ETV Bharat / state

'ಸಚಿವ ಸ್ಥಾನ ಬೇಕೆನ್ನುವವರು ಡಿಕೆಶಿ ಜತೆ ಹೋಗಿ; ಪಕ್ಷ, ಹೋರಾಟ, ಸೋನಿಯಾ, ಖರ್ಗೆ ಕೈ ಬಲಪಡಿಸೋರು ನನ್ನೊಂದಿಗೆ ಬನ್ನಿ'

ನಾನು ಯಾವತ್ತೂ ಸಚಿವ ಸ್ಥಾನ ಬೇಕು ಅಂದಿಲ್ಲ. ಅಧಿಕಾರಕ್ಕಾಗಿ ಇರುವವನಲ್ಲ. ನಾನು ಕಾಂಗ್ರೆಸ್ ಸಿಪಾಯಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬೆಂಗಳೂರಲ್ಲಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್  BENGALURU  DK SHIVAKUMAR  KARNATAKA POLITICS
ಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (IANS)
author img

By ETV Bharat Karnataka Team

Published : June 4, 2026 at 4:08 PM IST

2 Min Read
Choose ETV Bharat

ಬೆಂಗಳೂರು: "ಅಧಿಕಾರ, ಸಚಿವ ಸ್ಥಾನ, ಸ್ಥಾನಮಾನ ಬೇಕು ಅನ್ನುವವರು ಡಿಕೆಶಿ ಜತೆ ಹೋಗಿ. ಪಕ್ಷ, ಹೋರಾಟ, ಸೋನಿಯಾ, ಖರ್ಗೆ ಅವರ ಕೈ ಬಲಪಡಿಸುವವರು ನನ್ನ ಜತೆ ಬನ್ನಿ" ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬೆಂಗಳೂರಲ್ಲಿಂದು ಮಾತನಾಡಿದ ಅವರು, "ಸೋನಿಯಾ ಗಾಂಧಿ ಅವರ ಆಶೀರ್ವಾದ, ರಾಹುಲ್​ ಗಾಂಧಿ, ಖರ್ಗೆಯವರು, ವರಿಷ್ಠ ನಾಯಕರು ನನ್ನನ್ನು ಆಯ್ಕೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ನಾನು ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವತ್ತೂ ಸಚಿವ ಸ್ಥಾನ ಬೇಕು ಅಂದಿಲ್ಲ. ನಾನು ಅಧಿಕಾರಕ್ಕೆ ಇರುವವನಲ್ಲ, ನಾನು ಕಾಂಗ್ರೆಸ್ ಸಿಪಾಯಿ" ಎಂದರು.

"ನಮ್ಮ ಹಿರಿಯರ ಆದರ್ಶ ಪಾಲಿಸಿಕೊಂಡು ಜವಾಬ್ದಾರಿ ನಿರ್ವಹಿಸುತ್ತೇನೆ. ಈ ದೇಶ ಕವಲು ದಾರಿಯಲ್ಲಿದೆ. ನಾನು ಹಿಂದುಳಿದ ವರ್ಗ, ಮುಂದುವರಿದ ವರ್ಗಕ್ಕೆ ಸೇರಿದವನು ಅನ್ನೋದೇ ಮುಖ್ಯ ಅಲ್ಲ. ನಾನು ಮುಂದುವರಿದವರಿಗಿಂತ ಮುಂದುವರಿದವನು. 2028ಕ್ಕೆ ನಾನು ಸಿಎಂ ಅಭ್ಯರ್ಥಿ ಅನ್ನೋದು ವಾಟ್ಯ್‌ಆ್ಯಪ್ ಯೂನಿವರ್ಸಿಟಿಯ ಅಪಪ್ರಚಾರ. ನನಗೆ ಪಕ್ಷ ಕಟ್ಟೋ ಜವಾಬ್ದಾರಿ ಇದೆ" ಎಂದು ತಿಳಿಸಿದರು.

"ಎಸ್ಐಆರ್(SIR)​, ಸಿಎಎ ವಿರುದ್ಧ ಹೋರಾಡುವ ಹೊಣೆ ಇದೆ. ಅಧಿಕಾರ ನನಗೆ ಮುಖ್ಯ ಅಲ್ಲ. ನಾವು ಬೀದಿಗಿಳಿದು ಹೋರಾಟ ಮಾಡಬೇಕು. ಗುಜರಾತ್ ಮಾಡೆಲ್ ನಮಗೆ ಬೇಕಿಲ್ಲ, ಕರ್ನಾಟಕ ಮಾಡೆಲ್ ಬಗ್ಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಬಣ್ಣ ಇಲ್ಲ. ಸರ್ಕಾರ ಮತ್ತು ಪಕ್ಷದಲ್ಲಿ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ" ಎಂದರು.

"ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ನನ್ನ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇರಿಸಿ ಜವಾಬ್ದಾರಿ ವಹಿಸಿದ ನನ್ನ ಅಚ್ಚುಮೆಚ್ಚಿನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ, ವಿರೋಧ ಪಕ್ಷದ ನಾಯಕರಾದ ರಾಹುಲ್​​ ಗಾಂಧಿ ಅವರಿಗೆ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬಿ.ಕೆ.ಹರಿಪ್ರಸಾದ್ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

"ಕಾಂಗ್ರೆಸ್‌ನ ಕೇಂದ್ರ ನಾಯಕತ್ವದ ಈ ನಿರ್ಧಾರವು ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನವಾದ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಪರವಾಗಿ ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ನಾನು ಭಾವಿಸುತ್ತೇನೆ. ದೀರ್ಘಕಾಲದಿಂದ ಪಕ್ಷದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿರುವ ನಾನು ಯಾವುದೇ ಅಧಿಕಾರದ ಹುದ್ದೆಗಳಿಗಾಗಿ ರಾಜಕೀಯ ಮಾಡದೇ, ನನ್ನ ಜೀವನ ಪೂರ್ತಿ ಕಾಂಗ್ರೆಸ್ ತತ್ವಗಳ ಜಾರಿಗೆ ಮೀಸಲಿಟ್ಟಿದ್ದೇನೆ. ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ ಎಂಬ ನಿಲುವಿನಂತೆ ನಾನು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದೇನೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಎಂಬ ಪಕ್ಷ ಕಟ್ಟುವ ಕಾಯಕವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ" ಎಂದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ: ಸಚಿವ ಪ್ರಿಯಾಂಕ್​ ಖರ್ಗೆ