ETV Bharat / state

ಪ್ರೇಮಿಗಳಿಗೆ ಸಪೋರ್ಟ್ ಮಾಡಿದರೆಂದು ಚಾಕುವಿನಿಂದ ಇರಿದು ಇಬ್ಬರ‌ ಕೊಲೆ: ಐವರ ಬಂಧನ

ಪ್ರೀತಿಸಿದ ಪ್ರೇಮಿಗಳಿಗೆ ಸಪೋರ್ಟ್ ಮಾಡಿದರೆಂದು ತಪ್ಪು ತಿಳಿದು ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

MURDER CASE
ಮೃತ ದೇಹಗಳನ್ನು ಸಾಗಿಸುತ್ತಿರುವ ಆಂಬ್ಯುಲೆನ್ಸ್ (ETV Bharat)
author img

By ETV Bharat Karnataka Team

Published : December 13, 2025 at 10:41 AM IST

2 Min Read
Choose ETV Bharat

ಶಿವಮೊಗ್ಗ: ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಲು ಸಹಕಾರಿಸಿದ್ದಾರೆ ಎಂದು ತಪ್ಪು ಕಲ್ಪನೆಯಿಂದ ವ್ಯಕ್ತಿಯೊಬ್ಬ ಇಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ತಡ ರಾತ್ರಿ ನಡೆದಿದೆ.

ಭದ್ರಾವತಿಯ ಜೈ ಭೀಮ್ ನಗರದ ಕಿರಣ್(25) ಹಾಗೂ ಪೌರ ಕಾರ್ಮಿಕ ಮಂಜುನಾಥ್(45) ಕೊಲೆಯಾದ ದುರ್ದೈವಿಗಳು. ಘಟನೆ ಕುರಿತು ಸಂಜಯ್, ಶಶಿ, ವೆಂಕಟೇಶ್, ಭರತ್ ಹಾಗೂ ಸುರೇಶ್ ಸೇರಿ ಐವರನ್ನು ಬಂಧಿಸಿರುವುದಾಗಿ ಎಸ್​ಪಿ ಮಿಥುನ್ ಕುಮಾರ್ ತಮ್ಮ ವಾಟ್ಸ್​ಆ್ಯಪ್​ ಸಂದೇಶದಲ್ಲಿ ತಿಳಿಸಿದ್ದಾರೆ.

ಘಟನೆ ಹಿನ್ನಲೆ: ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದ ಪ್ರೇಮಿಗಳಿಬ್ಬರು ಮೊನ್ನೆ ದಿನ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಹುಡುಗ ಮತ್ತು ಹುಡುಗಿಯ ಎರಡೂ ಕಡೆಯ ಕುಟುಂಬದವರು ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ನಿನ್ನೆ ಸಂಜೆ ಪ್ರೇಮಿಗಳಿಬ್ಬರು ತಮಗೆ ಜೀವ ಬೆದರಿಕೆ ಇದೆ ಎಂದು ಹಳೇ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಆಗ ಜೈ ಭೀಮ್ ನಗರದ ಕಿರಣ್, ಮಂಜುನಾಥ್ ಸೇರಿ ಹಲವರು ಪೊಲೀಸ್ ಠಾಣೆಗೆ ಬಂದು ಪ್ರೇಮಿಗಳಿಬ್ಬರ ಬಳಿ ಮಾತನಾಡುವಾಗ ಹುಡುಗಿಯ ಸಹೋದರ ಬಂದು ನನ್ನ ತಂಗಿಯ ಪ್ರೇಮಕ್ಕೆ ನೀವೆಲ್ಲಾ ಬೆಂಬಲ ನೀಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ಸ್ಥಳದಲ್ಲಿದ್ದವರು ಗಲಾಟೆ ತಡೆದು ಮನೆಗೆ ಕಳುಹಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹುಡುಗಿಯ ಸಹೋದರ, ರಾತ್ರಿ ಕಿರಣ್, ಮಂಜುನಾಥ್ ಮನೆಯ ಬಳಿ ಬಂದು ಗಲಾಟೆ ತೆಗೆದಿದ್ದಾನೆ.

ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ನನ್ನ ತಂಗಿ ತನ್ನ ಪ್ರೇಮಿಯ ಜೊತೆ ಓಡಿ ಹೋಗಲು ನೀವೇ ಮುಖ್ಯ ಕಾರಣ ಎಂದು ತಾನು ತಂದಿದ್ದ ಚಾಕುವಿನಿಂದ ಕಿರಣ್ ಹಾಗೂ ಮಂಜುನಾಥನಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ಧಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೌರ ಕಾರ್ಮಿಕ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟರೆ, ಕಿರಣ್ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಪ್ರಕರಣ ಸಂಬಂಧ ಹಳೇ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಐವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದೇಶಕ್ಕೆ ಹೋಗಲು ತಂದೆ ಹೆಸರಲ್ಲಿ ₹70 ಲಕ್ಷದ ಇನ್ಶೂರೆನ್ಸ್​ ಪಡೆದು ಕೊಲೆ ಮಾಡಿಸಿದ ಮಗ!

ವೃದ್ಧೆ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ: ಚಿನ್ನಾಭರಣದ ಆಸೆಗೆ ವೃದ್ಧೆಯನ್ನು ಕೊಂದ ವ್ಯಕ್ತಿಯೊಬ್ಬನಿಗೆ ಶಿವಮೊಗ್ಗ 3ನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ನೀಡಿದೆ. ತೀರ್ಥಹಳ್ಳಿ ತಾಲೂಕು ಲಿಂಗಾಪುತ ಗ್ರಾಮದ ಕಿರಣ್(27) ಜೀವಾವಧಿ ಶಿಕ್ಷೆಗೆ ಒಳಗಾದ ವ್ಯಕ್ತಿ.

2021ರಲ್ಲಿ ನಡೆದ ಘಟನೆ ಇದಾಗಿದೆ. ಹಣ ಕೇಳಿದರೆ ಕೊಡಲಿಲ್ಲ ಎಂಬ ಕಾರಣಕ್ಕೆ ಕಿರಣ್ ಕೋಪಗೊಂಡು ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ, ಕೊಂದು ಹಾಕಿದ್ದ. ನಂತರ ವೃದ್ಧೆಯ ಮೈಮೇಲಿದ್ದ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಮಾಳೂರು ಪೊಲೀಸ್ ಠಾಣೆಯ ಸಿಪಿಐ ಪ್ರವೀಣ್ ನೀಲಮ್ಮನವರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ನ್ಯಾಯಾಲಯ, ತೀರ್ಪು‌ ನೀಡಿದೆ. ಪ್ರಕರಣದಲ್ಲಿ ಕಿರಣ್​ಗೆ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ. ಸರ್ಕಾರಿ ವಕೀಲ ಶಾಂತರಾಜ್ ವಾದ ಮಂಡಿಸಿದ್ದರು.