ETV Bharat / state

ಕಮಿಷನ್ ಆಸೆ ತೋರಿಸಿ 15 ಮ್ಯೂಲ್ ಅಕೌಂಟ್​ ಮೂಲಕ ಕೋಟ್ಯಂತರ ರೂ. ವಂಚನೆ: ಮೂವರ ಬಂಧನ

15 ಮ್ಯೂಲ್ ಖಾತೆ ಮೂಲಕ ಕೋಟ್ಯಂತರ ರೂ. ವಂಚನೆ ಮಾಡಿದ ಮೂವರು ಆರೋಪಿಗಳನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

Accused
ಆರೋಪಿಗಳು (ETV Bharat)
author img

By ETV Bharat Karnataka Team

Published : February 28, 2026 at 4:07 PM IST

2 Min Read
Choose ETV Bharat

ಶಿವಮೊಗ್ಗ: ಕಮಿಷನ್ ಆಸೆ ತೋರಿಸಿ ಬ್ಯಾಂಕ್ ಖಾತೆಯನ್ನು ಬಾಡಿಗೆ ಪಡೆದು, ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿ, ವಂಚಿಸುತ್ತಿದ್ದ ಮೂವರನ್ನು ಶಿವಮೊಗ್ಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.‌ ಶಿವಮೊಗ್ಗ ಶರಾವತಿ ನಗರದ ನಿವಾಸಿ ಜಗದೀಶ್(43), ಚಿಕ್ಕಮಗಳೂರಿನ ಅರ್ಷಾದ್(39) ಹಾಗೂ ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ(34) ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನಲೆ : ಶಿವಮೊಗ್ಗದ ವಿಲ್ಸನ್ ಎಂಬುವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 2ರಂದು ಆರೋಪಿ ಜಗದೀಶನ ವಿರುದ್ಧ ದೂರು ನೀಡಿದ್ದರು. ಜಗದೀಶ್ ತನ್ನ ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಇದರಿಂದ ತಮ್ಮ ಖಾತೆ ಅಮಾನತು ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಾಗ ಗಾಬರಿ ಬೀಳುವ ಅಂಶ ಪತ್ತೆಯಾಗಿದೆ. ಕಾರಣ ಜಗದೀಶ್ ಹಾಗೂ ಇತರೆ ಇಬ್ಬರು ಸೇರಿ ದೇಶದ ವಿವಿಧೆಡೆ ಸೈಬರ್ ಫ್ರಾಡ್ ನಡೆಸಿದ ಹಣವನ್ನು ವಿಲ್ಸನ್ ಅವರ ಖಾತೆಗೆ ವರ್ಗಾಯಿಸಿಕೊಂಡು ನಂತರ ತಮಗೆ ಬೇಕಾದ ಕಡೆ ವರ್ಗಾಯಿಸಿಕೊಂಡು ಹಣ ಗಳಿಕೆ ಮಾಡುತ್ತಿರುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮೂವರ ಬಳಿ 15 ಮ್ಯೂಲ್ ಅಕೌಂಟ್​ಗಳು ಪತ್ತೆಯಾಗಿವೆ. ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು 82,00,15,712 ರೂ. ಗೂ ಹೆಚ್ಚು ಹಣ ವಂಚನೆಯಾಗಿರುತ್ತದೆ. ಅಲ್ಲದೇ, ಇವರು ಬಳಸಿದ 15 ಮ್ಯೂಲ್ ಅಕೌಂಟ್​ಗಳಲ್ಲಿ ಒಟ್ಟು 14,71,91,174 ರೂ.(14 ಕೋಟಿ 71 ಲಕ್ಷ 91 ಸಾವಿರದ 174 ರೂ.) ಗೂ ಹೆಚ್ಚು ಹಣ ವರ್ಗಾವಣೆಯಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಬಳಸಿದ 2 ಮೊಬೈಲ್, 11 ATM ಕಾರ್ಡ್, 9 QR ಕೋಡ್ ಸ್ಕ್ಯಾನರ್, 15 ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿತರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆ (ಮಂಗಳೂರು) : ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆ ನಡೆಸಲಾದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಸೈಬರ್ ಅಪರಾಧ ಠಾಣೆ ಪೊಲೀಸರು ಹೈದರಾಬಾದ್​ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 6 ಮಂದಿ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27), ಬುಡಿದಿನ್ನೆ ವಂಶಿ @ ಗುರು (21), ಉತ್ಪಲ ಸಂತೋಷ್ ಕೃಷ್ಣ (35), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬಡೆ ಶ್ರೀನಿವಾಸ್ (38), ಮಂಗಳೂರಿನ ಇಬ್ರಾಹಿಂ (35) ಬಂಧಿತರು.

ಇದನ್ನೂ ಓದಿ : ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆ: ಹೈದರಾಬಾದ್​ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ 6 ಸೈಬರ್ ವಂಚಕರ ಬಂಧನ