SIR ಪ್ರಕ್ರಿಯೆಯಲ್ಲಿ ಅಕ್ರಮ, ರಾಜ್ಯ ಚುನಾವಣಾ ಆಯುಕ್ತ ರಾಜೀನಾಮೆ ನೀಡಬೇಕು: ಕೆ.ಎಸ್. ಈಶ್ವರಪ್ಪ ಆಗ್ರಹ
ಎಸ್ಐಆರ್ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳು ನಡೆಯುತ್ತಿವೆ. ಆದರೂ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಕುಳಿತು ಕೊಂಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

Published : July 4, 2026 at 5:47 PM IST
ಶಿವಮೊಗ್ಗ: ರಾಜ್ಯದಲ್ಲಿ ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳು ನಡೆಯುತ್ತಿವೆ. ಆದರೂ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಕುಳಿತುಕೊಂಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಅನ್ಬುಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ರಾಷ್ಟ್ರಭಕ್ತರ ಬಳಗದ ಮುಖಂಡರು ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಶನಿವಾರ ಶಿವಮೊಗ್ಗ ಪ್ರೆಸ್ಟ್ರಸ್ಟ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಸಮಸ್ಯಗಳಿವೆ. ಅಲ್ಲದೆ ಒಂದೇ ಕಡೆ ಕುಳಿತು ಎಸ್ಐಆರ್ ಅರ್ಜಿ ವಿತರಣೆ ಮಾಡಲಾಗುತ್ತಿದೆ. ಈ ಕುರಿತು ವಿಡಿಯೋ ಸಮೇತ ದೂರು ನೀಡಿದ್ರೂ ಸಹ ಕ್ರಮ ತೆಗೆದುಕೊಳ್ಳತ್ತಿಲ್ಲ. ಚುನಾವಣಾ ಆಯೋಗದವರೇ ಅಕ್ರಮಕ್ಕೆ ದಾರಿ ಮಾಡಿ ಕೊಟ್ಟಂತೆ ಆಗುತ್ತಿದೆ. ಇದರಿಂದ ರಾಜ್ಯ ಚುನಾವಣಾ ಆಯೋಗದವರು ಒಂದು ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದರು.
ಜನ ದೂರು ನೀಡಿದ್ರೂ ಸಹ ಇನ್ನೂ ಕ್ರಮ ತೆಗದುಕೊಳ್ಳಲಾಗಿಲ್ಲ. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಚುನಾವಣೆ ಎಂಬುದು ಹಬ್ಬವಿದ್ದಂತೆ. ಇದಕ್ಕೆ ಭಂಗ ತರುವಂತಹ ಪ್ರಯತ್ನ ಮಾಡಲಾಗುತ್ತಿದೆ. ಮದರಸ, ಮಸೀದಿಗಳಲ್ಲಿ, ಎಸ್ಐಆರ್ ನಡೆಸಲಾಗುತ್ತಿದೆ. ಶಾದಿ ಮಹಲ್ಗಳಲ್ಲಿ ಒಂದೇ ಸಮುದಾಯದ ಜನರನ್ನು ಸೇರಿಸಿ ಅವರಿಗೆ ಫಾರಂ ವಿತರಿಸಲಾಗುತ್ತಿದೆ. ಎಸ್ಐಆರ್ ಫಾರಂ ಅನ್ನು ಸಾಮೂಹಿಕವಾಗಿ ಭರ್ತಿ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಕೇಂದ್ರ ಚುನಾವಣಾ ಆಯೋಗ ಯಾವ ಉದ್ದೇಶದಿಂದ ಎಸ್ಐಆರ್ ಮಾಡುತ್ತಿದೆಯೋ ಅದರ ತದ್ವಿರುದ್ಧವಾದ ಕೆಲಸ ಮಾಡಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮ ನುಸುಳುಕೋರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಒಂದೇ ವ್ಯಕ್ತಿಯ ಹೆಸರನ್ನು ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಈ ರೀತಿಯ ಅಕ್ರಮಗಳು ಶಿವಮೊಗ್ಗದಲ್ಲಿ ನಡೆಯದಂತೆ ನಿಗಾ ವಹಿಸಲು ಆಗ್ರಹಿಸುತ್ತಿದ್ದೇನೆ ಎಂದರು.
ಆರ್ಎಸ್ಎಸ್, ಬಿಜೆಪಿ ಎಸ್ಐಆರ್ ಮೂಲಕ ಪ್ರಜಾಪ್ರಭುತ್ವ ನಿರ್ನಾಮ ಮಾಡಲಾಗುತ್ತಿದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ಕಟೋರ ಪದ ಬಳಸಿದ್ದು ಸರಿಯಲ್ಲ. ರಾಜ್ಯ ಚುನಾವಣಾ ಆಯುಕ್ತರೇ ಮನೆ, ಮನೆಗೆ ತೆರಳಿ ನೋಂದಣಿ ಮಾಡುವುದು ಮಾತ್ರ ಲೀಗಲ್ ಎಂದಿದ್ದಾರೆ. ಬುರ್ಕಾಗಳು, ಟೋಪಿಗಳು ಹಾಕಿಕೊಂಡು ಕಾಂಗ್ರೆಸ್ ಪರಿಷ್ಕರಣೆ ಮಾಡುತ್ತಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿಸುವ ಕುತಂತ್ರ ನಡೆದಿದೆ. ಹಿಂದೂ ಮತದಾರರ ಸಂಖ್ಯೆ ಕಡಿಮೆ ತೋರಿಸುವ ಯತ್ನ ನಡೆದಿದೆ. ಮುಸ್ಲಿಂ ಮತದಾರರನ್ನ ಹೆಚ್ಚು ಮಾಡಲು ಕಾಂಗ್ರೆಸ್ನಿಂದ ಕುತಂತ್ರ ನಡೆಯುತ್ತಿದೆ. ಹಿಂದೂಗಳ ಮತಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ದೂರಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆಯಾಗುತ್ತಿದೆ ಎಂದವರೇ ಈಗ ಮೂರೇ ದಿನಗಳಲ್ಲಿ ಅವರ ಬಣ್ಣ ತೋರಿಸಿದ್ದಾರೆ. ಎಸ್ಐಆರ್ ಪ್ರಾರಂಭವಾಗಿ ಮೂರೇ ದಿನಕ್ಕೆ ಕಾಂಗ್ರೆಸ್ ಬಣ್ಣ ಬಯಲಾಗಿದೆ. ರಾಜ್ಯದಲಿ ಚುನಾವಣಾ ಸಮಿತಿಯವರನ್ನು ಬಿಟ್ಟು ಬೇರೆ ರಾಜ್ಯದ ಅಧಿಕಾರಿಗಳನ್ನು ತಂದು ಎಸ್ಐಆರ್ ಮಾಡಿಸಬೇಕೆಂದು ಆಗ್ರಹಿಸಿದರು.
ಇವುಗಳನ್ನೂ ಓದಿ:

