ETV Bharat / state

2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ: ಸಚಿವ ಜಮೀರ್ ಅಹ್ಮದ್ ಖಾನ್

ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಮಾಡಬೇಕಾದರೆ ನಮ್ಮಿಂದ ಹಾಗೂ ನಿಮ್ಮಿಂದ ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

Minister Zameer Ahmed Khan
ಸಚಿವ ಜಮೀರ್ ಅಹ್ಮದ್ ಖಾನ್ (ETV Bharat)
author img

By ETV Bharat Karnataka Team

Published : January 10, 2026 at 9:32 AM IST

2 Min Read
Choose ETV Bharat

ಚಿಕ್ಕಬಳ್ಳಾಪುರ: "2028ರವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ" ಎಂದು ಕರ್ನಾಟಕ ರಾಜ್ಯ ಸರ್ಕಾರದ ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಮಾಡಬೇಕಾದರೆ ನಮ್ಮಿಂದ ಹಾಗೂ ನಿಮ್ಮಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಏನು ಸೂಚನೆ ನೀಡುತ್ತದೋ, ಅದನ್ನು ನಾವೆಲ್ಲರೂ ಪಾಲಿಸುತ್ತೇವೆ. ನನ್ನ ಅಭಿಪ್ರಾಯ ನಾನು ತಿಳಿಸಿದ್ದೇನೆ. ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲಾ ರಾಜ್ಯಗಳಲ್ಲೂ ಡಿಮ್ಯಾಂಡ್ ಇದೆ. ಚುನಾವಣೆ ನಡೆಸುವ ತಂತ್ರ ಚೆನ್ನಾಗಿ ಗೊತ್ತಿದೆ. ಆ ಕಾರಣದಿಂದಾಗಿ ಅವರನ್ನು ಅಸ್ಸೋಂನ ಚುನಾವಣಾ ವೀಕ್ಷಕರಾಗಿ ಮಾಡಲಾಗಿದೆ" ಎಂದು ತಿಳಿಸಿದರು.

ಸಚಿವ ಜಮೀರ್ ಅಹ್ಮದ್ ಖಾನ್ (ETV Bharat)

ಬಿಜೆಪಿ ವಿರುದ್ಧ ಗುಡುಗಿದ ಅವರು, "2019 ರಿಂದ 2023ರ ವರೆಗೂ ಆಡಳಿತದಲ್ಲಿ ಬಿಜೆಪಿ ಸರ್ಕಾರ ಇತ್ತು. ಅವರ ಆಡಳಿತದಲ್ಲಿ ಸ್ಲಂ ಬೋರ್ಡ್​ನಲ್ಲಿ ಒಂದು ಮನೆ ಕೊಟ್ಟಿದ್ದರೆ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಮತ್ತು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ನಾನು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರಿಗೂ ಸಹ ಉಚಿತವಾಗಿ ಮನೆಗಳನ್ನು ಕೊಡುತ್ತೇವೆ ಎಂದು ಹೇಳಿರಲಿಲ್ಲ. ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ 1 ಲಕ್ಷ 80 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದೆವು. ನಂತರ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು ಒಂದೂವರೆ ವರ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದು, ಒಂದು ಮನೆಯನ್ನೂ ಸಹ ಬಡವರಿಗೆ ಕೊಡಲಿಲ್ಲ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಅವರ ಅವಧಿಯಲ್ಲಿ ಸಹ ಒಂದು ಮನೆಯನ್ನೂ ನೀಡಲಿಲ್ಲ" ಎಂದರು.

"ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಬಡವರ ಬಗ್ಗೆ ಕಾಳಿಜಿ ವಹಿಸಿ, 36 ಸಾವಿರ ಮನೆಗಳನ್ನು ಬಡವರಿಗೆ ಕೊಟ್ಟಿದ್ದೇವೆ. ಅತಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ 46 ಸಾವಿರ ಮನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿಗೆ ಇದೆಲ್ಲಾ ಯಾಕೆ ಸಾಧ್ಯವಾಗಲಿಲ್ಲ. ನಾಚಿಕೆಯಾಗಬೇಕು ಅವರಿಗೆ" ಎಂದು ಗುಡಿಗಿದರು.

ಇದನ್ನೂ ಓದಿ: ಭಾಷಾ ಮಸೂದೆ ಮರುಪರಿಶೀಲಿಸಿ: ಕೇರಳ ಸಿಎಂಗೆ ಸಿಎಂ ಸಿದ್ದರಾಮಯ್ಯ ಪತ್ರ

ಸಿಎಂ ಬದಲಾವಣೆ ವಿಚಾರ ಚರ್ಚೆ ರಾಜ್ಯದಲ್ಲಿ ಮುಂದುವರಿದಿದೆ. ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರಸ್ಪರ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಉಭಯ ನಾಯಕರು ಸ್ಪಷ್ಟಪಡಿಸಿದ್ದರು. ಆದರೂ ನಾಯಕತ್ವ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ.