ETV Bharat / state

ಉಡುಪಿ ಪರ್ಯಾಯೋತ್ಸವಕ್ಕೆ ದಿನಗಣನೆ: ಜ.9ರಂದು ಶೋಭಾಯಾತ್ರೆಯಲ್ಲಿ ಶಿರೂರು ಶ್ರೀ ಪುರಪ್ರವೇಶ

ಶಿರೂರು ಶ್ರೀಗಳು ಪರ್ಯಟನೆಯ ಬಳಿಕ ಶಿರೂರು ಮೂಲ ಮಠಕ್ಕೆ ಆಗಮಿಸಲಿದ್ದು, ಅಲ್ಲಿಂದ ಪಟ್ಟದ ದೇವರ ಸಮೇತ ಶೋಭಾಯಾತ್ರೆಯಲ್ಲಿ ಪುರಪ್ರವೇಶ ಮಾಡಲಿದ್ದಾರೆ.

Sri Vedavardhana Theertha Sripada of Shirur Math
ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು (ETV Bharat)
author img

By ETV Bharat Karnataka Team

Published : January 8, 2026 at 1:57 PM IST

1 Min Read
Choose ETV Bharat

ಉಡುಪಿ: ಜನವರಿ 18ರಂದು ನಡೆಯುವ ಶಿರೂರು ಪರ್ಯಾಯದಲ್ಲಿ ಇದೇ ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆಯ ಬಳಿಕ ಜ.9ರಂದು ಉಡುಪಿಗೆ ಆಗಮಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಕಡಿಯಾಳಿ ಮೂಲಕ ಪುರಪ್ರವೇಶ ಮಾಡುವರು ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್‌ ಸುವರ್ಣ ತಿಳಿಸಿದರು.

ಶಿರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪುರಪ್ರವೇಶ, ಶೋಭಾಯಾತ್ರೆ, ಹಸಿರು ಹೊರೆಕಾಣಿಕೆಯ ಕುರಿತು ಮಾಹಿತಿ ನೀಡಿದ ಅವರು, ಶಿರೂರು ಶ್ರೀಗಳು ಪರ್ಯಟನೆಯ ಬಳಿಕ ಶಿರೂರು ಮೂಲ ಮಠಕ್ಕೆ ಆಗಮಿಸಲಿದ್ದು, ಅಲ್ಲಿಂದ ಪಟ್ಟದ ದೇವರ ಸಮೇತ ಕಡಿಯಾಳಿಗೆ ಆಗಮಿಸಿ, ಶ್ರೀ ಮಹಿಷಮರ್ಧಿನಿಯ ದರ್ಶನ ಪಡೆದು ಭವ್ಯ ಶೋಭಾಯಾತ್ರೆಯಲ್ಲಿ ಪುರಪ್ರವೇಶ ಮಾಡಲಿದ್ದಾರೆ ಎಂದರು.

ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್‌ ಸುವರ್ಣ ಮಾಹಿತಿ (ETV Bharat)

"ಸಮಿತಿಯ ಗೌರವಾಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀಗಳನ್ನು ಸ್ವಾಗತಿಸಿ, ಶೋಭಾಯಾತ್ರೆಯಲ್ಲಿ ಕರೆತರಲಾಗುವುದು. ಪುರಮೆರವಣಿಗೆಯಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ" ಎಂದು ತಿಳಿಸಿದರು.

ಪುರಪ್ರವೇಶ ಮೆರವಣಿಗೆಯ ಸಂಚಾಲಕ ಗಣೇಶ್ ರಾವ್ ಮಾತನಾಡಿ, "ಪುರಪ್ರವೇಶ ಮೆರವಣಿಗೆ ಕಡಿಯಾಳಿಯಿಂದ ಹೊರಟು ಸಿಟಿ ಬಸ್ ಸ್ಟ್ಯಾಂಡ್ ಹನುಮಾನ್ ವೃತ್ತ, ಕನಕದಾಸ ರಸ್ತೆ ಮೂಲಕ ಕೃಷ್ಣ ಮಠ ತಲುಪಲಿದೆ. 1000ಕ್ಕೂ ಅಧಿಕ ಭಜಕರು, ಉಡುಪಿಯ ಸ್ಥಳೀಯ ಜಾನಪದ ತಂಡಗಳು, ವಿವಿಧ ಕಲಾತಂಡ, ಸಾಂಸ್ಕೃತಿಕ ತಂಡಗಳು ಹಾಗೂ ವಿಶೇಷ ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಲಿವೆ" ಎಂದು ಹೇಳಿದರು.

"ಶಿರೂರು ಶ್ರೀಗಳು ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ವಿವಿಧ ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ ರಥಬೀದಿಯಲ್ಲಿ ಹಾಕಲಾಗುವ ವೇದಿಕೆಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಪೌರ ಸಮ್ಮಾನವನ್ನು ಸ್ವೀಕರಿಸುವರು. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸುವರು" ಎಂದು ಅವರು ಮಾಹಿತಿ ನೀಡಿದರು.

ಇದೇ ವೇದಿಕೆಯಲ್ಲಿ ಜ.9ರ ಶುಕ್ರವಾರದಿಂದ 17ರ ಶನಿವಾರದವರೆಗೆ ಪ್ರತಿದಿನ ಸಂಜೆ ಹೆಸರಾಂತ ಸಾಂಸ್ಕೃತಿಕ ತಂಡಗಳಿಂದ, ಖ್ಯಾತನಾಮ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ಉಡುಪಿಯಲ್ಲಿ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ಸಂಭ್ರಮ: ಅನ್ನಬ್ರಹ್ಮನ ನಾಡಿನಲ್ಲಿ ವಿಶೇಷ ಸಂಪ್ರದಾಯ