ಚಂಪಾಷಷ್ಠಿ: ಕುಕ್ಕೆಯಲ್ಲಿ ನ.14 ರಿಂದ ಡಿ.02ರವರೆಗೆ ಸರ್ಪಸಂಸ್ಕಾರ ಸೇರಿ ಈ ಸೇವೆಗಳಲ್ಲಿ ವ್ಯತ್ಯಯ!
ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಮುಖ ದಿನಗಳಂದು ವಿಶೇಷ ಸೇವೆಗಳು ಇರುವುದಿಲ್ಲ. ಈ ಕುರಿತಾದ ಮಾಹಿತಿ ಇಲ್ಲಿದೆ.

Published : November 13, 2025 at 4:45 PM IST
ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನವೆಂಬರ್ 16ರಿಂದ ಡಿಸೆಂಬರ್ 2ರ ತನಕ ನಡೆಯಲಿದ್ದು, ಈ ದಿನಗಳಲ್ಲಿ ದೇಗುಲದ ಹಲವು ಸೇವೆಗಳಲ್ಲಿ ವ್ಯತ್ಯಾಸವಾಗಲಿದೆ.
ಜಾತ್ರಾ ಮಹೋತ್ಸವದ ನಿಮಿತ್ತ ನವೆಂವರ್14ರಿಂದ ಡಿಸೆಂಬರ್ 02ರ ತನಕ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ, ಇದಕ್ಕೆ ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 03ರಿಂದ ಸರ್ಪಸಂಸ್ಕಾರ ಸೇವೆ ಪುನಾರಂಭ: ನ.13ರಂದು ಆರಂಭವಾದ ಸರ್ಪಸಂಸ್ಕಾರ ಸೇವೆಯು ಬಹುತೇಕ ನ.14ರ ಮಧ್ಯಾಹ್ನದ ವೇಳೆಗೆ ಕೊನೆಗೊಳ್ಳುತ್ತದೆ. ಅಂದು (ನ.14) ಬೆಳಗ್ಗೆ ಹೊಸ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ನ.15ರಂದು ಶನಿವಾರ ಏಕಾದಶಿ ಹಾಗೂ ಮೂಲಮೃತ್ತಿಕಾ ಪ್ರಸಾದ ವಿತರಣೆ ಇರಲಿದೆ. ನ.16ರಂದು ಕೊಪ್ಪರಿಗೆ ಏರುವುದರ ಮೂಲಕ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ನ.14ರಿಂದಲೇ ಸರ್ಪಸಂಸ್ಕಾರ ಸೇವೆಗಳು ನಡೆಯುವುದಿಲ್ಲ. ಅಲ್ಲದೆ, ಡಿಸೆಂಬರ್ 2ರಂದು ಕೊಪ್ಪರಿಗೆ ಇಳಿದ ಬಳಿಕವೇ, ಅಂದರೆ ಡಿ.03ರ ಬುಧವಾರದಿಂದ ಮತ್ತೆ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.

ಜಾತ್ರಾ ಸಮಯ ಸೇವೆಯಲ್ಲಿ ವ್ಯತ್ಯಯ: ನ.19ರಂದು ಲಕ್ಷ ದೀಪೋತ್ಸವ, ನ.24ರ ಚೌತಿ ಹಾಗೂ ನ.25ರ ಪಂಚಮಿಯ ದಿನಗಳಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆಯೂ ಇರುವುದಿಲ್ಲ. ಚಂಪಾಷಷ್ಠಿ ದಿನ ನ.26ರ ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೇ, ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ಜೊತೆಗೆ, ಲಕ್ಷದೀಪೋತ್ಸವ (ನ.19), ಚೌತಿ (ನ.24), ಪಂಚಮಿ (ನ.25). ಚಂಪಾಷಷ್ಠಿ (ನ.26) ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ (ಡಿ.02) ಗಳಂದು ಪಂಚಾಮೃತ ಮಹಾಭಿಷೇಕ ಸೇವೆಯೂ ಸಹ ನಡೆಯುವುದಿಲ್ಲ. ಅದಲ್ಲದೇ, ನ.16ರಿಂದ ಡಿ.02ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆಯೂ ನೆರವೇರುವುದಿಲ್ಲ ಎಂದು ದೇವಳದ ಪ್ರಕಟಣೆಯು ತಿಳಿಸಿದೆ.
ಇತರ ಸೇವೆಗಳು ಎಂದಿನಂತೆ: ಚಂಪಾಷಷ್ಠಿ ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವು ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶವಿರುವುದಿಲ್ಲ. ಆದರೆ, ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷ ಸೇವೆ, ಕಾರ್ತಿಕ ಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ, ಉತ್ಸವ ಹಾಗೂ ರಥೋತ್ಸವ ಮೊದಲಾದ ಸೇವೆಗಳು ನೆರವೇರಲಿವೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿಸೆಂಬರ್ 02ರ ತನಕ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮಾತೃ ಭೋಜನ: ವಯಸ್ಸಿನ ಅಂತರ ಮರೆತು ಅಮ್ಮನ ಕೈತುತ್ತು ಸವಿದರು

