ETV Bharat / state

ಯಾವುದೇ ಸಂಸ್ಥೆ, ಸಂಘಟನೆ ಬ್ಯಾನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಹೆಚ್.ಕೆ.ಪಾಟೀಲ್

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್​​ಎಸ್) ಚಟುವಟಿಕೆ ನಿಷೇಧ ಆಗ್ರಹ ವಿಚಾರಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

there-is-no-proposal-before-government-to-ban-any-association-or-organization-minister-h-k-patil
ಸಚಿವ ಹೆಚ್.ಕೆ.ಪಾಟೀಲ್ (ETV Bharat)
author img

By ETV Bharat Karnataka Team

Published : October 18, 2025 at 1:06 PM IST

3 Min Read
Choose ETV Bharat

ಬೆಳಗಾವಿ: ರಾಜ್ಯದಲ್ಲಿ‌ ಸರ್ಕಾರಿ ಸ್ಥಳಗಳಲ್ಲಿ ಆರ್​​ಎಸ್​​ಎಸ್ ಚಟುವಟಿಕೆ ನಿಷೇಧಕ್ಕೆ ಆಗ್ರಹ ವಿಚಾರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದು, ''ಯಾವುದೇ ಸಂಘ, ಸಂಸ್ಥೆ ಮತ್ತು ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಸ್ತಾವನೆ ಮತ್ತು ಚಿಂತನೆ ನಮ್ಮ ಸರ್ಕಾರದ ಮುಂದಿಲ್ಲ'' ಎಂದು ಸ್ಪಷ್ಟಪಡಿಸಿದರು.

ಆರ್​​ಎಸ್​​ಎಸ್ ಸಂಘಟನೆ ರಿಜಿಸ್ಟರ್ ಆಗಿಲ್ಲ. ಹಾಗಾಗಿ, ಅದನ್ನು ಬ್ಯಾನ್ ಮಾಡಬೇಕೆಂಬ ಬಿ.ಕೆ.ಹರಿಪ್ರಸಾದ್​​ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ''ಬಿ.ಕೆ.ಹರಿಪ್ರಸಾದ್​ ಅವರ ಅಭಿಪ್ರಾಯದ ಬಗ್ಗೆ ಅವರನ್ನೇ ನೀವು ಕೇಳಬೇಕು. ನಮ್ಮ ಸರ್ಕಾರದ ಮುಂದೆ ಅಂತಹ ಯಾವುದೇ ಚಿಂತನೆ ಇಲ್ಲ'' ಎಂದು ಪುನರುಚ್ಚರಿಸಿದರು.

''ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಪದ್ಧತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿದ್ಧತೆ ಕೈಗೊಳ್ಳಲಾಗುವುದು. ಔಪಚಾರಿಕ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೇ ಇನ್ನೂ ದಿನಾಂಕ ಕೂಡ ನಿಗದಿ ಆಗಿಲ್ಲ. ಆದರೆ, ಪದ್ಧತಿಯಂತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡುವುದು ಸರ್ಕಾರದ ಚಿಂತನೆ ಆಗಿದೆ'' ಎಂದರು.

ಸಚಿವ ಹೆಚ್.ಕೆ.ಪಾಟೀಲ್ (ETV Bharat)

''ನವೆಂಬರ್ 1ರಂದು ಭುವನೇಶ್ವರಿ ದೇವಿಯನ್ನು ಗೌರವಿಸುತ್ತಾ, ಕರ್ನಾಟಕ‌ ಏಕೀಕರಣ ಆಗಿರುವುದನ್ನು ವೈಭವದಿಂದ ಆಚರಣೆ ಮಾಡುವುದು ಕರ್ನಾಟಕದಲ್ಲಿರುವ ಎಲ್ಲರ ಕರ್ತವ್ಯವಾಗಿದೆ. ಆ ಕೆಲಸವನ್ನು ದಯವಿಟ್ಟು ಎಲ್ಲರೂ ಮಾಡಬೇಕು. ಅವತ್ತು ಭುವನವೇಶ್ವರಿ ದೇವಿಯ ಮೆರವಣಿಗೆ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು'' ಎಂದು ಬೇರೆ ಭಾಷಿಕರಿಗೆ ಹೆಚ್.ಕೆ.ಪಾಟೀಲ್​ ಕಿವಿಮಾತು ಹೇಳಿದರು.

ಒಂದು ವೇಳೆ ಎಂಇಎಸ್ ಈ ಬಾರಿಯೂ ಕರಾಳ ದಿನ ಆಚರಿಸಿದರೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬ ವಿಚಾರಕ್ಕೆ, ''ಆ ಸಂದರ್ಭದಲ್ಲಿ ಜಿಲ್ಲಾಡಳಿತ ತನ್ನ ಸೂಕ್ತ ನಿಲುವು ತೆಗೆದುಕೊಳ್ಳಲಿದೆ'' ಎಂದು ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕುರುಬರನ್ನು ST ಪಟ್ಟಿಗೆ ಸೇರಿಸಲು ಆಗ್ರಹ: ಅ.24ರಂದು ವಿಜಯಪುರದಲ್ಲಿ ಸಭೆ- ಈಶ್ವರಪ್ಪ

ಸಂಪುಟ ಸಭೆಯ ತೀರ್ಮಾನವಿದು: ಈಗಾಗಲೇ, ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ನೀಡಲು ಮಾರ್ಗಸೂಚಿಗೆ ಸಚಿವ ಸಂಪುಟ ಸಭೆಯು ಗುರುವಾರ (ಅ.16) ಅನುಮೋದನೆ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಿ ಸ್ಥಳಗಳು, ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ RSS ಸಂಘಟನೆಯು ಶಾಖೆ, ಸಾಂಘಿಕ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲೆಗಳ ಮೈದಾನಗಳ ಸದ್ಬಳಕೆ ಮಾಡುವ ಸಂಬಂಧ ಸ್ಪಷ್ಟ ನೀತಿ ನಿಯಮಗಳೊಳಗೊಂಡ ವಿಸ್ತೃತ ಸರ್ಕಾರಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದ್ದರು.

ಪೊಲೀಸ್ ಮಹಾನಿರ್ದೇಶಕರ ಪತ್ರ: ಪೊಲೀಸ್ ಮಹಾನಿರ್ದೇಶಕರು 15.10.2025ರ ಪತ್ರದಲ್ಲಿ, ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು/ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಇತ್ಯಾದಿಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಗೆ ಮುಂಚಿತವಾಗಿ ಅನುಮತಿ ಪಡೆಯದೇ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೇ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ (Tresspass) ಎಂದು ಪರಿಗಣಿಸಲ್ಪಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ/ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘ ಆಯಾ ಸಾರ್ವಜನಿಕ ಆಸ್ತಿ/ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವ ಕುರಿತು ಪ್ರಸ್ತಾಪಿಸಿದ್ದರು.

ಸರ್ಕಾರದ/ಸರ್ಕಾರಿ ಸ್ವಾಮ್ಯದ/ನಿಗಮ/ಮಂಡಳಿಗಳ, ಶಾಲಾ - ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ / ಜಾಗಗಳು ನಾಗರೀಕರ ಸದ್ಬಳಕೆಗೆ ನಿರ್ದಿಷ್ಟಪಡಿಸಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಸಾರ್ವಜನಿಕರ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವ ದೃಷ್ಟಿಯಿಂದ ಕಾರ್ಯನೀತಿ ಸಂಬಂಧ ವಿಸ್ತೃತ ಸರ್ಕಾರಿ ಆದೇಶ ಹೊರಡಿಸಲು ಸಚಿವ ಸಂಪುಟ ತೀರ್ಮಾನಿಸಿತ್ತು.

ಇದನ್ನೂ ಓದಿ: ಅ.19ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: 7 ಕ್ಷೇತ್ರ, 14 ಅಭ್ಯರ್ಥಿಗಳು, 676 ಮತದಾರರು