ETV Bharat / state

ಸಂಕ್ರಾಂತಿ ಸ್ನಾನಕ್ಕೆಂದು ಹೋದ ನಾಲ್ವರು ನೀರುಪಾಲು: ಬಾಗಲಕೋಟೆಯಲ್ಲಿ ಅಣ್ನ-ತಮ್ಮ ಸಾವು

ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ನಾನಕ್ಕೆಂದು ತೆರಳಿದ್ದ ಬಾಗಲಕೋಟೆ ಜಿಲ್ಲೆಯ ಇಬ್ಬರು ಮತ್ತು ರಾಯಚೂರು ಹಾಗೂ ಹಾವೇರಿ ಜಿಲ್ಲೆಯ ಓರ್ವ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

BAGALKOTE  RAICHURU  DROWN IN RIVER  SANKRATHI FESTIVAL
ಮೃತ ಹುಡುಕುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ (ETV Bharat)
author img

By ETV Bharat Karnataka Team

Published : January 15, 2026 at 7:46 PM IST

2 Min Read
Choose ETV Bharat

ಬಾಗಲಕೋಟೆ/ರಾಯಚೂರು/ಹಾವೇರಿ: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಅಂಗವಾಗಿ ಸ್ನಾನಕ್ಕೆಂದು ತೆರಳಿದ್ದ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಮೂರು ಪ್ರತ್ಯೇಕ ಘಟನೆಗಳು ಬಾಗಲಕೋಟೆ, ರಾಯಚೂರು ಮತ್ತು ಹಾವೇರಿಯಲ್ಲಿ ಜಿಲ್ಲೆಯಲ್ಲಿ ಇಂದು ನಡೆದಿವೆ.

ಒಂದೇ ಕುಟುಂಬದ ಇಬ್ಬರು ಸಾವು: ಸಂಕ್ರಾಂತಿ ಹಿನ್ನೆಲೆಯಲ್ಲಿ ಜಾಲಿಕಟ್ಟಿ ಕಲ್ಲಿನ ಕ್ವಾರಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಬಾಲಕರನ್ನು ಮನೋಜ ಬಡಿಗೇರ (17) ಹಾಗೂ ಪ್ರಮೋದ ಬಡಿಗೇರ (17) ಎಂದು ಗುರುತಿಸಲಾಗಿದೆ.

BAGALKOTE  RAICHURU  DROWN IN RIVER  SANKRATHI FESTIVAL
ಮನೋಜ ಬಡಿಗೇರ ಹಾಗೂ ಪ್ರಮೋದ ಬಡಿಗೇರ (ETV Bharat)

ಮೃತ ಬಾಲಕರು ಒಂದೇ ಕುಟುಂಬದ ಚಿಕ್ಕ-ದೊಡ್ಡಪ್ಪಂದಿರ ಮಕ್ಕಳಾಗಿದ್ದಾರೆ. ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ತೇರು ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಾಯಚೂರಲ್ಲಿ ಓರ್ವ ನದಿಪಾಲು: ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕೆಂದು ಸ್ನೇಹಿತರ ಜೊತೆ ನದಿಗೆ ತೆರಳಿದ ಯುವಕ ನೀರು ಪಾಲಾಗಿರುವ ಘಟನೆ ರಾಯಚೂರಿನ ಚಿಕಲಪರ್ವಿ ಗ್ರಾಮದಲ್ಲಿ ಜರುಗಿದೆ.

ಜಿಲ್ಲೆಯ ಮಾನವಿ ತಾಲೂಕಿನ ರಾಜಲದಿನ್ನಿ ಗ್ರಾಮದ ವಂಶಿಕೃಷ್ಣ (21) ಮೃತ ಯುವಕನೆಂದು ಗುರುತಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ರಾಜವಂಶಿ ತನ್ನ ಸ್ನೇಹಿತರೊಡನೆ ಇಂದು ತುಂಗಭದ್ರಾ ನದಿಗೆ ಸ್ನಾನಕ್ಕೆಂದು ತೆರಳಿದ್ದಾನೆ. ಸ್ನಾನಕ್ಕಾಗಿ ನದಿಯಲ್ಲಿ ಇಳಿದಾಗ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ರಕ್ಷಣೆಗಾಗಿ ಸ್ಥಳೀಯರು ಮುಂದಾದರೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಮಾನವಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಯುವಕನ ಮೃತದೇಹವನ್ನು ಮಾನವಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

BAGALKOTE  RAICHURU  DROWN IN RIVER  SANKRATHI FESTIVAL
ಯುವಕ ಸಚಿನ್ ಬಸಪ್ಪ ಅಂಗಡಿ (ETV Bharat)

ಹಾವೇರಿಯಲ್ಲಿ ಯುವಕ ನೀರುಪಾಲು: ಸಂಕ್ರಾಂತಿಯಂದು ಎತ್ತಿನ ಮೈತೊಳೆಯಲು ಹೋಗಿ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಹಳೇಮೆಲ್ಮುರಿ ಗ್ರಾಮದ ವರದಾ ನದಿಯಲ್ಲಿ ನಡೆದಿದೆ.

ಹಳೇಮೆಲ್ಮುರಿ ಗ್ರಾಮದ ಸಚಿನ್ ಬಸಪ್ಪ ಅಂಗಡಿ (25) ಮೃತ ಯುವಕ. ಸಂಕ್ರಾಂತಿ ಹಬ್ಬದ ಹಿನ್ನೆಲೆ ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಯುವಕನ ಮೃತದೇಹದ ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಹೊರಗಡೆ ತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಅಗ್ನಿ ಅವಘಡ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಜನರ ಸಾವು; ರಾಜಕೀಯ ಮುಖಂಡರಿಂದ ಸಂತಾಪ