ತ್ರಿಬಲ್ ಮರ್ಡರ್ ಪ್ರಕರಣ: ಹತ್ಯೆ ಬಳಿಕ ಶವ ಸಾಗಿಸಲು ದೊಡ್ಡ ಬೀನ್ ಬ್ಯಾಗ್ ಖರೀದಿಸಿದ್ದ ಆರೋಪಿಗಳು
ತ್ರಿಬಲ್ ಮರ್ಡರ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ರೋಚಕ ತಿರುವು ಸಿಗುತ್ತಿವೆ.

Published : July 9, 2026 at 4:13 PM IST
ಬೆಂಗಳೂರು: ಕೆ.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ತ್ರಿವಳಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ರೋಚಕ ತಿರುವು ಸಿಗುತ್ತಿವೆ.
ಪೊಲೀಸ್ ವಶದಲ್ಲಿರುವ ಆರೋಪಿಗಳಾದ ಶ್ವೇತಾ ಮತ್ತು ಕೆನತ್, ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾರೆ. ಇಡೀ ಕುಟುಂಬವನ್ನೇ ಮುಗಿಸಲು ಕಳೆದ 6 ತಿಂಗಳಿಂದಲೇ ಸ್ಕೆಚ್ ಹಾಕಲಾಗಿತ್ತು ಎಂಬ ಘಾತುಕ ಸತ್ಯ ಬಯಲಾಗಿದೆ. ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿ ಸಾಕ್ಷಿ ನಾಶಪಡಿಸಲು ಈ ಖತರ್ನಾಕ್ ಜೋಡಿ ಮಾಡಿದ್ದ ಪ್ಲಾನ್ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.
ಹತ್ಯೆ ಬಳಿಕ ಶವಗಳನ್ನ ಸಾಗಿಸಲು ಹೆತ್ತ ತಂದೆ, ತಾಯಿ ಮತ್ತು ಒಡಹುಟ್ಟಿದ ತಂಗಿಯನ್ನೇ ರಾಕ್ಷಸರಂತೆ ಕೊಂದಿದ್ದ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್, ಕೆ.ಆರ್. ಪುರ ಪೊಲೀಸರ ಎದುರು ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಆರು ತಿಂಗಳಿಂದಲೇ ಇಡೀ ಕುಟುಂಬವನ್ನು ಜಗತ್ತಿನಿಂದಲೇ ಇಲ್ಲದಂತೆ ಮಾಡಲು ಈ ಜೋಡಿ ಪ್ಲಾನ್ ರೂಪಿಸಿತ್ತು. ಕೊಲೆ ಮಾಡಲು ಖತರ್ನಾಕ್ ಐಡಿಯಾ ಕೊಟ್ಟಿದ್ದೇ ಮಗಳು ಶ್ವೇತಾ. ಈಕೆಯ ಐಡಿಯಾಗೆ ಪ್ರಿಯಕರ ಕೆನತ್ ಮತ್ತೊಂದಿಷ್ಟು ಕ್ರಿಮಿನಲ್ ಐಡಿಯಾಗಳನ್ನು ಸೇರಿಸಿ ಇಡೀ ಸ್ಕೆಚ್ ರೆಡಿ ಮಾಡಿದ್ದ. ಸೀಗೇಹಳ್ಳಿಯ ಫ್ಲಾಟ್‌ನಲ್ಲಿ ಕೊಲೆ ಮಾಡಿ, ದೊಡ್ಡನೆಕ್ಕುಂದಿಯ ಫ್ಲ್ಯಾಟ್‌ನಲ್ಲಿ ಶವಗಳನ್ನು ವಿಲೇವಾರಿ ಮಾಡಲು ಇಬ್ಬರೂ ಮಾಸ್ಟರ್ ಪ್ಲಾನ್ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಜೋಡಿಯ ಪ್ಲಾನ್ ಎಷ್ಟರಮಟ್ಟಿಗೆ ಇತ್ತೆಂದರೆ, ಕೊಲೆ ಮಾಡಿದ ಬಳಿಕ ಮೂರೂ ಮೃತದೇಹಗಳನ್ನು ಯಾರಿಗೂ ಸಂಶಯ ಬಾರದಂತೆ ಸಾಗಿಸಲು ದೊಡ್ಡ ಬೀನ್ ಬ್ಯಾಗ್‌ಗಳನ್ನು ಖರೀದಿಸಿದ್ದರು. ಶವಗಳನ್ನು ಕತ್ತರಿಸಿ, ಆ ಬೀನ್ ಬ್ಯಾಗ್‌ಗಳಲ್ಲಿ ತುಂಬಿಸಿ ಸಾಗಿಸುವುದು ಪ್ಲಾನ್ ಆಗಿತ್ತು. ಇಷ್ಟೇ ಅಲ್ಲ, ಭಾರವಾದ ಆ ಬೀನ್ ಬ್ಯಾಗ್‌ಗಳನ್ನು ಸುಲಭವಾಗಿ ಸಾಗಿಸಲು ಟ್ರಾಲಿಯೊಂದನ್ನು ಕೂಡ ಖರೀದಿಸಿ ತಂದಿಟ್ಟುಕೊಂಡಿದ್ದರು. ಟ್ರಾಲಿಯಲ್ಲಿ ಶವ ತುಂಬಿದ ಬೀನ್ ಬ್ಯಾಗ್ ಇಟ್ಟುಕೊಂಡು ದೊಡ್ಡನೆಕ್ಕುಂದಿ ಫ್ಲ್ಯಾಟ್‌ಗೆ ಸಾಗಿಸಲು ಹಂತಕ ಜೋಡಿ ಸಂಪೂರ್ಣವಾಗಿ ಸಜ್ಜಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ದೊಡ್ಡನೆಕ್ಕುಂದಿ ಫ್ಲ್ಯಾಟ್‌ಗೆ ಮೃತದೇಹಗಳನ್ನು ತಂದ ಬಳಿಕ, ಅವುಗಳನ್ನು ಅಲ್ಲಿಯೇ ಸುಟ್ಟು ಬೂದಿ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು. ಇದಕ್ಕಾಗಿಯೇ ಮೊದಲೇ ಕಟ್ಟಿಗೆಗಳನ್ನು ಖರೀದಿಸಿ ಫ್ಲ್ಯಾಟ್‌ನಲ್ಲಿ ಇಡಲಾಗಿತ್ತು. ಫ್ಲ್ಯಾಟ್‌ನೊಳಗೆ ಶವ ಸುಟ್ಟರೆ ವಿಪರೀತ ಹೊಗೆ ಬರುತ್ತದೆ, ಇದರಿಂದ ನೆರೆಹೊರೆಯವರಿಗೆ ಸಂಶಯ ಬರಬಹುದು ಎಂದು ಯೋಚಿಸಿದ್ದ ಆರೋಪಿಗಳು, ಮನೆಯಿಂದ ಹೊಗೆ ತಕ್ಷಣವೇ ಆಚೆ ಹೋಗುವಂತೆ ಮಾಡಲು ಹೈ-ಪವರ್ ಎಕ್ಸಾಸ್ಟ್ ಫ್ಯಾನ್‌ಗಳನ್ನೂ ಕೂಡ ಅಳವಡಿಸಿದ್ದರು. ಆದರೆ, ಇಷ್ಟೆಲ್ಲಾ ಪಕ್ಕಾ ಪ್ಲಾನ್ ಮಾಡಿದ್ದ ಇವರಿಗೆ ವಿಧಿ ಬೇರೆಯದೇ ಆಟ ಆಡಿಸಿತ್ತು. ಶ್ವೇತಾಳ ತಂದೆ ಸೋಮಸುಂದರ್ ದಾಳಿಯಿಂದ ತಪ್ಪಿಸಿಕೊಂಡು ರಕ್ತಸಿಕ್ತ ಸ್ಥಿತಿಯಲ್ಲೇ ಮನೆಯಿಂದ ಆಚೆ ಓಡಿಬಂದಿದ್ದರಿಂದ ಹಂತಕರ ಇಡೀ ಪ್ಲಾನ್ ಒಂದೇ ಕ್ಷಣದಲ್ಲಿ ಫ್ಲಾಪ್ ಆಗಿದೆ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು ತ್ರಿವಳಿ ಕೊಲೆ ಪ್ರಕರಣ: ತಲೆತಪ್ಪಿಸಿಕೊಂಡಿದ್ದ ಕೆನತ್ ಬಂಧಿಸಿದ ಪೊಲೀಸರು

