ಮೇ ಅಂತ್ಯಕ್ಕೆ ತುಂಗಭದ್ರಾ ಡ್ಯಾಂ 23 ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣ: ಸಚಿವ ಎನ್.ಎಸ್.ಬೋಸರಾಜು
ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್‌ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಕ್ರಸ್ಟ್ ಗೇಟ್ ಅಳವಡಿಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

Published : March 21, 2026 at 7:06 AM IST
ವಿಜಯನಗರ: ಈಗಾಗಲೇ 18 ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 23 ಗೇಟ್‌ಗಳ ಕೆಲಸ ಮುಗಿಯುವ ನಿರೀಕ್ಷೆಯಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವನ್ನು ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಜಲಾಶಯದ ಮೇಲ್ಭಾಗಕ್ಕೆ ತೆರಳಿ, ತಾಂತ್ರಿಕ ತಂಡವು ನಡೆಸುತ್ತಿರುವ ಗೇಟ್ ಅಳವಡಿಕೆಯ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಎನ್.ಎಸ್.ಬೋಸರಾಜು ಖುದ್ದು ವೀಕ್ಷಿಸಿದರು.
ಎಕ್ಸ್ಪರ್ಟ್ ಟೀಮ್ ಮತ್ತು ಚೀಫ್ ಎಂಜಿನಿಯರ್‌ಗಳ ಪ್ರಕಾರ, ಗೇಟ್ ಬದಲಾವಣೆಯ ಸಮಯದಲ್ಲಿ ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್‌ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಕ್ರಸ್ಟ್ ಗೇಟ್ ಅಳವಡಿಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದ್ದು, ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲದ ವೇಳೆಗೆ ಜಲಾಶಯ ಸಂಪೂರ್ಣ ಸಿದ್ಧವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ 'ನವಲಿ' ಯೋಜನೆಯ ಪ್ರಸ್ತಾವನೆಯನ್ನು ಮಂಡಳಿ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೂ ಸಹ ಪತ್ರ ವ್ಯವಹಾರ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದ್ದು, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈ ಬಗ್ಗೆ ರಾಜ್ಯದ ವಿವಿಧ ಚುನಾಯಿತ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಿದೆ. ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ಪ್ರಕ್ರಿಯೆಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಪೊಲೀಸ್ ಅಧೀಕ್ಷಕ ಡಾ.ಮಂಜುನಾಥ್, ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿಗಳಾದ ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ ಅಳವಡಿಕೆಗೆ ಪೂಜೆ ಸಂಪನ್ನ: ತಿಂಗಳಿಗೆ 8 ಗೇಟ್ ಅಳವಡಿಕೆ, 5 ತಂಡಗಳಿಂದ ಕಾರ್ಯ

