ETV Bharat / state

ಗಂಗಾವತಿ: ಚಿನ್ನಾಭರಣ ವ್ಯಾಪಾರದಲ್ಲಿ ನಷ್ಟ, ಕೈ ಹಿಡಿಯದ ರಿಯಲ್ ಎಸ್ಟೇಟ್; ಗಂಡ-ಹೆಂಡ್ತಿ, ಮಗ ಆತ್ಮಹತ್ಯೆ

ಸಾಲಬಾಧೆಯಿಂದಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿಯಲ್ಲಿ ನಡೆದಿದೆ.

Three members of A FAMILY SUICIDE
ಗಂಡ, ಹೆಂಡತಿ ಮತ್ತು ಮಗ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : July 4, 2026 at 3:31 PM IST

3 Min Read
Choose ETV Bharat

ಗಂಗಾವತಿ: ಮೊಬೈಲ್ ಗೇಮಿಂಗ್ ಆಡಬೇಡ ಎಂದು ಹೇಳಿದ್ದಕ್ಕೆ ಒಂದೇ ಕುಟುಂಬದ ಮೂವರ ಮೇಲೆ ಕೊಪ್ಪಳ ಜಿಲ್ಲೆಯ ಆಯೋಧ್ಯೆ ಗ್ರಾಮದಲ್ಲಿ ಮಗನೇ ತಂದೆ-ಅಕ್ಕನನ್ನು ಚಾಕುವಿನಿಂದು ಇರಿದು ಇಬ್ಬರನ್ನು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಗಂಗಾವತಿಯ ಪ್ರಶಾಂತ ನಗರದಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

ಇಲ್ಲಿನ ಪ್ರಶಾಂತ ನಗರದಲ್ಲಿ ಈ ಘಟನೆಯಿಂದಾಗಿ ಇಡೀ ಗಂಗಾವತಿ ಬೆಚ್ಚಿಬಿದ್ದಿದ್ದು, ಸಾಲಬಾಧೆ ಎಂಬ ಪೇಡಂಭೂತ ಒಂದೇ ಕುಟುಂಬದ ಮೂವರನ್ನು ಆಹುತಿ ಪಡೆದಿದೆ. ನಗರದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾದ ರಾಯ್ಕರ್ ಕುಟುಂಬದ ಗಂಡ-ಹೆಂಡತಿ ಹಾಗೂ ಪುತ್ರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಪ್ರಕರಣದ ಕುರಿತು ಎಸ್​ ಪಿ ವಿವರಣೆ (ETV Bharat)

ನಗರದಲ್ಲಿ ಹಲವು ದಶಕಗಳಿಂದ ಕಾಮಾಕ್ಷಿ ಜುವೆಲ್ಲರಿ ಎಂಬ ಚಿನ್ನದ ಅಂಗಡಿಯನ್ನಿಟ್ಟು ವ್ಯಾಪಾರ ಹಾಗೂ ಲೇವಾದೇವಿ ನಡೆಸುತ್ತಿದ್ದ ಪ್ರಕಾಶ್​ ರಾಯ್ಕರ್​ (54) ಪತ್ನಿ ಪ್ರಭಾ ರಾಯ್ಕರ್ (45) ಹಾಗೂ ಪುತ್ರ, ಶಶಾಂಕ್ (19) ಎಂಬುವರು ತಮ್ಮ ಹಳೆಯ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಎಸ್​ಪಿ ರಾಮ್​ ಎಲ್​ ಅರಸಿದ್ಧಿ ತಿಳಿಸಿದ್ದಾರೆ.

ಮಗನನ್ನು ಕರೆ ಮಾಡಿ ಕರೆಯಿಸಿಕೊಂಡಿದ್ದರು: ಶಶಾಂಕ್ ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಓದುತ್ತಿದ್ದ ಎಂದು ಗೊತ್ತಾಗಿದೆ. ಪ್ರಕಾಶ್​ ಅವರು ದೂರವಾಣಿ ಕರೆ ಮಾಡಿ ಮಗನನ್ನು ಕರೆಯಿಸಿಕೊಂಡಿದ್ದರು. ಶುಕ್ರವಾರ ಸಂಜೆ ಕನಕಗಿರಿ ರಸ್ತೆಯಲ್ಲಿದ್ದ ಬಾಡಿಗೆ ಮನೆಯಿಂದ ಕಾರಿನಲ್ಲಿ ಪ್ರಶಾಂತ ನಗರದ ತಮ್ಮ ಮನೆಗೆ ಆಗಮಿಸಿದ್ದರು. ಈ ಮನೆ ಈಗಾಗಲೇ ಹಣಕಾಸು ಸಂಸ್ಥೆಯೊಂದಕ್ಕೆ ಒತ್ತಿ ಹಾಕಿದ್ದರಿಂದ ಸೀಜ್ ಮಾಡಲಾಗಿತ್ತು. ಹೀಗಾಗಿ ಹಿಂಬಾಗಿಲು ಮೂಲಕ ಪ್ರವೇಶಿಸಿದ ಈ ಮೂವರು ರಾತ್ರಿ ಒಂದೇ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿ ನೀಡಿದ್ದಾರೆ.

ಕೈಹಿಡಿಯದ ವ್ಯಾಪಾರ: ಚಿನ್ನಾಭರಣ ವ್ಯಾಪಾರ ನಂಬಿಕೊಂಡು ಪ್ರಕಾಶ್ ಜೀವನ ಮಾಡುತ್ತಿದ್ದರು. ಒಂದು ಕಾಲದಲ್ಲಿ ಕಾಮಾಕ್ಷಿ ಜುವೆಲ್ಲರಿ ಎಂದರೆ ಇಡೀ ಗಂಗಾವತಿ ಮಾತ್ರವಲ್ಲ, ಸುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ವಿಶ್ವಾಸಕ್ಕೆ ಹಾಗೂ ಖ್ಯಾತಿಗೆ ಪಾತ್ರವಾಗಿತ್ತು.

ಆದರೆ ಕಳೆದ ಒಂದೆರಡು ದಶಕದಿಂದ ಚಿನ್ನಾಭರಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಅಗಾಧ ಬದಲಾವಣೆ, ಚಿನ್ನದ ಏರಿಳಿತದಿಂದ ವ್ಯಾಪಾರ ಅಷ್ಟಕಷ್ಟೇ ಎಂಬಂತ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಚಿನ್ನಾಭರಣ ವ್ಯಾಪಾರ ನಂಬಿಕೊಂಡರೆ ಕಷ್ಟ ಎಂದರಿತ ಪ್ರಕಾಶ್, ಈ ಕ್ಷೇತ್ರದಲ್ಲಿ ಸಿಕ್ಕಿದ್ದ ಹಣ ರಿಯಲ್ ಎಸ್ಟೇಟ್​​ಲ್ಲಿ ಹೂಡಿದ್ದರು ಎಂದು ಗೊತ್ತಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

ಶೂಲವಾದ ಸಾಲ: ರಿಯಲ್ ಎಸ್ಟೇಟ್​​ನಲ್ಲಿ ಹಣ ಹೂಡಿಕೆ ಮಾಡಲು ಖಾಸಗಿ ವ್ಯಕ್ತಿಗಳು ಮತ್ತು ನಗರದ ಖಾಸಗಿ ಸಹಕಾರಿ, ಕೆಲ ರಾಷ್ಟ್ರೀಕೃತ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದರು. ಈ ಸಾಲದ ಶೂಲವೇ ಕೊನೆಗೆ ಇಡೀ ಕುಟುಂಬವನ್ನು ಬಲಿ ಪಡೆದಿದೆ. ಪ್ರಶಾಂತ್​ ನಗರದಲ್ಲಿರುವ ತಮ್ಮ ಸ್ವಂತ ಮನೆಯ ಮೇಲೆ ಚಿನ್ನದ ವ್ಯಾಪಾರ ಮಾಡಲು ಹಿರೇಜಂತ್ಕಲ್ ವ್ಯಕ್ತಿಯೊಬ್ಬರಿಂದ ಸಾಲ ಮಾಡಿದ್ದರು. ಇದೇ ಮನೆಯನ್ನು ಬ್ಯಾಂಕ್​ಗೆ ಒತ್ತೆ ಹಾಕಿದ್ದರು. ಪ್ರಶಾಂತ ನಗರದ ಮನೆಯನ್ನು ಹಣದ ವಹಿವಾಟು ನಡೆಸುವ ವ್ಯಕ್ತಿಯೊಬ್ಬರು ಮನೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು ಎಂಬ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಕಾಶ್​ ಅವರನ್ನು ಮನೆಯಿಂದ ಹೊರ ಹಾಕಿ ಸೀಜ್ ಮಾಡಿಸಿದ್ದರು ಎಂದು ಗೊತ್ತಾಗಿದೆ. ಹಣಕಾಸಿನ ವ್ಯವಹಾರದಿಂದ ತೀವ್ರವಾಗಿ ನಷ್ಟಕ್ಕೀಡಾಗಿದ್ದ ಮತ್ತು ಗೌರವಕ್ಕೆ ಅಂಜಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಕುರಿತಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಸ್​ಪಿ ಇದೇ ಸಂದರ್ಭದಲ್ಲಿ ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಆಗಮಿಸಿದ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಡಿವೈಎಸ್ಪಿ ಜಿ.ಎನ್. ನ್ಯಾಮಗೌಡ, ಪಿಐ ಪ್ರಕಾಶ್​ ಯಾತನೂರು, ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ: ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲ ಬೇಕಿದ್ದರೆ, ಸ್ನೇಹ ಫೌಂಡೇಶನ್ 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್​ಸ್ಟಿಟ್ಯೂಟ್​ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ)ಗೆ ಕರೆ ಮಾಡಬಹುದು.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸಂತ್ರಸ್ತ ಕುಟುಂಬಕ್ಕೆ 16 ಲಕ್ಷ ರೂಪಾಯಿ ಪರಿಹಾರ ಬಾಕಿ; ಸರ್ಕಾರಿ ಬಸ್ ಜಪ್ತಿ