ETV Bharat / state

ಬೆಂಗಳೂರು: ಇಂಗು ಗುಂಡಿ ಶುಚಿಗೊಳಿಸುವಾಗ ಮೂರ್ಛೆ ತಪ್ಪಿ ಮೂವರು ಸಾವು

ಇಂಗು ಗುಂಡಿಗೆ ರಾಸಾಯನಿಕ ಸಿಂಪಡಿಸಿ‌ ಶುಚಿಗೊಳಿಸುತ್ತಿದ್ದಾಗ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ.

BENGALURU  ಇಂಗು ಗುಂಡಿ  DEATH  FAINTED
ಮೂವರ ಸಾವಿಗೆ ಕಾರಣವಾದ ಇಂಗು ಗುಂಡಿ (ETV Bharat)
author img

By ETV Bharat Karnataka Team

Published : March 1, 2026 at 7:41 AM IST

1 Min Read
Choose ETV Bharat

ಬೆಂಗಳೂರು: ಮಳೆ ನೀರಿನ ಇಂಗು ಗುಂಡಿ ಶುಚಿಗೊಳಿಸುವಾಗ ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ (ಶನಿವಾರ) ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ನಡೆದಿದೆ.

ಮುನಿಶಾಮಪ್ಪ (67), ರುದ್ರಕುಮಾರ್ (40) ಮತ್ತು ವಿಶ್ವನಾಥ್ ಆಚಾರಿ (24) ಮೃತರು. ವೈಟ್‌ಫೀಲ್ಡ್​ ಪೊಲೀಸ್‌ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.

ಮನೆ ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿಯನ್ನು ಬಳಸುತ್ತಿರಲಿಲ್ಲ. ಹೀಗಾಗಿ ಗುಂಡಿಯಲ್ಲಿ ತುಂಬಿಕೊಂಡಿದ್ದ, ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ದುರ್ವಾಸನೆ ಬರಲಾರಂಭಿಸಿತ್ತು. ರಾಸಾಯನಿಕ ಸಿಂಪಡಿಸಿ‌ ಶುಚಿಗೊಳಿಸಲು ಮುಂದಾಗಿದ್ದರು. ಈ ವೇಳೆ ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ.

ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್​​ ಸಹ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಮೂರ್ಛೆ ಹೋಗಿದ್ದಾನೆ. ವಿಶ್ವನಾಥ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಮೂವರನ್ನೂ ಅಕ್ಕಪಕ್ಕದ ಮನೆಯವರು ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದರಾದರೂ ಮಾರ್ಗಮಧ್ಯೆ ಮೂವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆ(ಗದಗ): ಗದಗ ತಾಲೂಕಿನ ಮುಳಗುಂದ ಪಟ್ಟಣದ ಹೊರವಲಯದಲ್ಲಿರುವ ಮಣ್ಣಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿ ಸಾವನ್ನಪ್ಪಿದ ದುರ್ಘಟನೆ ನಿನ್ನೆ ನಡೆದಿದೆ. ಮೃತರನ್ನು ಬಸವರಾಜ್ ಬಡಿಗೇರ್ (15) ಹಾಗೂ ಪರಶುರಾಮ ವಡ್ಡರ್ (15) ಎಂದು ಗುರುತಿಸಲಾಗಿದ್ದು, ಇಬ್ಬರೂ ಪಟ್ಟಣದ ಸಂಯುಕ್ತ ಕಿರಿಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆ ಮುಗಿಸಿಕೊಂಡು ಹಾಸ್ಟೆಲ್‌ಗೆ ತೆರಳುವ ಮುನ್ನ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಂಬೇಡ್ಕರ್ ವಸತಿ ನಿಲಯದ ಆರು ವಿದ್ಯಾರ್ಥಿಗಳು ಈಜಲು ತೆರಳಿದ್ದು, ಈ ಪೈಕಿ ಇಬ್ಬರು ಆಳವಾದ ನೀರಿಗೆ ಇಳಿದ ಪರಿಣಾಮ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಳಗುಂದ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಪಟ್ಟಣದಲ್ಲಿ ಶೋಕದ ವಾತಾವರಣ ಆವರಿಸಿದ್ದು, ವಿದ್ಯಾರ್ಥಿಗಳ ಅಕಾಲಿಕ ಸಾವಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ದುಃಖ ವ್ಯಕ್ತವಾಗಿದೆ. ಈ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ‌