ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ: ಕೇಂದ್ರ ಸಚಿವ ವಿ ಸೋಮಣ್ಣ ಸ್ವಾಗತ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ. ನಾಗೇಂದ್ರ ನಡೆಯನ್ನು ಕೇಂದ್ರ ಸಚಿವ ವಿ. ಸೋಮಣ್ಣ ಸ್ವಾಗತಿಸಿದ್ದಾರೆ.

Published : August 29, 2026 at 8:01 AM IST
ತುಮಕೂರು: ನಾನು ನಾಗೇಂದ್ರ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ. ಅವರು ಆರೋಪಿ, ಅಪರಾಧಿ ಆಗಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಒಂದು ನಂಬಿಕೆ ಇರುತ್ತೆ. ವಿರೋಧ ಪಕ್ಷಗಳ ಭಾವನೆಗೆ ಸ್ಪಂದಿಸುವ ಜೊತೆಗೆ ಮಾಡಿರುವ ಕೆಲಸ ಒಳ್ಳೆಯದಾಗಿದೆ. ನಾಗೇಂದ್ರಗೆ ಒಳ್ಳೆಯಾದಾಗಲಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರು, ದೊಡ್ಡವರು, ಸವರ್ಣಿಯರು ಅದೆಲ್ಲವನ್ನು ತಲೆಯಿಂದ ತೆಗೆದುಹಾಕಿ. ರಾಜ್ಯ ಇದ್ರೆ ನಾವು, ವ್ಯಕ್ತಿ ದೊಡ್ಡವರಲ್ಲ, ವ್ಯಕ್ತಿಗಿಂತ ದೇಶ ದೊಡ್ಡದು ಅಂತ ನಾವು ಪದೆ ಪದೇ ಮಾತನಾಡುತ್ತೇವೆ ಎಂದರು.
ನಾಗೇಂದ್ರ ಬುದ್ಧಿವಂತ ಇದ್ದಾನೆ. ಒಳ್ಳೆ ತೀರ್ಮಾನ ತೆಗೆದುಕೊಂಡಿದ್ದಾನೆ. ಅವನ ತೀರ್ಮಾನವನ್ನು ನಾನು ಸ್ವಾಗತ ಮಾಡುತ್ತೇನೆ. ಸಣ್ಣಪುಟ್ಟದ್ದು ಎಲ್ಲಾ ಒಂದು ಕಡೆ ಉಪ್ಪು ಖಾರ ಬೆರೆಸುವಂತಹದ್ದು ಇರುತ್ತೆ. ನಾಗೇಂದ್ರ ತೀರ್ಮಾನ ಸರಿಯಿದೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಅವನಿಗೆ ಗೊತ್ತಿದೆ, ತಾನೊಬ್ಬ ಆರೋಪಿ ಅನ್ನೋದು. ಆರೋಪ ಮುಕ್ತವಾಗುವ ತನಕ ಈಗ ತೆಗೆದುಕೊಂಡಿರುವ ತೀರ್ಮಾನ ಸರಿ ಇದೆ ಎಂದು ಹೇಳಿದರು.
ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ನನಗೆ ತಿಳಿದ ಮಟ್ಟಿಗೆ ಈಗ ಪಾದಯಾತ್ರೆ ಅವಶ್ಯಕತೆ ಇಲ್ಲ. ಯಾವ ಕಾರಣಕ್ಕೆ ಬಳ್ಳಾರಿ ಪಾದಯಾತ್ರೆ ಮಾಡಲಿಕ್ಕೆ ಹೊರಟಿದ್ರು. ಅದನ್ನು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನು ಕೇಳಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕುರಿತು ಮಾತನಾಡಿ, ಪದೇ ಪದೇ ನಾನು ಹೇಳೋದಿಕ್ಕೆ ತಯಾರಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಗಳು, ಆಲೋಚನೆಗಳು ಇವೆ. ನಮ್ಮೆಲ್ಲರಿಗೂ ಅವರು ಆದರ್ಶ. ಮೇಲಗಡೆ ಒಬ್ಬ ಇದ್ದಾನೆ, ವರಿಷ್ಠರು ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಬಿಡದಿ ಟೌನ್ಶಿಪ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಹೇಳಿ ಆಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವ್ರು ಸಹ ಅದನ್ನು ಪ್ರೆಸ್ಟೀಜ್ ಆಗಿ ತಗೋಬಾರದು. ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ 50 ಬಿಡದಿಗಳನ್ನು ಮಾಡಬಹುದು. ಅದೊಂದೇ ಬಿಡದಿಗೆ ಯಾಕೆ ದಿನ ಬೆಳಗಾದರೆ ಜಪ ಮಾಡಬೇಕು. ಏನ್ರಿ ಅವಶ್ಯಕತೆ ಇದೆ. ಒಂದು ಬಿಡದಿ ಅಲ್ಲ, 50 ಬಿಡದಿ ಮಾಡಲಿ. ಆದರೆ ಬಿಡದಿ ಜನ ಬೇಡ ಅಂದಾಗ ನಾವ್ಯಾರು ಅದನ್ನು ಮಾಡೋಕೆ. ಆ ಜನ್ರ ತೀರ್ಮಾನ ಏನಿದೆಯೋ ಅದರಂತೆ ನಾವು ನಡೆದುಕೊಳ್ಳಬೇಕಾಗುತ್ತೆ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ರು.
ಇನ್ನು ತಿಪಟೂರು ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟ ವಿಚಾರ ಕುರಿತು ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವ್ರು ಮೂರು ದಿನಗಳ ಕಾಲ ರಜೆ ಇದಿನಿ. ಸೋಮವಾರ ಬಂದು ಎರಡನೇ ಲಿಸ್ಟ್ ನಲ್ಲಿ ಸೇರುಸ್ತಿನಿ ಅನ್ನುವ ಮಾತನ್ನು ಹೇಳಿದ್ದಾರೆ. ಕೆಲವೊಮ್ಮೆ ಎಲ್ಲವನ್ನು ಸೇರಿಸುವ ಕೆಲಸ ಆಗಿರಲ್ಲ. ಅದಕ್ಕೆ ಉಪ್ಪು ಖಾರ ಹಾಕುವ ಕೆಲಸ ಬೇಡ ಅಂದ್ರು.
ಇವುಗಳನ್ನೂ ಓದಿ:
ನಾಗೇಂದ್ರ ನಿರಪರಾಧಿ, ಅವರ ರಾಜೀನಾಮೆಯಿಂದ ತುಂಬಾ ನೋವಾಗಿದೆ: ಸಿಎಂ ಡಿಕೆಶಿ
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಘೋಷಣೆ: ಜನತಾ ನ್ಯಾಯಾಲಯಕ್ಕೆ ಬರುವಂತೆ ಪ್ರತಿಪಕ್ಷಗಳಿಗೆ ಸವಾಲು

