಿ ತೋರಿಸುತ್ತಿದ್ದೀರಿ. ಐದಾರು ದಿನಗಳ ಕಾಲ ನಡೆದ ಅಕ್ರಮದ ಬಗ್ಗೆ ದಾಖಲೆ ನೀಡಿದ್ದೇವೆ. ಈ ರಾಜ್ಯ ಸರ್ಕಾರ ಯಾವ ರೀತಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯಾ ಅಂತ ಹೇಳಿದ್ದಾರೆ. ಆದರೆ ಇಲ್ಲಿ ಅಧಿಕಾರ ಬಳಸಿಕೊಂಡು ಹೇಗೆ ಅಕ್ರಮ ಮಾಡುತ್ತಿದ್ದಾರೆಂದು ಗೊತ್ತಾಗಿದೆ ಎಂದು ದೂರಿದರು.

ಮುಖ್ಯಮಂತ್ರಿಗಳು ಜಾಣ ಕುರುಡರಾಗಿದ್ದಾರೆ. ನಾನು ಸಿಎಂಗೆ ಕೇಳುತ್ತೇನೆ, ಕೇಂದ್ರ ಹಾಗೆ ಮಾಡಿತು, ಹೀಗೆ ಮಾಡಿತು ಅಂತ ಟೀಕೆ ಮಾಡುತ್ತಿದ್ದಿರಿ. ಕೇಂದ್ರದ ಮೇಲೆ ಕೇವಲ ಟೀಕೆ ಮಾತ್ರ ಮಾಡುತ್ತಿದ್ರಾ? ಇಲ್ಲಿ ಸತ್ಯಾಂಶವನ್ನು ದಾಖಲೆ ಸಹಿತ ನೀಡಿದ್ದೇವೆ. ಸರ್ಕಾರ ಎಲ್ಲಿ ಜಾಗೃತಿ ಮಾಡಿಸುತ್ತಿದೆ? ಅಕ್ರಮವಾಗಿ ಮಾಡುವುದು ಜಾಗೃತಿನಾ? ಎಸ್​ಐಆರ್​​ ಅನುಷ್ಠಾನಕ್ಕೆ ತರಲು ನಿಮ್ಮ ಅಧಿಕಾರಿಗಳೇ ಮಾಡಬೇಕಲ್ವಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಎಸ್​ಐಆರ್ ಕರ್ತವ್ಯದ ವೇಳೆ ಗ್ರಾಮ ಆಡಳಿತಾಧಿಕಾರಿ ಸಾವು: ಸರ್ಕಾರಿ ನೌಕರರ ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ