ಬೆಳಗಾವಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವಾಗ ಆವರಿಸಿದ ದಟ್ಟ ಹೊಗೆ: ಉಸಿರುಗಟ್ಟಿ ಮೂವರು ಯುವಕರ ದುರ್ಮರಣ
ಚಳಿ ಕಾಯಿಸಲೆಂದು ಹಾಕಿದ್ದ ಬೆಂಕಿಯಿಂದ ಉಂಟಾದ ಹೊಗೆ ಪ್ರಾಣವನ್ನೇ ತೆಗೆದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Published : November 18, 2025 at 9:27 PM IST
ಬೆಳಗಾವಿ: ಕೊರೆಯುವ ಚಳಿ ಹಿನ್ನೆಲೆ ರೂಮಿನಲ್ಲಿ ಇದ್ದಿಲಿನ ಬೆಂಕಿ ಕಾಯಿಸುತ್ತಾ ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ರೂಮಿನಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದರು. ನಿದ್ರೆಗೆ ಜಾರಿದಾಗ ರೂಮಿನಲ್ಲಿ ದಟ್ಟ ಹೊಗೆ ಆವರಿಸಿದೆ. ಈ ವೇಳೆ ಉಸಿರಾಟದ ಸಮಸ್ಯೆ ಉಂಟಾಗಿ ಸಾವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.
ಅಮನ್ ನಗರದ ನಿವಾಸಿಗಳಾದ ರಿಹಾನ್ ಮತ್ತೆ(22), ಮೋಹಿನ್ ನಾಲಬಂದ್(23), ಸರ್ಫರಾಜ್ ಹರಪನಹಳ್ಳಿ(22) ಸಾವನ್ನಪ್ಪಿದರೆ ಮತ್ತೋರ್ವ ಯುವಕ ಶಾಹನವಾಜ್(19) ಸ್ಥಿತಿ ಗಂಭೀರವಾಗಿದೆ. ಗಾಯಾಳು ಯುವಕನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಘಟನೆಯಿಂದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು, ಸೋಕೊ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶಾಸಕ ಆಸೀಫ್ ಸೇಠ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.
ಇದನ್ನೂ ಓದಿ: ಕೃಷ್ಣಮೃಗಗಳ ಸರಣಿ ಸಾವಿನ ಬಳಿಕ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದ ಪರಿಸ್ಥಿತಿ ಹೇಗಿದೆ? ಪ್ರತ್ಯಕ್ಷ ವರದಿ

