ETV Bharat / state

ಈ ಬಾರಿ ದಸರಾ ಉತ್ಸವವನ್ನು ವಿಭಿನ್ನವಾಗಿ ಮಾಡುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್

ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಸೇನಾ ಪಡೆಗಳು ಇರಲಿವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

D K SHIVAKUMAR
ಸಿಎಂ ಡಿ.ಕೆ. ಶಿವಕುಮಾರ್ (ETV Bharat)
author img

By ETV Bharat Karnataka Team

Published : August 29, 2026 at 3:32 PM IST

2 Min Read
Choose ETV Bharat

ಮೈಸೂರು: ಬರದ ನೆಪದಲ್ಲಿ ಸರಳ ದಸರಾ ಮಾಡುವುದಿಲ್ಲ. ಆದರೆ, ವಿಭಿನ್ನವಾಗಿ ಈ ಬಾರಿ ದಸರಾ ಮಾಡುತ್ತೇವೆ. ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರಿನ ಓವಲ್ ಗ್ರೌಂಡ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಮೆರವಣಿಗೆಯಲ್ಲಿ ಮಿಲಿಟರಿ, ಸೇನಾ ಪಡೆಗಳು ಇರಲಿವೆ. ಇದರ ಜೊತೆಗೆ ಕನ್ನಡದ ನಟ, ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದು, ಒಂದೇ ತರದ ಜನಪದ ಕಲಾ ಪ್ರಕಾರಗಳಿಗೆ ಅವಕಾಶವಿಲ್ಲ. ಈಗ ಕಾಲ ಬದಲಾದಂತೆ ದಸರಾ ಮೆರವಣಿಗೆಯ ಸ್ವರೂಪವನ್ನೂ ಬದಲಾಯಿಸಿತ್ತೇವೆ ಎಂದರು.

ಸಿಎಂ ಡಿ.ಕೆ. ಶಿವಕುಮಾರ್ (ETV Bharat)

ಈ ಬಾರಿ ದಸರಾದಲ್ಲಿ ಕಂಬಳ ಮಾಡುವ ಬಗ್ಗೆ ನಾನು ಯಾವುದೇ ಪ್ರತಿಷ್ಠೆಯನ್ನು ತೆಗೆದುಕೊಂಡಿಲ್ಲ. ಆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಂಬಳದಿಂದ ಪರಿಸರ ಹಾನಿ ಹಾಗೂ ನೀರು ಖರ್ಚಾಗುತ್ತದೆ ಎಂಬ ಆರೋಪ ಸರಿಯಲ್ಲ. ಸುಮ್ಮನೆ ಕಂಬಳದ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇನೆ ಎಂದರು.

ಬರದ ನೆಪದಲ್ಲಿ ಸರಳ ದಸರಾ ಮಾಡಲು ಸಾಧ್ಯವಿಲ್ಲ. ದಸರಾದ ಮೇಲೆ ಮೈಸೂರಿನ ಪ್ರವಾಸೋದ್ಯಮ ನಿಂತಿದೆ. ಸಾಂಪ್ರದಾಯಿಕ ಹಾಗೂ ಅದ್ಧೂರಿ ದಸರಾ ಮಾಡುತ್ತೇವೆ. ಈ ಬಾರಿ ದಸರಾ ಸರಳವಾಗಿ ಇರುವುದಿಲ್ಲ. ವಿಭಿನ್ನವಾಗಿ ಅದ್ದೂರಿಯಾಗಿ ಮಾಡುತ್ತೇವೆ. ಈ ಬಾರಿ ದಸರಾ ಉದ್ಘಾಟಕರ ವಿಚಾರದಲ್ಲಿ ಹಲವರ ಜೊತೆ ಚರ್ಚೆ ಮಾಡಿದ್ದೇವೆ. ಅಂತಿಮ ತೀರ್ಮಾನ ನಾನೇ ಮಾಡುತ್ತೇನೆ ಎಂದು ತಿಳಿಸಿದರು.

ನಾಗೇಂದ್ರ ನಿರಾಪರಾಧಿ: ಯಾವುದೇ ತಪ್ಪು ಮಾಡದೆ ಇದ್ದರೂ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಅವರ ರಾಜೀನಾಮೆಯ ನಂತರವು ಬಿಜೆಪಿ ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅವರು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಈಗ ಬಿಜೆಪಿ ರಾಜಕೀಯಕ್ಕಾಗಿ ನಿರಾಪರಾಧಿಯನ್ನ ಬಲಿ ತೆಗೆದುಕೊಂಡಿದೆ ಎಂದರು.

ಕುಮಾರಸ್ವಾಮಿಗೆ ಬಾಯಿ ಚಪಲ: ಕೇಂದ್ರ ಸಚಿವ ಕುಮಾರಸ್ವಾಮಿ ನಿನ್ನೆ ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ವಿಧಾನಸೌಧ ಮಾರುತ್ತಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಯಾರ‍್ಯಾರು ಏನೇನು ಮಾಡಲು ಹೊರಟಿದ್ದಾರೆ ಎಂಬುದು ಚರಿತ್ರೆ ಬಿಚ್ಚಿಟ್ಟರೆ ಗೊತ್ತಾಗುತ್ತದೆ. ನಾನು ಅವರ ತಂಟೆಗೆ ಹೋಗುವುದಿಲ್ಲ. ಕುಮಾರಸ್ವಾಮಿಗೆ ಬಾಯಿ ಚಪಲ, ಚಪಲಕ್ಕೆ ಮಾತನಾಡಿ ಖುಷಿಪಡಲಿ. ಆದರೆ ನಾನು ಸಿಎಂ ಆಗಿರುವುದಕ್ಕೆ ಕೆಲವರಿಗೆ ಅಸೂಯೆ, ಟೀಕೆ ಮಾಡಲಿ. ಈಗ ನಾನು ಸಿಎಂ ಆಗಿರುವುದಕ್ಕೆ ಕುಮಾರಸ್ವಾಮಿ ಜೊತೆಗೆ ಇಡಿ ಎನ್​​ಡಿಎ ಕೂಟಕ್ಕೆ ಅಸೂಯೆಯಾಗಿದ್ದು, ನಾನು ನನ್ನ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ಹನೂರು ಶೂಟೌಟ್ ತನಿಖೆ ಮುಗಿಯಲಿ: ಹನೂರು ಶೂಟೌಟ್ ವಿಚಾರದಲ್ಲಿ ತನಿಖಾ ವರದಿ ನಮ್ಮ ಕೈ ಸೇರಿದೆ. ಅನಂತರ ಇಡೀ ಪ್ರಕರಣವನ್ನು ಸಿಒಡಿಗೆ ವಹಿಸಿದ್ದೇವೆ. ತನಿಖೆ ನಡೆಯುತ್ತಿದೆ. ಆದರೆ, ಈಗ ಬಂದಿರುವ ತನಿಖಾ ವರದಿಯಲ್ಲಿ ಹಲವು ಅಂಶಗಳಿವೆ. ಹತ್ತಿರದಿಂದ ಶೂಟ್ ಮಾಡಿರುವ ಬಗ್ಗೆ ಪ್ರಸ್ತಾವ ಇದೆ. ಜೊತೆಗೆ ಅವರ ಬಳಿ ಏನೇನು ವಸ್ತು ಇತ್ತು, ಕಾಡಿಗೆ ಯಾವ ಕಾರಣಕ್ಕೆ ಹೋದರು ಎಂಬ ಪ್ರಸ್ತಾಪವೂ ಇದೆ, ಸಿಒಡಿ ತನಿಖೆ ಮುಗಿಯಲಿ ಎಲ್ಲವೂ ಬಹಿರಂಗವಾಗುತ್ತದೆ ಎಂದರು.

ಗ್ರೇಟರ್ ಮೈಸೂರು ಬಗ್ಗೆ ಚರ್ಚೆ: ಕಾವೇರಿ ಸಮಸ್ಯೆ ಇದ್ದ ಕಾರಣ ಈ ಕಡೆ ಗಮನ ಹರಿಸಲಿಲ್ಲ. ಮೈಸೂರು ಬಹಳ ಅಚ್ಚುಕಟ್ಟಾದ ನಗರ, ಇದನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಭವಿಷ್ಯದ ದೃಷ್ಟಿಯಿಂದ ಮೈಸೂರಿಗಾಗಿ ಹಲವು ಯೋಜನೆಗಳನ್ನ ಚಿಂತನೆ ಮಾಡಿದ್ದೇನೆ. ಸಿದ್ದರಾಮಯ್ಯ ಗ್ರೇಟರ್ ಮೈಸೂರು ಬಗ್ಗೆ ಭರವಸೆ ಕೊಟ್ಟಿದ್ದರು. ಅದನ್ನು ಈಡೇರಿಸುವುದು ನನ್ನ ಜವಾಬ್ದಾರಿ. ಕೆಲವು ದಿನಗಳಲ್ಲೇ ಈ ಭಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಇವುಗಳನ್ನೂ ಓದಿ: