ನನ್ನ ಕುಟುಂಬವನ್ನು ಬೀದಿಗೆ ತಂದು, ಪ್ರತಿನಿತ್ಯ ಕೋರ್ಟಿಗೆ ಅಲೆಯುವಂತೆ ಮಾಡಿದ್ದಾರೆ: ಶಾಸಕ ರಾಜೇಗೌಡ ಕಣ್ಣೀರು
ತಮ್ಮ ಕುಟುಂಬವನ್ನು ಬೀದಿಗೆ ತಂದು ನಿತ್ಯ ಕೋರ್ಟ್ಗೆ ಅಲೆದಾಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

Published : March 3, 2026 at 3:33 PM IST
ಚಿಕ್ಕಮಗಳೂರು: ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ತಮ್ಮ ಕುಟುಂಬವನ್ನು ಬೀದಿಗೆ ತಂದು ನಿತ್ಯ ಕೋರ್ಟ್ಗೆ ಅಲೆದಾಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.
ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಮನೆಯನ್ನು ಹಾಳು ಮಾಡಿದ್ದೀರಿ, ಅನ್ಯಾಯ ಮಾಡಿದ್ದೀರಿ, ನಾನು ಸಾಲ ಮಾಡಿದ್ದೇನೆ, ನಾನು ಜನಕ್ಕೆ ಅನ್ಯಾಯವನ್ನು ಮಾಡಿಲ್ಲ. ನಾನು ಈ ಸಭೆ ಮೂಲಕ ಒಂದು ಘೋಷಣೆ ಮಾಡುತ್ತೇನೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಯಾರಾದರೂ ನಿಲ್ಲಲಿ. ಆದರೆ ಕೆಟ್ಟ ಮನಸ್ಥಿತಿಯ ವ್ಯಕ್ತಿ ಮತ್ತೆ ಶಾಸಕನಾಗಬಾರದು, ಶಾಸಕರಾದರೆ ಈ ಕ್ಷೇತ್ರಕ್ಕೆ ದೊಡ್ಡ ಮಾರಕ, ಯಾರ ಮನೆ ಹೆಣ್ಣು ಮಕ್ಕಳನ್ನು ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಹೆಸರು ಹೇಳದೆಯೇ ಪರೋಕ್ಷವಾಗಿ ತಮ್ಮ ವಿರೋಧಿ ವಿರುದ್ಧ ಹರಿಹಾಯ್ದರು.
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ. ನಾನು ಈ ಸಮಾವೇಶದ ಮೂಲಕ ಒಂದು ಘೋಷಣೆ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಮಹಿಳೆಯರಿಗೆ ತೊಂದರೆ ಕೊಟ್ಟಿರುವುದನ್ನು ಮನದಟ್ಟು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಘೋಷಣೆ ಮಾಡಲಿ ಎಂದು ಶಾಸಕ ರಾಜೇಗೌಡ ಸವಾಲು ಹಾಕಿದರು.
ನಾನು ಕೂಡ ಘೋಷಣೆ ಮಾಡುತ್ತೇನೆ, ನೀವು ಸ್ಪರ್ಧಿಸಲ್ಲ ಅಂದ್ರೆ ನಾನು ಸ್ಪರ್ಧಿಸಲ್ಲ. ನನ್ನ ಬದಲಿಗೆ ಕಾರ್ಯಕರ್ತರು ನಿಲ್ಲಲಿ ಎಂದರು.
ಮಲೆನಾಡಿನಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೀವರಾಜ್ ಹಾಲಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಕಿಡಿಕಾರಿದ್ದರು. ಕಾಡಾನೆ ದಾಳಿ ಆಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಹುಡುಕಿಕೊಡಿ ಹಾಗೂ ರೈಲ್ವೆ ಬ್ಯಾರಿಕೇಡ್ ಗೇಟ್ ಹಾಕಿ ಕೊಡಿ ಹಾಗೂ ಮೃತಪಟ್ಟ ಮಹಿಳೆ ಕೂಲಿ ಕಾರ್ಮಿಕರು ಆಗಿರುವ ಕಾರಣ ಆ ಕುಟುಂಬಕ್ಕೆ 50 ಲಕ್ಷ ರೂಪಾಯಿ ಹಣ ಹಾಗೂ ಆ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗವನ್ನು ನೀಡಿ ಎಂದು ಆಗ್ರಹಿಸಿದ್ದೆವು. 'ಈ ಹಿಂದೆ ಎನ್. ಆರ್. ಪುರ ತಾಲೂಕಿನ ಸೀತೂರಿನಲ್ಲಿ ಕಾಡಾನೆ ದಾಳಿಗೆ ಹಾಗೂ ಶೃಂಗೇರಿಯ ಕೆರೆ ಕಟ್ಟೆಯಲ್ಲಿ ಮೃತಪಟ್ಟ ವ್ಯಕ್ತಿಗೆ ತಲಾ 25 ಲಕ್ಷ ಹಣ ನೀಡಿದ್ದೀರಿ. ಆದರೆ, ಇವರಿಗೆ 20 ಲಕ್ಷ ಮಾತ್ರ ನೀಡುತ್ತಿದ್ದೀರಿ. ಇದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದೀರಿ ಎಂದಿದ್ದರು.
ಅಂದು ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಆರೋಪದ ಸುರುಮಳೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಟಿ.ಡಿ. ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕಿದರು.
ಇವುಗಳನ್ನೂ ಓದಿ:

