ETV Bharat / state

ಮೈಸೂರು: ಆಗಾಗ ಕಾಣಿಸಿಕೊಳ್ಳುತ್ತಿದ್ದ ಹುಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆ

ಅರಣ್ಯ ಇಲಾಖೆಯವರು ಹುಲಿ ಸೆರೆಗೆ ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸಿದ್ದರಿಂದ ಹುಲಿ ಸೆರೆಯಾಗಿದೆ.

TIGER CAPTURED IN FOREST DEPARTMENT CAGE, HD KOTE OF MYSURU
ಸೆರೆ ಸಿಕ್ಕ ಹುಲಿ. (ETV Bharat)
author img

By ETV Bharat Karnataka Team

Published : August 31, 2026 at 2:19 PM IST

2 Min Read
Choose ETV Bharat

ಮೈಸೂರು: ಹೆಚ್.ಡಿ. ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರ ಆತಂಕವನ್ನು ದೂರ ಮಾಡಿದೆ.

ಹುಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಬೋನ್ ಅಳವಡಿಸಿದ್ದರು. ಇದೀಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹುಲಿ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೊಸಹೊಳಲು ಗ್ರಾಮದ ಸುತ್ತಮುತ್ತ ಹುಲಿ ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಚಲನವಲನದ ಮೇಲೆ ನಿಗಾ ವಹಿಸಿ, ಹುಲಿ ಸೆರೆಗೆ ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸಿದ್ದರು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹುಲಿ ಸೆರೆಯಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ದೂರವಾಗಿದ್ದು, ಇದೀಗ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

ಅರಣ್ಯ ಇಲಾಖೆಯ ಬೋನಿನಲ್ಲಿ ಹುಲಿ. (ETV Bharat)

ಈ ಕುರಿತು ಈಟಿವಿ ಭಾರತ್​ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಹೊಸಹೊಳಲು ಗ್ರಾಮದ ಗ್ರಾಮಸ್ಥ ರಂಗರಾಜು, "ಹಲವು ದಿನಗಳಿಂದ ಆಗಾಗ ಗ್ರಾಮದ ಹೊರವಲಯದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಭಯಭೀತರಾಗುತ್ತಿದ್ದರು. ಅರಣ್ಯ ಇಲಾಖೆಗೆ ಹುಲಿ ಸೆರೆ ಹಿಡಿಯುವಂತೆ ಮನವಿ ಮಾಡಲಾಗಿತ್ತು. ಅವರು ಮೂರು ದಿನದ ಹಿಂದೆ ಬೋನು ಇಟ್ಟಿದ್ದಿರು‌. ಸೋಮವಾರ ಬೆಳಗ್ಗೆ ಹುಲಿ ಸೆರೆಯಾಗಿದ್ದು, ಇದರಿಂದ ಆತಂಕ ದೂರವಾಗಿದೆ" ಎಂದರು.

ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ದಮ್ಮನಕಟ್ಟೆ ಆರ್​ಎಫ್​ಒ ಹನುಮಂತರಾಜು ಅವರು, "ಸೆರೆ ಸಿಕ್ಕಿರುವ ಹುಲಿಯನ್ನು, ಕಬಿನಿ ಹಿನ್ನೀರಿನ ಪ್ರದೇಶದಲ್ಲಿರುವ ಕಾಕನಕೋಟೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು" ಎಂದರು‌.

ಇದನ್ನೂ ಓದಿ: ಚಾಮರಾಜನಗರ: ಸೂರ್ಯಕಾಂತಿ ಬೆಳೆ ನಡುವೆ ಹುಲಿ ಕಳೇಬರ ಪತ್ತೆ

3 ವರ್ಷದ ಗಂಡು ಹುಲಿಯ ಕಳೇಬರ ಪತ್ತೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ವಲಯ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 6 ದಿನದ ಹಿಂದೆ ಸುಮಾರು 3 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು.

ರೈತರೊಬ್ಬರು ತಮ್ಮ ಜಮೀನಿನಲ್ಲಿ ಸೂರ್ಯಕಾಂತಿ ಫಸಲು ಕಟಾವಿಗೆ ಹೋದ ಸಂದರ್ಭದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿ ಕಳೇಬರ ಕಂಡು ಬಂದಿತ್ತು. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ನೇತೃತ್ವದಲ್ಲಿ ಹುಲಿಯ ಉಗುರುಗಳು, ಹಲ್ಲು ಎಲ್ಲವನ್ನೂ ಶೇಖರಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹದ ಅಂಗಾಂಗಗಳನ್ನು ಸಂಗ್ರಹಿಸಿ ಎಫ್​ಎಸ್​ಎಲ್​ಗೆ ಕಳುಹಿಸಲಾಗಿತ್ತು. ಬಳಿಕ ನಿಯಮಾನುಸಾರ ಹುಲಿಯ ಕಳೇಬರ ಸುಡಲಾಗಿದೆ.