ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ: ಚಾಲಕ ಸೇರಿ ಮೂವರು ಅಮಾನತು
ಮೊಬೈಲ್ ಟಾರ್ಚ್ ಬಳಸಿ ಬಸ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸ್ ಚಾಲಕ ಸೇರಿದಂತೆ ಮೂವರು ಸಾರಿಗೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

Published : July 6, 2026 at 6:57 PM IST
ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಬಸ್ ಚಾಲನೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದ ನಿಯಂತ್ರಣಾಧಿಕಾರಿಗಳು, ಚಾಲಕ ಸೇರಿದಂತೆ ಮೂವರು ಸಾರಿಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜುಲೈ 4ರಂದು ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸಿರಲಿಲ್ಲ. ಈ ವೇಳೆ ನಿರ್ವಾಹಕ ಹಾಗೂ ಕೆಲ ಪ್ರಯಾಣಿಕರು ಮೊಬೈಲ್ ಟಾರ್ಚ್ ಬೆಳಕಿನ ನೆರವು ನೀಡಿದ್ದು, ಅದೇ ಬೆಳಕಿನಲ್ಲಿ ಬಸ್ ಚಿಂಚೋಳಿ ತಲುಪಿದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಟಾರ್ಚ್ ಹಾಕುವ ದೃಶ್ಯ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಘಟನೆಯನ್ನು ಪರಿಶೀಲಿಸಿದ ಕೆಕೆಆರ್‌ಟಿಸಿ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ, ಬಸ್‌ನ ಹೆಡ್‌ಲೈಟ್ ದೋಷವನ್ನು ಸಮರ್ಪಕವಾಗಿ ದುರಸ್ತಿ ಮಾಡದ ಚಿಂಚೋಳಿ ಘಟಕದ ತಾಂತ್ರಿಕ ಸಿಬ್ಬಂದಿ ಶಿವಾನಂದ, ದುರಸ್ತಿ ಕಾರ್ಯವನ್ನು ಸೂಕ್ತವಾಗಿ ಪರಿಶೀಲಿಸದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ತಾಂತ್ರಿಕ ದೋಷವಿದ್ದರೂ ಬಸ್ ಚಾಲನೆ ಮಾಡಿದ ಚಾಲಕ ಆಕಾಶ್ ಅವರನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಹೆಡ್‌ಲೈಟ್ ಇಲ್ಲದೆ ಮೊಬೈಲ್ ಟಾರ್ಚ್‌ನಲ್ಲೇ ಸಾರಿಗೆ ಬಸ್ ಚಾಲನೆ; ವಿಡಿಯೋ ವೈರಲ್
ಮೂಲಗಳ ಪ್ರಕಾರ, ಕಲಬುರಗಿ - ಚಿಂಚೋಳಿ ಮಾರ್ಗದಲ್ಲಿ ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಡುವ ಏಂ-28 ಈ-1985 ಸಂಖ್ಯೆಯ ಕೆಕೆಆರ್‌ಟಿಸಿ ಬಸ್ ಇದಾಗಿದ್ದು, ಬಸ್ನಲ್ಲಿ ಹಲವು ಪ್ರಯಾಣಿಕರಿರುವುದು ವೈರಲ್ ಆದ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಮಾರ್ಗದ ಬಸ್ನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿದ್ದು, ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, ಇದುವರೆಗೆ ದುರಸ್ತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಕಲಬುರಗಿಯಿಂದ ಸುಮಾರು 84ಕಿ.ಮೀ ದೂರದ ಚಿಂಚೋಳಿಗೆ ತೆರಳುವ ಈ ಕೊನೆಯ ಬಸ್ನಲ್ಲಿ ಅನೇಕ ಪ್ರಯಾಣಿಕರು ಸಂಚರಿಸುತ್ತಾರೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಸ್ ಓಡಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಯಾಣಿಕರು, "ನಾವು ಚಿಂಚೋಳಿಯಿಂದ ಕಲಬುರಗಿಗೆ ಓಡಾಟ ಮಾಡುತ್ತೇವೆ. ಕಳೆದ ಸುಮಾರು ಒಂದು ತಿಂಗಳಿನಿಂದ ಈ ಮಾರ್ಗದಲ್ಲಿ ಸಂಚರಿಸುವ ಬಸ್ನಲ್ಲಿ ನಿರಂತರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ, ಅವರು ಗಂಭೀರವಾಗಿ ಪರಿಗಣಿಸಿಲ್ಲ. ಕಲಬುರಗಿಯಿಂದ ಚಿಂಚೋಳಿಗೆ ತೆರಳುವ ಕೊನೆಯ ಬಸ್ ಇದಾಗಿದ್ದು, ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಮಾಡಿಸಿ ಬಸ್ ರಸ್ತೆಗಿಳಿಸುತ್ತಿದ್ದಾರೆ. ಆದರೆ, ಶಾಶ್ವತ ಪರಿಹಾರ ಕಂಡುಕೊಳ್ಳುವ ಯಾವುದೇ ಕ್ರಮ ಕೈಗೊಂಡಿಲ್ಲ. ಕಲಬುರಗಿಯಿಂದ ಕಾಳಗಿವರೆಗೆ ಬಸ್‌ನ ಹೆಡ್‌ಲೈಟ್ ಮಂದವಾಗಿದ್ದರೂ, ಇತರ ವಾಹನಗಳ ಬೆಳಕು ಹಾಗೂ ಬೀದಿ ದೀಪಗಳ ನೆರವಿನಿಂದ ಬಸ್ ಸಂಚರಿಸಿತು. ಆದರೆ, ಕಾಳಗಿಯಿಂದ ಮುಂದೆ ಹೆಡ್‌ಲೈಟ್ ಬೆಳಕು ಇನ್ನಷ್ಟು ಮಂದವಾದ ಕಾರಣ, ರಸ್ತೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಟ್ರಾಫಿಕ್ ಹಾಗೂ ಬೀದಿ ದೀಪಗಳ ಬೆಳಕು ಕೂಡ ಇಲ್ಲದ ಪರಿಸ್ಥಿತಿಯಲ್ಲಿ, ಅನಿವಾರ್ಯವಾಗಿ ಕಂಡಕ್ಟರ್ ಮೊಬೈಲ್ ಟಾರ್ಚ್ ಬಳಸಬೇಕಾಯಿತು. ಪ್ರಯಾಣಿಕರ ಪ್ರಾಣದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ತಕ್ಷಣ ಬಸ್‌ನ ಸಂಪೂರ್ಣ ದುರಸ್ತಿ ನಡೆಸಿ, ಈ ಮಾರ್ಗಕ್ಕೆ ಹೊಸ ಹಾಗೂ ಸುಸ್ಥಿತಿಯ ಬಸ್ಸನ್ನು ನಿಯೋಜಿಸಬೇಕು'' ಎಂದಿದ್ದರು.
ಇದನ್ನೂ ಓದಿ:
ಇಸ್ರೋ ಕಚೇರಿಗೆ ಮತ್ತೆ ಹುಸಿ ಬಾಂಬ್ ಸಂದೇಶ: ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

