ETV Bharat / state

ಚಿಕ್ಕಮಗಳೂರು ನಗರ ಪ್ರದೇಶದ ಹತ್ತಿರ ಬಂದ ಜೋಡಿ ಕಾಡಾನೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿಕ್ಕಮಗಳೂರಲ್ಲಿ ಕಾಡಾನೆ ಆತಂಕ ಮುಂದುವರಿದಿದೆ. ನಗರದ ಪ್ರದೇಶದ ಪಕ್ಕದಲ್ಲೇ ಜೋಡಿ ಕಾಡಾನೆಗಳು ಕಂಡುಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

CHIKKAMAGALURU  WILD ELEPHANTS  ELEPHANT ATTACK  CCTV VIDEO ELEPHANTS SPOTTED IN CHIKKAMAGALURU
ಚಿಕ್ಕಮಗಳೂರು ನಗರ ಪ್ರದೇಶದ ಹತ್ತಿರ ಬಂದ ಜೋಡಿ ಕಾಡಾನೆ (ETV Bharat)
author img

By ETV Bharat Karnataka Team

Published : February 27, 2026 at 11:43 AM IST

2 Min Read
Choose ETV Bharat

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಆತಂಕ ಮೂಡಿಸಿದ್ದ ಕಾಡಾನೆಗಳು ಈಗ ಚಿಕ್ಕಮಗಳೂರು ನಗರ ಪ್ರದೇಶದ ಪಕ್ಕದಲ್ಲೇ ಬೀಡು ಬಿಟ್ಟಿವೆ. ಎರಡು ಕಾಡಾನೆಗಳು ನಗರದಿಂದ ಕೇವಲ ನಾಲ್ಕು ಕಿಮೀ ದೂರದಲ್ಲಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.

ಕಾಫಿ ತೋಟಕ್ಕೆ ನುಗ್ಗಿದ ಜೋಡಿ ಕಾಡಾನೆಗಳು ತೋಟವನ್ನು ನಾಶ ಮಾಡಿವೆ. ಈ ಎರಡು ಕಾಡಾನೆಗಳ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತೋಟದ ಮಾಲೀಕರು ಆತಂಕಗೊಂಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಇದೇ ರಸ್ತೆಯಲ್ಲಿ ಭೀಮ ಕಾಡಾನೆ ನಡೆದುಕೊಂಡು ಬಂದು ಕಾಫಿ ತೋಟದ ಗೇಟ್ ಸಂಪೂರ್ಣ ಪುಡಿ ಪುಡಿ ಮಾಡಿ, ತೋಟವನ್ನು ನಾಶ ಮಾಡಿ ಹೋಗಿದ್ದ. ಅದಾದ ನಂತರ ಈಗ ಜಂಟಿಯಾಗಿ ಎರಡು ಕಾಡಾನೆಗಳು ಇದೇ ಜಾಗಕ್ಕೆ ಬಂದು ರೈತರ ನಿದ್ದೆಗೆಡಿಸಿವೆ.

ಚಿಕ್ಕಮಗಳೂರು ನಗರ ಪ್ರದೇಶದ ಹತ್ತಿರ ಬಂದ ಜೋಡಿ ಕಾಡಾನೆ (ETV Bharat)

ಈ ಎರಡು ಕಾಡಾನೆಗಳ ಮೇಲೆ ನಿಗಾ ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ, ಜನರಲ್ಲಿ ಕಾಡಾನೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯು ಇದು ಅತ್ಯಂತ ಎಮರ್ಜೆನ್ಸಿ ಅಲರ್ಟ್ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ.

ಈ ಗ್ರಾಮಗಳಿಗೆ ಎಚ್ಚರಿಕೆ: ಈ ಎರಡು ಕಾಡಾನೆಗಳು ಕಬ್ಬಿನಹಳ್ಳಿ ಸುತ್ತ ಕಂಡು ಬಂದಿದ್ದು, ಸುತ್ತಮುತ್ತ ಸಂಚರಿಸುತ್ತಿವೆ. ಉಳುವಗಿಲು, ಹುಕ್ಕುಂದ, ಕಡಬನಹಳ್ಳಿ, ಇಂದಾವರ, ತಳಿಹಳ್ಳಿ, ಜಾಕನಹಳ್ಳಿ, ಚಿಕ್ಕೋಳಲೆ, ಹಿರಿಕೊಳಲೆ ಗ್ರಾಮಗಳ ಸುತ್ತಮುತ್ತ ಇರುವ ಗ್ರಾಮಸ್ಥರು ಹಾಗೂ ವಾಹನ ಸವಾರರು, ಬೆಳಗ್ಗಿನ ಸಮಯದಲ್ಲಿ ತೋಟಗಳಿಗೆ ಹೋಗುವ ರೈತರು, ಕಾರ್ಮಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಚಿಕ್ಕಮಗಳೂರು ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯ ಪಡೆ ಪ್ರಕಟಣೆಯಲ್ಲಿ ಸೂಚನೆ ನೀಡಿದೆ.

ಈ ಪ್ರಕಟಣೆಯ ಬೆನ್ನಲ್ಲೇ ಇಂದಾವರ ಗ್ರಾಮದ ಮಂಜಣ್ಣ ಎಂಬುವರ ಕಾಫಿ ತೋಟಕ್ಕೆ ಕಾಡಾನೆಗಳು ನುಗ್ಗಿ ಸಂಪೂರ್ಣವಾಗಿ ನಾಶ ಮಾಡಿವೆ.

ಸಾರ್ವಜನಿಕರು, ಕಾಫಿ ತೋಟದ ಮಾಲೀಕರು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳ ಸುತ್ತ ಮುತ್ತ ಕಾಡನೆಗಳ ಸಂಚಾರ ಇರುವ ಕಾರಣ ಯಾರು ಕೂಡ ರಾತ್ರಿ ಸಮಯದಲ್ಲಿ ತೋಟಗಳಿಗೆ ನೀರು ಹಾಯಿಸುವುದಕ್ಕಾಗಿ ಹಾಗೂ ಬೆಳಗಿನ ಸಮಯದಲ್ಲಿ ತೋಟಗಳಿಗೆ ಹೋಗುವುದು ಸೇರಿ ಕೃಷಿ ಚಟುವಟಿಕೆಗಳನ್ನು ಮಾಡಬಾರದು. ಯಾರು ಕೂಡ ರಾತ್ರಿ ಸಮಯದಲ್ಲಿ ವಿನಾಕಾರಣ ಓಡಾಡಬಾರದು. ಜೊತೆಗೆ ತಮ್ಮ ಗ್ರಾಮಗಳ ಸುತ್ತ ಕಾಡಾನೆಗಳ ಓಡಾಟ ಕಂಡು ಬಂದಲ್ಲಿ ಕೂಡಲೇ ಚಿಕ್ಕಮಗಳೂರಿನ ಆನೆ ಕಾರ್ಯ ಪಡೆಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಸಂಪರ್ಕಿಸಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಇದೇ ತಿಂಗಳಲ್ಲಿ ಒಂದೇ ವಾರದಲ್ಲಿ ಇಬ್ಬರು ಕಾರ್ಮಿಕರು ಆನೆ ದಾಳಿಗೆ ಬಲಿಯಾದ ಘಟನೆ ನಡೆದಿದೆ. ಆ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.

ಇದನ್ನೂ ಓದಿ:

ಚಿಕ್ಕಮಗಳೂರು ಕಾಡಾನೆ ದಾಳಿ - ಮಹಿಳೆ ಸಾವು: ​ರೊಚ್ಚಿಗೆದ್ದ ವಿವಿಧ ಸಂಘಟನೆಗಳು, ಇಂದು ಮೂರು ತಾಲೂಕುಗಳು ಬಂದ್!

ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ: ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್