ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವೇ ಇಲ್ಲ: ಸಚಿವ ಈಶ್ವರ್ ಖಂಡ್ರೆ
ಒಂದು ಬಾರಿ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿಯಲ್ಲಿ ತೆರವು ಮಾಡಿದ ಬಳಿಕ ಅಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಸಾಧ್ಯವೇ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.

Published : July 7, 2026 at 12:07 PM IST
ಬೀದರ್: ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಭೂಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಈಗ ಅರಣ್ಯಭೂಮಿ ತೆರವಿಗೆ ಆದೇಶವಾಗಿದ್ದು, ಇಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವೇ ಇರುವುದಿಲ್ಲ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಅರ್ಥವೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಅರಣ್ಯ ಇಲಾಖೆಯು ಎಚ್ಎಂಟಿ ಭೂಮಿಯನ್ನು ಅತಿಕ್ರಮಣ ಮಾಡಿದೆ, ರಿಯಲ್ ಎಸ್ಟೇಟ್ ದಂಧೆ ನಡೆಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿರುವುದು ಎಚ್ಎಂಟಿಯೋ ಹೊರತು ಅರಣ್ಯ ಇಲಾಖೆಯಲ್ಲ. ಇನ್ನು ಒಂದು ಬಾರಿ ಅರಣ್ಯ ಭೂಮಿ ಎಂದು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿಯಲ್ಲಿ ತೆರವು ಮಾಡಿದ ಬಳಿಕ ಅಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕೆಲವು ಅಧಿಕಾರಿಗಳು ಮುಖ್ಯಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ, ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಅನುಮತಿ ಇಲ್ಲದೆ ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿ ಡಿನೋಟಿಫಿಕೇಷನ್ಗೆ ಸುಪ್ರೀಂಕೋರ್ಟ್ನಲ್ಲಿ ಐಎ ಹಾಕಿದ್ದರು. ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಶೋಕಾಸ್ ನೋಟಿಸ್ ನೀಡಲಾಗಿತ್ತು. ಜೊತೆಗೆ ಈ ಐಎ ಹಿಂಪಡೆಯಲು ರಾಜ್ಯ ಸರ್ಕಾರ ಸಚಿವ ಸಂಪುಟದ ಅನುಮತಿಯನ್ನೂ ಪಡೆದಿದೆ. ಕೋರ್ಟ್ ಮೊರೆ ಹೋಗಿದೆ. ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಯ ಬಳಿಕ ಭೂ ಪರಿವರ್ತನೆ ಆಗದ ಯಾವುದೇ ಅರಣ್ಯ ಭೂಮಿ ಅರಣ್ಯವಾಗೇ ಉಳಿಯುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಇದು ಅರಣ್ಯವಾಗೇ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಈಗಲೂ ಎಚ್.ಎಂ.ಟಿ. ವಶದಲ್ಲಿರುವ ಭೂಮಿಯ ಪೈಕಿ 280 ಎಕರೆ ಪ್ರದೇಶದಲ್ಲಿ ಅರಣ್ಯ ಸ್ವರೂಪದ ನೆಡುತೋಪಿದೆ. ಪಕ್ಕದಲ್ಲಿರುವ ಪಾಳುಬಿದ್ದ ಕಟ್ಟಡಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ನಡೆಯುತ್ತದೆ. ಅರಣ್ಯ ಭೂಮಿಯನ್ನು ಅಕ್ರಮವಾಗಿ ಎಚ್.ಎಂ.ಟಿ. ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದೆ. 165 ಎಕರೆ ಭೂಮಿಯನ್ನು ಕೇವಲ 300 ಕೋಟಿ ರೂ.ಗೆ ಮಾರಾಟ ಮಾಡಿದೆ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಇದೆಲ್ಲವನ್ನೂ ಪರಿಶೀಲಿಸಲಿ ಎಂದು ಸವಾಲು ಹಾಕಿದರು.
7 ಕೋಟಿ ಕನ್ನಡಿಗರ ಆಸ್ತಿ: ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿ. ಇದು ಬೆಂಗಳೂರು ಜನರಿಗೆ ಅತ್ಯಗತ್ಯವಾದ ಶ್ವಾಸತಾಣ. ಲಾಲ್ ಬಾಗ್, ಕಬ್ಬನ್ ಪಾರ್ಕ್ಗಿಂತ ದೊಡ್ಡದಾದ ಅಂದರೆ 444 ಎಕರೆ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸುವುದು ತಮ್ಮ ಗುರಿಯಾಗಿತ್ತು. ಇದನ್ನು ಬಹಿರಂಗವಾಗಿ ಘೋಷಿಸಲಾಗಿದೆ. ಆದರೂ ಕುಮಾರಸ್ವಾಮಿ ರಿಯಲ್ ಎಸ್ಟೇಟ್ ದಂಧೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ ಎಂದರು.
ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿ ಕಳೆದುಕೊಂಡ ಶರಾವತಿ ಸಂತ್ರಸ್ತರಿಗೆ ಇನ್ನೂ ಭೂಮಿಯ ಹಕ್ಕು ನೀಡಲು ಸಾಧ್ಯವಾಗಿಲ್ಲ. ಕಾರಣ ಅವರಿಗೆ 1950ರ ದಶಕದಲ್ಲಿ ಅರಣ್ಯ ಭೂಮಿ ಮಂಜೂರು ಮಾಡುವಾಗ ಭೂ ಪರಿವರ್ತನೆ ಮಾಡಿರಲಿಲ್ಲ. ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಮಂಡಲದಲ್ಲಿ ಚರ್ಚಿಸಿ ಡಿನೋಟಿಫೈ ಮಾಡಲಾಗಿತ್ತು. ಆದರೆ ನ್ಯಾಯಾಲಯ 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಬಳಿಕ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ. ವಸ್ತು ಸ್ಥಿತಿ ಹೀಗಿರುವಾಗ ಎಚ್.ಎಂ.ಟಿ. ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಇತರರಿಗೆ ಭೂಮಿ ಮಾರಾಟ ಮಾಡಿರುವುದೇ ಅಕ್ರಮ ಎಂದು ತಿಳಿಸಿದರು.
ಎಚ್ಡಿಕೆ ಮೊದಲು ಎನ್ಎಂಡಿಸಿ, ವಿಐಎಸ್ಎಲ್ ಪುನಶ್ಚೇತನ ಮಾಡಲಿ: ಪಕ್ಕದ ರಾಜ್ಯದವರನ್ನು ನೋಡಿ ಕಲಿಯಿರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅದರ ಅಗತ್ಯ ನಮಗಿಲ್ಲ. ಕುಮಾರಸ್ವಾಮಿ ಅವರಿಗೆ ರಾಜ್ಯದ ಬಗ್ಗೆ ಅಷ್ಟು ಕಾಳಜಿ ಇದ್ದರೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡಲಿ, ಉಕ್ಕು ಸಚಿವಾಲಯದ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ ಪುನಶ್ಚೇತನ ಮಾಡಲಿ ಎಂದರು.
2014ರಲ್ಲಿ ಎನ್ಎಂಡಿಸಿ ಬಳ್ಳಾರಿ ಜಿಲ್ಲೆಯಲ್ಲಿ ಉಕ್ಕು ಕಾರ್ಖಾನೆ ಆರಂಭಿಸಿ, 50 ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿ ಸಾವಿರಾರು ಎಕರೆ ಭೂಮಿ ಪಡೆದಿದೆ. 12 ವರ್ಷವಾದರೂ ಈ ಕಾರ್ಖಾನೆ ಆರಂಭ ಆಗಿಲ್ಲ. ಮೊದಲು ಈ ಕಾರ್ಖಾನೆ ಪುನಶ್ಚೇತನ ಮಾಡಲಿ. ಭದ್ರಾವತಿಯಲ್ಲಿ ಭಾರತ ರತ್ನ ವಿಶ್ವೇಶ್ವರಾಯ ಅವರು ಸ್ಥಾಪಿಸಿದ್ದ ಉಕ್ಕಿನ ಕಾರ್ಖಾನೆ ಪುನಶ್ಚೇತನ ಮಾಡಲಿ ಎಂದು ತಿರುಗೇಟು ನೀಡಿದರು.
ಎಚ್.ಎಂ.ಟಿ. ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬೆಂಗಳೂರಿನಲ್ಲಿರುವ ಅರಣ್ಯ ಭೂಮಿಯ ಬೆಲೆ 14000 ಕೋಟಿ ಬೆಲೆ ಬಾಳುವ ಜಮೀನು ಎಂದು ಉಲ್ಲೇಖಿಸಿದೆ. ಅದರ ಮೇಲೆ ಕಣ್ಣಿಟ್ಟಿದ್ದವರು ಯಾರು ಎಂದು ಅವರೇ ನಿರ್ಧರಿಸಲಿ ಎಂದು ತಿಳಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೆಐಎಡಿಬಿಗಾಗಿ ಬೆಂಗಳೂರಿನ ಬೆಲೆಬಾಳುವ ಅರಣ್ಯ ಭೂಮಿ ಸ್ವಾಧೀನ ಪಡಿಸಿಕೊಂಡೋರು ಯಾರು? ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ತಾವು ಅರಣ್ಯ ಸಚಿವನಾಗಿದ್ದಾಗ ಬೆಂಗಳೂರಿನಲ್ಲಿ 10 ಸಾವಿರ ಕೂಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಿ ಗಿಡ ನೆಡಿಸಿದ್ದೇನೆ. ರಿಯಲ್ ಎಸ್ಟೇಟ್ನವರ ಪಾಲಾಗದಂತೆ ಹೆಸರುಘಟ್ಟ ಕೆರೆ ಪ್ರದೇಶದ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದೇನೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯಕ್ಕೆ ಆರ್ಥಿಕ ಹೊರೆಯಾದರೂ ಜುಲೈ 1ರಿಂದ ವಿಬಿ-ಜಿ ರಾಮ್ ಜಿ ಜಾರಿಗೆ: ಸಚಿವ ಈಶ್ವರ್ ಖಂಡ್ರೆ

