ETV Bharat / state

ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಸಚಿವ ಬೈರತಿ ಸುರೇಶ್ ದಿಢೀರ್ ಭೇಟಿ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ!

ಸಾರಿಗೆ ಸಚಿವ ಬೈರತಿ ಸುರೇಶ್ ಸೋಮವಾರ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ದಿಢೀರ್ ಭೇಟಿ ನೀಡಿ ಪ್ರಯಾಣಿಕರೊಂದಿಗೆ ನೇರವಾಗಿ ಸಂವಾದ ನಡೆಸಿದರು.

MINISTER BYRATHI SURESH MAKES SURPRISE VISIT TO MAJESTIC BUS STATIONS, ORDERS DOCTOR FOR BMTC CLINIC
ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿದ ಸಚಿವ ಬೈರತಿ ಸುರೇಶ್ (ETV Bharat)
author img

By ETV Bharat Karnataka Team

Published : August 31, 2026 at 8:25 PM IST

2 Min Read
Choose ETV Bharat

ಬೆಂಗಳೂರು : ಮೆಜೆಸ್ಟಿಕ್‌ನಲ್ಲಿನ ಕೆಎಸ್ಆರ್‌ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಮತ್ತು ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ನಿಲ್ದಾಣಗಳಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಧ್ಯಾಹ್ನ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಸಚಿವರು, ವಿವಿಧ ಪ್ರದೇಶಗಳಿಗೆ ತೆರಳುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಪ್ರಯಾಣಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿದರು. ಕಲ್ಲಿನ ಬೆಂಚ್ ಮೇಲೆ ಕುಳಿತು ಬಸ್‌ಗಳಿಗಾಗಿ ಕಾಯುತ್ತಿರುವ ಪ್ರಯಾಣಿಕರೊಂದಿಗೆ ಕೆಲವು ಹೊತ್ತು ಮಾತುಕತೆ ಕೂಡ ನಡೆಸಿದರು. ನಿಲ್ದಾಣದ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಬಗ್ಗೆ ಬಹುತೇಕ ಪ್ರಯಾಣಿಕರು ತೃಪ್ತಿ ವ್ಯಕ್ತಪಡಿಸಿದ್ದು, ನಿಲ್ದಾಣಗಳ ನಿರ್ವಹಣೆ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Transport Minister Byrathi Suresh Makes Surprise Visit to Majestic Bus Stations, Orders Doctor for BMTC Clinic
ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿದ ಕ್ಷಣ (ETV Bharat)

ತಮ್ಮ ಈ ಭೇಟಿಯ ವೇಳೆ ಬಿಎಂಟಿಸಿ ನಿಲ್ದಾಣದಲ್ಲಿರುವ 'ನಮ್ಮ ಕ್ಲಿನಿಕ್'ನಲ್ಲಿ ವೈದ್ಯರಿಲ್ಲದಿರುವುದನ್ನ ಗಮನಿಸಿದ ಸಚಿವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿ ಕ್ಲಿನಿಕ್‌ಗೆ ವೈದ್ಯರನ್ನು ನಿಯೋಜಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಕಟ್ಟುನಿಟ್ಟಿನ ಆದೇಶ ನೀಡಿದರು. ಇದೇ ವೇಳೆ, ಪ್ರಯಾಣಿಕರಿಗೆ ಅಗತ್ಯವಿರುವ ಕಡೆಗಳಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

​ಇನ್ನು ನಿಲ್ದಾಣದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿದ ಸಚಿವರು, ಪ್ರಯಾಣಿಕರಿಂದ ಯಾವುದೇ ಕಾರಣಕ್ಕೂ ಉತ್ಪನ್ನಗಳಿಗೆ ಹೆಚ್ಚುವರಿ ದರ ವಸೂಲಿ ಮಾಡಬಾರದು ಎಂದು ಎಚ್ಚರಿಸಿದರು. ಲಗೇಜ್ ಕೌಂಟರ್‌ಗಳಲ್ಲೂ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯದಂತೆ ನೋಡಿಕೊಳ್ಳಲು ಸೂಚಿಸಿದರು.

Transport Minister Byrathi Suresh Makes Surprise Visit to Majestic Bus Stations, Orders Doctor for BMTC Clinic
ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಸಚಿವ ಬೈರತಿ ಸುರೇಶ್ (ETV Bharat)

ಬಳಿಕ ಬಿಎಂಟಿಸಿ ವಿದ್ಯಾರ್ಥಿ ಪಾಸ್ ಕೌಂಟರ್‌ಗೆ ಭೇಟಿ ನೀಡಿದ ಸಚಿವರು, ಕಂಪ್ಯೂಟರ್ ಬಳಿ ಕುಳಿತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಉಚಿತ ಬಸ್ ಪಾಸ್ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದರು.

ಇದನ್ನೂ ಓದಿ: ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಹೆಚ್ಚಿನ ಆದ್ಯತೆ

ಮಾಸ್ಕ್ ಧರಿಸಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಚಿಲ್ಲರೆ ಕೊಡದಿದ್ದಕ್ಕೆ ಬಸ್​​​ನಿಂದ‌ ಕೆಳಗಿಳಿಸಿದ ಕಂಡಕ್ಟರ್!

ಸಾರಿಗೆ ಸಚಿವ ಬೈರತಿ ಸುರೇಶ್ ಜುಲೈ 11ರ ಶನಿವಾರ ರಾತ್ರಿ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದ್ದರು. ಮಾಸ್ಕ್ ಧರಿಸಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿ ಪರಿಶೀಲನೆ ಕೈಗೊಂಡಿದ್ದರು.

ಈ ವೇಳೆ, ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವ ಬೈರತಿ ಸುರೇಶ್ ಅವರು ಬಸ್ ಸಂಚಾರ ಮಾಡುವಾಗ ಎರಡು ಟಿಕೆಟ್ ನೀಡುವಂತೆ ಕೇಳಿ, 100 ರೂಪಾಯಿ ನೋಟು ನೀಡಿದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿ ಚಿಲ್ಲರೇ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದರು. ಇದಕ್ಕೆ ಮರು ಮಾತಾನಾಡದೇ ಸಚಿವರು ಕೆಳಗಿಳಿದಿದ್ದರು.

ರಾತ್ರಿ 7:10ಯಿಂದ 9:10ರವರೆಗೆ ಜಯಮಹಲ್ ನಿಂದ ಟಿವಿ ಟವರ್, ಟಿವಿ ಟವರ್‌ನಿಂದ ಆರ್​​ಟಿ ನಗರ, ಆರ್​​ಟಿ ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್ ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್ ನಿಂದ ಮಸೀದಿ ಸ್ಟಾಪ್ ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ, ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10ಕ್ಕೂ ಹೆಚ್ಚು ಬಸ್​​ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಪರಿಶೀಲನೆ ನಡೆಸಿದ್ದರು.

ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್ ಗೆ ಆಗಲೀ ಇವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ. ಪ್ರತಿಯೊಂದು ಬಸ್ ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿದ್ದರು.