ETV Bharat / state

ಉಡುಪಿ: ಹೀಗೊಂದು ಮಾನವೀಯತೆ; ವಾರಸುದಾರರು ಇಲ್ಲದ ಮೂರು ಮೃತದೇಹಗಳ ಅಂತ್ಯಸಂಸ್ಕಾರ

ವಾರಸುದಾರರಿಲ್ಲದ ಮೂವರ ಮೃತದೇಹವನ್ನು ವಿಶುಶೆಟ್ಟಿ ಅಂಬಲಪಾಡಿಯವರು ಬೀಡಿನಗುಡ್ಡೆಯಲ್ಲಿ ನೆರವೇರಿಸಿದ್ದಾರೆ.

Three-dead-bodies-cremation-at-udupi
ವಾರಸುದಾರರು ಇಲ್ಲದ ಮೂರು ಮೃತ ದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು (ETV Bharat)
author img

By ETV Bharat Karnataka Team

Published : February 26, 2026 at 8:26 PM IST

1 Min Read
Choose ETV Bharat

ಉಡುಪಿ : ತಿಂಗಳ ಹಿಂದೆ ಉಡುಪಿ ಪರಿಸರದಲ್ಲಿ ವಿಶುಶೆಟ್ಟಿ ಅಂಬಲಪಾಡಿಯವರಿಂದ ಬೇರೆ ಬೇರೆ ದಿನಗಳಲ್ಲಿ ರಕ್ಷಿಸಲ್ಪಟ್ಟ ಮೂರು ಜನ ಅಪರಿಚಿತ ವ್ಯಕ್ತಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಸಂಬಂಧಿಕರು ಪತ್ತೆಯಾಗದ ಕಾರಣ ಅವರ ಅಂತ್ಯಕ್ರಿಯೆಯನ್ನು ಇಂದು ಬೀಡಿನಗುಡ್ಡೆಯಲ್ಲಿ ವಿಶುಶೆಟ್ಟಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಕುಟ್ಟಮ್ (45 ವರ್ಷ) ಹಾಗೂ ಅಪರಿಚಿತ ವ್ಯಕ್ತಿಯೋರ್ವರು (40 ವರ್ಷ) ಉಡುಪಿ ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ರಕ್ಷಿಸಲ್ಪಟ್ಟಿದ್ದು, ಮತ್ತೋರ್ವ ಹಿರಿಯ ವ್ಯಕ್ತಿಯೊಬ್ಬರು ಉಡುಪಿಯಿಂದ ರಕ್ಷಿಸಲ್ಪಟ್ಟು, ಹೊಸಬೆಳಕು ಆಶ್ರಮದಲ್ಲಿ ನಿಧನ ಹೊಂದಿದ್ದರು.

ವಾರಸುದಾರರು ಇಲ್ಲದ ಮೂರು ಮೃತದೇಹಗಳ ಅಂತ್ಯಸಂಸ್ಕಾರ (ETV Bharat)

ಈ ಬಗ್ಗೆ ಮಾಧ್ಯಮದಲ್ಲಿ ಪ್ರಕಟಣೆ ನೀಡಿ ಶವವನ್ನು ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು‌. ಕೊನೆಗೂ ಸಂಬಂಧಿಕರು ಪತ್ತೆಯಾಗದ ಕಾರಣ ವಿಶುಶೆಟ್ಟಿಯವರು ಮಲ್ಪೆ ಹಾಗೂ ಉಡುಪಿ ನಗರ ಠಾಣಾ ಪೊಲೀಸರ ಸಹಾಯದಿಂದ ಕಾನೂನು ಪ್ರಕ್ರಿಯೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.

ಅಂತ್ಯಕ್ರಿಯೆಯಲ್ಲಿ ಅಂಬಲಪಾಡಿಯ ಕೃಷ್ಣ ಅವರು ಜೆ.ಸಿ.ಬಿ‌ ನೀಡಿ ಸಹಕರಿಸಿದ್ದು, ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ತನುಲ, ರಾಮದಾಸ್ ಪಾಲನ್ ಉದ್ಯಾವರ ಹಾಗೂ ಶಾಜಿ ಆಂಬ್ಯುಲೆನ್ಸ್ ನೀಡಿ ಸಹಕರಿಸಿದರು.

ಈ ಮಾನವೀಯ ಕಾರ್ಯದ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ವಿಶು ಶೆಟ್ಟಿ ಅವರು, 'ಈ ತನಕ ಹಲವು ಜನ ಅನಾಥರು ಮತ್ತು ನಿರ್ಗತಿಕರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಯಾರಿಂದಲೂ ನಯಾಪೈಸೆ ಹಣ ಪಡೆದಿಲ್ಲ. ಬದಲಾಗಿ ಸ್ವಂತ ಖರ್ಚಿನಿಂದಲೇ ಸಹಾಯ ಮಾಡಿದ್ದೇವೆ. ಇದೀಗ ನಾನೇ ರಕ್ಷಣೆಗೆ ಒಳಪಡಿಸಿದ ಅನಾಥರ ಶವಗಳನ್ನು ಸಮಾನ ಮನಸ್ಕರ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಿದ್ದೇನೆ' ಎಂದು ಹೇಳಿದರು.

ಇದನ್ನೂ ಓದಿ : ಮೈಸೂರು: ನಿರಾಶ್ರಿತರಿಗೆ ಹೊದಿಕೆ ಹಾಕುವ ಮೂಲಕ ಹೊಸವರ್ಷ ಆಚರಿಸಿದ ಯುವಕರು - PROVIDING BLANKETS FOR HOMELESS