ಮಳೆ ಬಂದರೆ ಮಂಗಳೂರು ಮುಳುಗುವುದೇಕೆ?: ಕಳೆದ ಒಂದು ದಶಕದಿಂದ ಮರುಕಳಿಸುತ್ತಿರುವ ಪ್ರವಾಹದ ಹಿಂದಿನ ಅಸಲಿ ಕಥೆ ಏನು?
ಪ್ರತಿ ವರ್ಷ ಮಳೆ ಬಂದಾಗ ಮಂಗಳೂರು ಮುಳುಗುವುದೇಕೆ? ಕಳೆದ ಒಂದು ದಶಕದಿಂದ ಮರುಕಳಿಸುತ್ತಿರುವ ಪ್ರವಾಹದ ಹಿಂದಿನ ಅಸಲಿ ಕಥೆ ಏನು? ಎಂಬ ಬಗ್ಗೆ ವಿನೋದ್ ಪುದು ಅವರು ನೀಡಿದ ವಿಶೇಷ ವರದಿ ಇಲ್ಲಿದೆ.

Published : July 9, 2026 at 3:24 PM IST
ಮಂಗಳೂರು: ಹಚ್ಚಹಸಿರಿನ ಬೆಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ನೆಲೆಸಿರುವ ಮಂಗಳೂರು, ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದ ತಾಣ. ಸುಂದರ ಕಡಲತೀರ, ದಟ್ಟವಾದ ಕಾಡು ಮತ್ತು ನದಿಗಳು ಮಂಗಳೂರಿಗೆ ಪ್ರಕೃತಿಯೇ ನೀಡಿರುವ ಅಪರೂಪದ ಭೌಗೋಳಿಕ ವೈಶಿಷ್ಟ್ಯ.
ಆದರೆ, ಇದೇ ನಗರದಲ್ಲಿಂದು ಮಳೆ ಬಂದರೆ ಜನ ಮೊದಲು ಆಕಾಶದತ್ತ ನೋಡುವುದಿಲ್ಲ; ತಮ್ಮ ಮನೆ, ಅಂಗಡಿ ಮತ್ತು ರಸ್ತೆಗಳತ್ತ ನೋಡುತ್ತಾರೆ. ಕಾರಣ, ಮಳೆ ಆರಂಭವಾದ ಕೆಲವೇ ಗಂಟೆಗಳಲ್ಲಿ ನಗರದ ಹಲವು ಭಾಗಗಳು ಜಲಾವೃತವಾಗುವುದು ಈಗ ಸಾಮಾನ್ಯ ಸಂಗತಿಯಾಗಿದೆ.
ಪಂಪ್‌ವೆಲ್, ಪಾಂಡೇಶ್ವರ, ಕಂಕನಾಡಿ, ಕೊಟ್ಟಾರ, ಬಲ್ಮಠ, ಬೆಂದೂರ್‌ವೆಲ್, ಬಿಜೈ, ಉರ್ವ, ಕುಲಶೇಖರ, ಬೋಳಾರ್, ಜೆಪ್ಪು, ಜಪ್ಪಿನಮೊಗರು, ತೋಚಿಲ, ಎಕ್ಕೂರು, ಗಣೇಶ್ ನಗರ... ಹೀಗೆ ಪಟ್ಟಿಯೇ ದೊಡ್ಡದಾಗುತ್ತ ಹೋಗುತ್ತದೆ. ಭಾರಿ ಮಳೆಯಾದಾಗ ನಗರದಲ್ಲಿ ಎಲ್ಲೋ ಒಂದು ಕಡೆ ರಸ್ತೆ ನದಿಯಾಗುತ್ತದೆ, ಇನ್ನೆಲ್ಲೋ ಮನೆಗೆ ನೀರು ನುಗ್ಗುತ್ತದೆ, ಮತ್ತೆ ಇನ್ನೊಂದೆಡೆ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಾರೆ. ಪ್ರತಿವರ್ಷ ಮಳೆಗಾಲದ ಬಳಿಕ ಅಧಿಕಾರಿಗಳ ಸಭೆ, ಸ್ಥಳ ಪರಿಶೀಲನೆ, ರಾಜಕಾಲುವೆ ಸ್ವಚ್ಛತೆ, ಹೊಸ ಯೋಜನೆಗಳ ಘೋಷಣೆ ನಡೆಯುತ್ತದೆ. ಆದರೆ, ಮಳೆಗಾಲದಲ್ಲಿ ಮತ್ತೆ ಅದೇ ಪ್ರದೇಶಗಳು ಜಲಾವೃತವಾಗುತ್ತವೆ. ಇದಕ್ಕೆ ಶಾಸ್ವತ ಪರಿಹಾರ ಏನು ಎನ್ನುವುದು ಸ್ಥಳೀಯ ಪ್ರಶ್ನೆಯಾಗಿದೆ.
ನೈಸರ್ಗಿಕ ಪ್ರವಾಹ ಮತ್ತು ನಗರ ಪ್ರವಾಹ – ಎರಡೂ ಮಂಗಳೂರಿನ ಸವಾಲು: ಮಂಗಳೂರಿನಲ್ಲಿ ಉಂಟಾಗುವ ಪ್ರವಾಹವನ್ನು ಎರಡು ವಿಭಾಗಗಳಲ್ಲಿ ನೋಡಬಹುದು. ಮೊದಲನೆಯದು ನದಿ ಪ್ರವಾಹ. ನಿರಂತರವಾಗಿ ಮಳೆಯಾದಾಗ ನೇತ್ರಾವತಿ ಮತ್ತು ಗುರುಪುರ ನದಿಗಳ ನೀರಿನ ಮಟ್ಟ ಏರಿ ತಗ್ಗು ಪ್ರದೇಶಗಳಿಗೆ ಹರಡುತ್ತದೆ. ಜಪ್ಪಿನಮೊಗರು, ಬೋಳಾರ್, ಉಳ್ಳಾಲ ಗಡಿಯ ಕೆಲವು ಪ್ರದೇಶಗಳು ಇದರಿಂದ ಪರಿಣಾಮ ಅನುಭವಿಸುತ್ತವೆ. ಎರಡನೆಯದ್ದು ನಗರ ಪ್ರವಾಹ. ಕೆಲವೇ ಗಂಟೆಗಳಲ್ಲಿ ಸುರಿಯುವ ಭಾರಿ ಮಳೆಯ ನೀರು ರಾಜಕಾಲುವೆ ಮತ್ತು ಚರಂಡಿಗಳ ಮೂಲಕ ಹೊರಹೋಗಲು ಸಾಧ್ಯವಾಗದಾಗ ರಸ್ತೆಗಳು, ವಸತಿ ಪ್ರದೇಶಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಜಲಾವೃತವಾಗುತ್ತವೆ. ಇಂದು ಮಂಗಳೂರಿನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಇದೇ ನಗರ ಪ್ರವಾಹ.

ಮಂಗಳೂರು ಏಕೆ ಮುಳುಗುತ್ತಿದೆ?: ಇದಕ್ಕೆ ಮೊದಲನೆಯ ಕಾರಣ ರಾಜಕಾಲುವೆಗಳ ಅತಿಕ್ರಮಣ. ಹಿಂದೆ ಅಗಲವಾಗಿ ಹರಿಯುತ್ತಿದ್ದ ಮಳೆನೀರು ಕಾಲುವೆಗಳ ಮೇಲೆ ಇಂದು ಮನೆಗಳು, ಅಂಗಡಿಗಳು, ಕಾಂಪೌಂಡ್ ಗೋಡೆಗಳು ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿವೆ. ಹಲವೆಡೆ ಕಾಲುವೆಗಳ ಅಗಲ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಎರಡನೆಯದ್ದು ತಗ್ಗು ಪ್ರದೇಶಗಳ ನಾಶ. ಹಿಂದೆ ಮಳೆ ನೀರು ಸಂಗ್ರಹವಾಗುತ್ತಿದ್ದ ಗದ್ದೆಗಳು, ಜೌಗು ಪ್ರದೇಶಗಳು ಮತ್ತು ಖಾಲಿ ಜಾಗಗಳು ಈಗ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಾಗಿವೆ. ಹೀಗಾಗಿ ನೀರು ಹೀರಿಕೊಳ್ಳುವ ಜಾಗವೇ ಉಳಿದಿಲ್ಲ. ಮೂರನೆಯದ್ದು ಹಳೆಯ ಚರಂಡಿ ವ್ಯವಸ್ಥೆ. ಮಂಗಳೂರಿನ ಬಹುತೇಕ ಒಳಚರಂಡಿಗಳು ಇಂದಿನ ಮಳೆಯ ತೀವ್ರತೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಅನೇಕ ಕಡೆ ಮಳೆನೀರು ಮತ್ತು ಒಳಚರಂಡಿ ಒಂದೇ ವ್ಯವಸ್ಥೆಯಲ್ಲಿ ಹರಿಯುವುದರಿಂದ ಮೊದಲ ಮಳೆಯಲ್ಲೇ ವ್ಯವಸ್ಥೆ ಕುಸಿಯುತ್ತದೆ. ನಾಲ್ಕನೆಯದ್ದು ಹವಾಮಾನ ಬದಲಾವಣೆ. ಹಿಂದೆ ದಿನವಿಡೀ ಸುರಿಯುತ್ತಿದ್ದ ಮಳೆ ಈಗ ಎರಡು ಅಥವಾ ಮೂರು ಗಂಟೆಗಳಲ್ಲಿ ಸುರಿಯುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಬೀಳುವುದರಿಂದ ನಗರ ಡ್ರೈನೇಜ್ ವ್ಯವಸ್ಥೆಯ ಮೇಲೆ ಏಕಕಾಲಕ್ಕೆ ಭಾರಿ ಒತ್ತಡ ಉಂಟಾಗುತ್ತಿದೆ. ಆದರೆ, ಈ ಬಾರಿ ಈತನಕ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ ಎನ್ನುವುದು ಸ್ಥಳೀಯರ ಮಾತು.
ಒಂದು ದಶಕದಿಂದ ಮರುಕಳಿಸುತ್ತಿರುವ ಕಥೆ: 2016ರಿಂದ ಇಲ್ಲಿಯವರೆಗೆ ಪ್ರತಿಯೊಂದು ಮಳೆಗಾಲದಲ್ಲೂ ಮಂಗಳೂರಿನ ಯಾವುದಾದರೂ ಭಾಗ ಜಲಾವೃತವಾಗಿರುವ ದಾಖಲೆಗಳಿವೆ. 2018ರಲ್ಲಿ ಭಾರಿ ಮಳೆಯ ಬಳಿಕ ಪಂಪ್‌ವೆಲ್, ಪಾಂಡೇಶ್ವರ ಮತ್ತು ಕೊಟ್ಟಾರ ಭಾಗಗಳು ನೀರಿನಲ್ಲಿ ಮುಳುಗಿದ್ದವು. 2019ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯ ಪರಿಣಾಮ ನಗರದಲ್ಲೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. 2022 ಮತ್ತು 2023ರಲ್ಲಿ ಕೆಲವೇ ಗಂಟೆಗಳ ಮಳೆಗೆ ಪ್ರಮುಖ ರಸ್ತೆಗಳೇ ಕೆರೆಯಂತಾಗಿದ್ದವು. 2024 ಮತ್ತು 2025ರಲ್ಲಿಯೂ ಅದೇ ಚಿತ್ರಣ ಮರುಕಳಿಸಿತು. ಪ್ರತಿ ಬಾರಿ ಒಂದೇ ಪ್ರಶ್ನೆ ಕೇಳಲಾಯಿತು. "ಇಷ್ಟೊಂದು ಅಭಿವೃದ್ಧಿಯ ನಡುವೆ ಮಂಗಳೂರು ಇನ್ನೂ ಏಕೆ ಮುಳುಗುತ್ತಿದೆ?" ಎನ್ನುವುದು. ಇದಕ್ಕೆ ಉತ್ತರ ಹುಡುಕಲು ಜಪ್ಪಿನಮೊಗರು - ತೋಚಿಲ ಪ್ರದೇಶದ ಕಥೆಯನ್ನು ನೋಡುವುದು ಸಾಕು.

ಪ್ರವಾಹದ ಜೀವಂತ ಉದಾಹರಣೆ: ಮಂಗಳೂರು ನಗರದ ಪ್ರವಾಹ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಜಪ್ಪಿನಮೊಗರು – ತೋಚಿಲ – ಗಣೇಶ್ ನಗರ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು. ಈ ಪ್ರದೇಶದಲ್ಲಿ ನೆರೆ ಕೇವಲ ಮಳೆಗಾಲದ ಸುದ್ದಿಯಲ್ಲ; ಅದು ಇಲ್ಲಿನ ಜನರ ಜೀವನದ ಭಾಗವಾಗಿದೆ. ಮಳೆ ಆರಂಭವಾದರೆ ಸಾಕು, ಮನೆಗಳೊಳಗೆ ನೀರು ನುಗ್ಗುತ್ತದೆಯೇ ಎಂಬ ಆತಂಕದಲ್ಲೇ ಇಲ್ಲಿನ ನಿವಾಸಿಗಳು ಬದುಕುತ್ತಾರೆ. ಈ ಪ್ರದೇಶ ಭೌಗೋಳಿಕವಾಗಿ ನೇತ್ರಾವತಿ ನದಿಯ ತಗ್ಗು ಪ್ರದೇಶದಲ್ಲಿದೆ. ನದಿಯ ನೀರಿನ ಮಟ್ಟ ಏರಿದಾಗ, ರಾಜಕಾಲುವೆಗಳ ಮೂಲಕ ನದಿಗೆ ಹರಿಯಬೇಕಾದ ಮಳೆನೀರು ಮತ್ತೆ ಹಿಂದಕ್ಕೆ ತಿರುಗಿ (ರಿವರ್ಸ್ ಫ್ಲೋ) ಜಪ್ಪಿನಮೊಗರು ಮತ್ತು ತೋಚಿಲ ಭಾಗದೊಳಗೆ ನುಗ್ಗುತ್ತದೆ. ಅದರ ಜೊತೆಗೆ ನಗರದಿಂದ ಹರಿದುಬರುವ ಮಳೆನೀರು ಕೂಡ ಇದೇ ಭಾಗದಲ್ಲಿ ಸೇರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ.
'ಅಭಿವೃದ್ಧಿಯ ಜೊತೆಗೆ ಸಮಸ್ಯೆಯೂ ಬೆಳೆದಿದೆ' – ಶಾಸಕ ವೇದವ್ಯಾಸ ಕಾಮತ್: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಕಾರ, ಮಂಗಳೂರಿನಲ್ಲಿ ಪ್ರವಾಹ ಹೆಚ್ಚಾಗಲು ನಗರಾಭಿವೃದ್ಧಿಯ ಸ್ವರೂಪವೂ ಒಂದು ಪ್ರಮುಖ ಕಾರಣವಾಗಿದೆ.

"ಮಂಗಳೂರು ಅಭಿವೃದ್ಧಿಯಾಗಿರುವುದು ಒಳ್ಳೆಯದೇ. ಆದರೆ, ಅಭಿವೃದ್ಧಿಯ ಜೊತೆಗೆ ರಾಜಕಾಲುವೆಗಳ ಮೇಲೆ ಅತಿಕ್ರಮಣವಾಗಿದೆ. ಹಿಂದೆ ಗದ್ದೆ ಮತ್ತು ಖಾಲಿ ಜಾಗಗಳಲ್ಲಿ ಹೀರಿಕೊಳ್ಳುತ್ತಿದ್ದ ಮಳೆ ನೀರು, ಇಂದು ಚರಂಡಿ ಮತ್ತು ರಾಜಕಾಲುವೆಗಳ ಮೂಲಕವೇ ಹರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ವಿಸ್ತರಣೆಯಿಂದ ನೈಸರ್ಗಿಕ ನೀರು ಹರಿಯುವ ಪ್ರದೇಶಗಳು ಕಣ್ಮರೆಯಾಗಿದ್ದು, ಇಂದಿನ ಮಳೆನೀರು ಸಂಪೂರ್ಣವಾಗಿ ಕೃತಕ ಚರಂಡಿಗಳ ಮೇಲೆ ಅವಲಂಬಿತವಾಗಿದೆ. ಹಾಗಂತ ಕೇವಲ ಚರಂಡಿ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತಿಯೊಂದು ಪ್ರದೇಶದ ನೀರಿನ ಹರಿವಿನ ಪ್ರಮಾಣವನ್ನು ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು. ಯಾವ ಪ್ರದೇಶದಲ್ಲಿ ಎಷ್ಟು ನೀರು ಬರುತ್ತದೆ, ಕ್ಯಾಚ್‌ಮೆಂಟ್ ಏರಿಯಾ ಎಷ್ಟು, ಚರಂಡಿಯ ಸಾಮರ್ಥ್ಯ ಎಷ್ಟು ಎಂಬುದನ್ನು ಇಂಜಿನಿಯರಿಂಗ್ ಅಧ್ಯಯನದ ಮೂಲಕ ತಿಳಿದುಕೊಂಡು ಕಾಮಗಾರಿ ಕೈಗೊಳ್ಳಬೇಕು. ವೈಜ್ಞಾನಿಕ ಯೋಜನೆಯಿಲ್ಲದೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಸರ್ಕಾರ ಮಾತ್ರದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ಅರಿತಿಕೊಳ್ಳಬೇಕಿದೆ. ರಾಜಕಾಲುವೆ, ಚರಂಡಿ ಅಥವಾ ಸರ್ಕಾರಿ ಜಾಗವನ್ನು ಸಾರ್ವಜನಿಕರು ಅತಿಕ್ರಮಿಸಿಕೊಂಡಿದ್ದರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ" ಎನ್ನುವುದು ಶಾಸಕ ಕಾಮತ್ ಅಭಿಪ್ರಾಯ.
"ಜಪ್ಪಿನಮೊಗರು ಪ್ರದೇಶದಲ್ಲಿ ದೊಡ್ಡ ಮಳೆನೀರು ಚರಂಡಿ ನಿರ್ಮಿಸಿ ಅದನ್ನು ನೇತ್ರಾವತಿ ನದಿಗೆ ಸಂಪರ್ಕಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಹಲವು ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾಗಿದೆ. ಆದರೆ, ಈ ಪ್ರದೇಶದ ಭೌಗೋಳಿಕ ಪರಿಸ್ಥಿತಿ ವಿಭಿನ್ನವಾಗಿದೆ. ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಚರಂಡಿಯ ನೀರು ನದಿಗೆ ಹರಿಯುವ ಬದಲು ಹಿಂದಕ್ಕೆ ಬರುತ್ತದೆ. ಈ ರಿವರ್ಸ್ ಫ್ಲೋ ಸಮಸ್ಯೆಗೆ ಎಲ್ಲೆಡೆ ಒಂದೇ ರೀತಿಯ ತಾಂತ್ರಿಕ ಪರಿಹಾರ ಸಾಧ್ಯವಿಲ್ಲ. ಆದರೂ ಸಾಧ್ಯವಿರುವ ಕಡೆಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ" ಎನ್ನುತ್ತಾರೆ ಶಾಸಕ ವೇದವ್ಯಾಸ ಕಾಮತ್.

'ಮೂರು ವರ್ಷ ನೆಮ್ಮದಿ.. ನಂತರ ಮತ್ತೆ ನೆರೆ' – ವೀಣಾ ಮಂಗಳ: ಜಪ್ಪಿನಮೊಗರು ವಾರ್ಡ್‌ನ ನಿಕಟಪೂರ್ವ ಕಾರ್ಪೊರೇಟರ್ ವೀಣಾ ಮಂಗಳ ಅವರ ಪ್ರಕಾರ, "ಈ ಭಾಗದಲ್ಲಿ ನೆರೆ ಸಮಸ್ಯೆ ಹೊಸದಲ್ಲ. ಹಲವು ದಶಕಗಳಿಂದ ಈ ಪ್ರದೇಶ ತಗ್ಗು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಜಲಾವೃತವಾಗುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ತಡೆಗೋಡೆ ಜನರಲ್ಲಿ ಹೊಸ ಭರವಸೆ ಮೂಡಿಸಿತ್ತು. ಸುಮಾರು ₹6.5 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾದ ನಂತರ ಮೂರು ವರ್ಷಗಳ ಕಾಲ ಜಪ್ಪಿನಮೊಗರು ಹಾಗೂ ಗಣೇಶ್ ನಗರ ಭಾಗದಲ್ಲಿ ನೆರೆ ಸಮಸ್ಯೆ ಬಹುತೇಕ ಇರಲಿಲ್ಲ. ಆದರೆ, ಕಳೆದ ವರ್ಷದ ಅತಿವೃಷ್ಟಿಯೇ ಮತ್ತೆ ಪರಿಸ್ಥಿತಿಯನ್ನು ಬದಲಿಸಿತು. ಭಾರಿ ಮಳೆಯಿಂದ ಹಳೆಯ ಕಪ್ಪು ಕಲ್ಲಿನ ತಡೆಗೋಡೆ ಹಲವೆಡೆ ಕುಸಿದುಹೋಯಿತು. ಅದರ ಪರಿಣಾಮ ಜಪ್ಪಿನಮೊಗರು, ಎಕ್ಕೂರು ಮತ್ತು ತೋಚಿಲ ಭಾಗ ಮತ್ತೆ ಜಲಾವೃತವಾಯಿತು. ಪ್ರಸ್ತುತ ಸುಮಾರು ₹98 ಲಕ್ಷ ವೆಚ್ಚದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಅನುದಾನದಲ್ಲಿ ಹೊಸ ಕಾಂಕ್ರೀಟ್ ತಡೆಗೋಡೆ ನಿರ್ಮಾಣವಾಗುತ್ತಿದ್ದು, ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
ನೆರೆಯ ನಿಜವಾದ ಚಿತ್ರ - ಜನರ ಅನುಭವವೇ ಸಾಕ್ಷಿ: ಈ ಬಗ್ಗೆ ಸರ್ಕಾರಿ ದಾಖಲೆಗಳೇ ಪ್ರವಾಹದ ಅಂಕಿ - ಅಂಶಗಳನ್ನು ಹೇಳುತ್ತವೆ. ಆದರೆ, ಅದರ ನಿಜವಾದ ತೀವ್ರತೆ ಸ್ಥಳೀಯರ ಅನುಭವದಲ್ಲೇ ಕಾಣುತ್ತದೆ. ಗಣೇಶ್ ನಗರದ ನಿವಾಸಿ ವಿದ್ಯಾಧರ್ ಕಳೆದ ವರ್ಷ ತಾವು ಅನುಭವಿಸಿದ ತೊಳಲಾಟವನ್ನು ಇಲ್ಲಿ ನೆನಪಿಸಿಕೊಂಡಿದ್ದು, "ಕಳೆದ ವರ್ಷ ನಮ್ಮ ಮನೆಗೆ ಮೂರು ಬಾರಿ ನೆರೆ ನೀರು ನುಗ್ಗಿತ್ತು. ಸುಮಾರು ಎರಡು ಅಡಿ ಎತ್ತರದವರೆಗೆ ನೀರು ಮನೆಯೊಳಗೆ ಬಂದಿತ್ತು. ನಮ್ಮ ಮನೆಯಷ್ಟೇ ಅಲ್ಲ, ಹಲವು ಮನೆಗಳು ಇದೇ ಪರಿಸ್ಥಿತಿ ಎದುರಿಸಿದ್ದವು. ಹಾನಿಗೊಳಗಾದ ತಡೆಗೋಡೆಯೇ ಈ ಸಮಸ್ಯೆಗೆ ಕಾರಣ. ಈಗ ತಡೆಗೋಡೆ ಕಾಮಗಾರಿ ಬಹುತೇಕ ಮುಗಿದಿದೆ. ಉಳಿದ ಸಣ್ಣ ಸಂಪರ್ಕ ಕಾಲುವೆಗಳನ್ನೂ ಅಭಿವೃದ್ಧಿಪಡಿಸಿದರೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತೋಚಿಲ ನಿವಾಸಿ ರಘು ಕೂಡ ಇದೇ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. "ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಬಂದಾಗ ರಸ್ತೆ ಪೂರ್ತಿ ನೀರಿನಿಂದ ತುಂಬುತ್ತಿತ್ತು. ಓಡಾಡುವುದಕ್ಕೂ ಕಷ್ಟವಾಗುತ್ತಿತ್ತು. ಹಳೆಯ ತಡೆಗೋಡೆ ಕುಸಿದಿದ್ದರಿಂದ ಸಮಸ್ಯೆ ಹೆಚ್ಚಾಗಿತ್ತು. ಹೊಸ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಬಹುತೇಕ ಮುಗಿದಿದೆ. ಅದು ಪೂರ್ಣಗೊಂಡರೆ ಸಮಸ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ" ಎನ್ನುತ್ತಾರೆ.
ಒಂದು ಪ್ರದೇಶದ ಸಮಸ್ಯೆಯಲ್ಲ: ಜಪ್ಪಿನಮೊಗರು – ತೋಚಿಲದ ಕಥೆ ಒಂದು ವಾರ್ಡ್‌ಗೆ ಮಾತ್ರ ಸೀಮಿತವಲ್ಲ. ಇಂದು ಪಂಪ್‌ವೆಲ್, ಕಂಕನಾಡಿ, ಬಲ್ಮಠ, ಬಿಜೈ, ಉರ್ವ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿವೆ. ವ್ಯತ್ಯಾಸವೆಂದರೆ, ಕೆಲವೆಡೆ ರಾಜಕಾಲುವೆ ಕಿರಿದಾಗಿದೆ. ಇನ್ನೂ ಕೆಲವೆಡೆ ಮಳೆನೀರಿಗೆ ಹೊರಹೋಗುವ ದಾರಿ ಇಲ್ಲ; ಮತ್ತೊಂದು ಕಡೆ ನದಿಯ ರಿವರ್ಸ್ ಫ್ಲೋ ಹೆಚ್ಚುವರಿ ಸಮಸ್ಯೆಯಾಗಿದೆ. ಒಟ್ಟಿನಲ್ಲಿ, ಜಪ್ಪಿನಮೊಗರು ಇಂದು ಮಂಗಳೂರು ನಗರಕ್ಕೆ ಒಂದು ಎಚ್ಚರಿಕೆಯ ಕನ್ನಡಿಯಂತಾಗಿದೆ.
ಪ್ರತಿ ಮಳೆಗಾಲಕ್ಕೂ ಅದೇ ಕಥೆ ಅದೇ ವ್ಯಥೆ, ಶಾಶ್ವತ ಪರಿಹಾರ ಯಾವಾಗ?: ಮಂಗಳೂರಿನಲ್ಲಿ ಪ್ರತಿವರ್ಷ ಮಳೆಗಾಲದ ನಂತರ ಒಂದೇ ರೀತಿಯ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಅಧಿಕಾರಿಗಳು ಜಲಾವೃತ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ರಾಜಕಾಲುವೆಗಳ ಹೂಳು ತೆರವು, ಚರಂಡಿ ವಿಸ್ತರಣೆ, ಹೊಸ ಕಾಮಗಾರಿಗಳ ಘೋಷಣೆಗಳು ಕೇಳಿಬರುತ್ತವೆ. ಕೆಲವೆಡೆ ಕಾಮಗಾರಿಗಳು ನಡೆಯುತ್ತವೆ. ಆದರೆ, ಮಳೆಗಾಲ ಆರಂಭವಾದಾಗ ಮತ್ತೆ ಅದೇ ರಸ್ತೆಗಳು ಜಲಾವೃತವಾಗುತ್ತವೆ, ಮತ್ತೆ ಅದೇ ಮನೆಗಳಿಗೆ ನೀರು ನುಗ್ಗುತ್ತದೆ, ಮತ್ತೆ ಅದೇ ಜನ ಸಂಕಷ್ಟ ಅನುಭವಿಸುತ್ತಾರೆ. ಈ ಚಕ್ರ ಕಳೆದ ಒಂದು ದಶಕದಿಂದ ನಿರಂತರವಾಗಿ ಮರುಕಳಿಸುತ್ತಿದೆ.

ತಜ್ಞರ ಅಭಿಪ್ರಾಯದಂತೆ, ಮಂಗಳೂರು ನಗರ ಪ್ರವಾಹದ ಸಮಸ್ಯೆಗೆ ಒಂದೇ ಕಾರಣವಿಲ್ಲ. ನಗರ ವಿಸ್ತರಣೆ, ನೈಸರ್ಗಿಕ ಜಲಮಾರ್ಗಗಳ ನಾಶ, ರಾಜಕಾಲುವೆಗಳ ಅತಿಕ್ರಮಣ, ಕಾಲುವೆಗಳ ಹೂಳು ತುಂಬಿಕೆ, ಘನ ತ್ಯಾಜ್ಯದ ಸಮಸ್ಯೆ, ಹಳೆಯ ಮಳೆನೀರು ಹರಿವಿನ ವ್ಯವಸ್ಥೆ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಅಲ್ಪಾವಧಿಯ ಅತಿವೃಷ್ಟಿ — ಇವೆಲ್ಲವೂ ಸೇರಿ ಸಮಸ್ಯೆಯನ್ನು ಸಂಕೀರ್ಣಗೊಳಿಸಿವೆ.
ಹವಾಮಾನ ಬದಲಾವಣೆಯ ಹೊಸ ಸವಾಲು: ಹಿಂದೆ ಕರಾವಳಿಯಲ್ಲಿ ದಿನವಿಡೀ ಸುರಿಯುತ್ತಿದ್ದ ಮಳೆ, ಈಗ ಎರಡು – ಮೂರು ಗಂಟೆಗಳಲ್ಲಿ ಸುರಿಯುತ್ತಿದೆ. ಇಂತಹ ಮಳೆಯನ್ನು ನಿಭಾಯಿಸುವ ಸಾಮರ್ಥ್ಯ ಹಳೆಯ ನಗರ ಡ್ರೈನೇಜ್ ವ್ಯವಸ್ಥೆಗೆ ಇಲ್ಲ. ಹೀಗಾಗಿ ಕೆಲವೇ ಗಂಟೆಗಳ ಮಳೆಯಲ್ಲೇ ರಸ್ತೆಗಳು ಕೆರೆಗಳಾಗುತ್ತವೆ. ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ, ನಗರದ ಕಾಂಕ್ರೀಟ್ ಪ್ರದೇಶಗಳು ಹೆಚ್ಚಾಗಿರುವುದರಿಂದ ಮಳೆನೀರು ನೆಲದೊಳಗೆ ಹೀರಿಕೊಳ್ಳುವುದಿಲ್ಲ. ಅದು ನೇರವಾಗಿ ರಸ್ತೆಗಳ ಮೂಲಕ ಚರಂಡಿಗೆ ಹರಿಯುತ್ತದೆ. ಆದರೆ, ಚರಂಡಿಗಳ ಸಾಮರ್ಥ್ಯ ಕಡಿಮೆಯಿರುವುದರಿಂದ ನೀರು ರಸ್ತೆಯಲ್ಲೇ ನಿಂತು ಪ್ರವಾಹ ಉಂಟಾಗುತ್ತದೆ.
ನಗರದಲ್ಲಿ ಮಳೆಗಾಲದ ಪ್ರವಾಹವು ಕೇವಲ ಪ್ರಕೃತಿಯ ಕೋಪವಲ್ಲ. ಅದು ಹಲವು ವರ್ಷಗಳ ನಗರ ಯೋಜನಾ ಲೋಪಗಳು, ಪರಿಸರ ನಿರ್ಲಕ್ಷ್ಯ, ಅತಿಕ್ರಮಣ, ಅಪೂರ್ಣ ಮಳೆನೀರು ನಿರ್ವಹಣೆ ಮತ್ತು ಬದಲಾಗುತ್ತಿರುವ ಹವಾಮಾನದ ಒಟ್ಟಾರೆ ಪರಿಣಾಮವಾಗಿದೆ. ಕಳೆದ ಹತ್ತು ವರ್ಷಗಳು ಒಂದೇ ಪಾಠ ಕಲಿಸಿವೆ — ತಾತ್ಕಾಲಿಕ ಪರಿಹಾರಗಳಿಂದ ಮಂಗಳೂರಿನ ಪ್ರವಾಹದ ಸಮಸ್ಯೆ ಬಗೆಹರಿಯುವುದಿಲ್ಲ. ರಾಜಕಾಲುವೆಗಳ ಪುನರುಜ್ಜೀವನ, ಅತಿಕ್ರಮಣ ತೆರವು, ವೈಜ್ಞಾನಿಕ ಡ್ರೈನೇಜ್ ವ್ಯವಸ್ಥೆ, ನದಿ ತೀರದ ರಕ್ಷಣೆ, ವೆಟ್‌ಲ್ಯಾಂಡ್ ಸಂರಕ್ಷಣೆ, ತಾಂತ್ರಿಕ ಯೋಜನೆ ಮತ್ತು ಜನಸಹಭಾಗಿತ್ವ —ಇವೆಲ್ಲವೂ ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ "ಮಳೆ ಬಂದರೆ ಮುಳುಗುವ ಮಂಗಳೂರು" ಎಂಬ ಗುರುತನ್ನು ಬದಲಾಯಿಸಲು ಸಾಧ್ಯ.

