ಪತಿಯಿಂದ ಪತ್ನಿ ಹತ್ಯೆ ಪ್ರಕರಣ: ಸುಪಾರಿ ಪಡೆದಿದ್ದ ತಮಿಳುನಾಡು ಮೂಲದ ಮತ್ತೋರ್ವ ಆರೋಪಿಯ ಬಂಧನ
ಪತಿಯೊಬ್ಬರು ಪತ್ನಿಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Published : January 10, 2026 at 5:53 PM IST
ಬೆಂಗಳೂರು: ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಪಿಸ್ತೂಲ್‌ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯ ಪಾತ್ರವಿರುವುದು ಬಯಲಾಗಿದೆ. ಬಂಧಿತ ಆರೋಪಿ ಪತಿ ಬಾಲಮುರುಗನ್ ತನ್ನ ಪತ್ನಿಯನ್ನ ಹತ್ಯೆ ಮಾಡಲು ತಮಿಳುನಾಡಿನ ಪುಡಿ ರೌಡಿಯೊಬ್ಬನಿಗೆ ಒಂದೂವರೆ ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂಬ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ. ಈ ಸಂಬಂಧ ಪೊಲೀಸರು ತಮಿಳುನಾಡಿನ ಸೇಲಂ ಮೂಲದ ಮೌಳೇಶ್ ಎಂಬಾತನನ್ನ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಅವರು ಮಾತನಾಡಿದ್ದು, 'ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಗುಂಡಿಟ್ಟು ಕೊಂದು ನಂತರ ಪೊಲೀಸ್ ಠಾಣೆಗೆ ಬಂದು ವಿವರ ನೀಡಿರುತ್ತಾನೆ. ಈ ಸಂಬಂಧ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ವ್ಯಕ್ತಿಯನ್ನು ಬಂಧಿಸಿ ತನಿಖೆಯನ್ನು ಶುರು ಮಾಡಿದ್ದರು. ಆ ವ್ಯಕ್ತಿಗೆ ಪಿಸ್ತೂಲ್ ಎಲ್ಲಿಂದ ಸಿಕ್ಕಿತು? ಕೊಲೆ ಮಾಡಲು ಯಾರಾದ್ರು ಸಹಚರರು ಇದ್ರಾ? ಎಂಬ ಬಗ್ಗೆ ತನಿಖೆ ಮುಂದುವರೆಸಿದ್ದರು' ಎಂದಿದ್ದಾರೆ.
'ಆಗ ಈ ಕೃತ್ಯಕ್ಕೆ ಬೇರೆಯವರ ಸಹಕಾರ ಪಡೆದುಕೊಂಡಿರುತ್ತಾನೆ. ಆನ್‌ಲೈನ್ ಮೂಲಕ ಸೇಲಂ ಮೂಲದ ಮೌಳೇಶ್ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದ. ಆತ ಇವನಿಂದ ಕೊಲೆ ಕೃತ್ಯಕ್ಕೆ ಒಂದೂವರೆ ಲಕ್ಷ ಹಣವನ್ನು ಪಡೆದುಕೊಂಡಿರುತ್ತಾನೆ. ನಂತರ ಅವನು ಕೃತ್ಯ ಎಸಗುವುದಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಇವನೊಂದಿಗೆ ಮೂರು ದಿನ ಇರುತ್ತಾನೆ. ಆದರೆ, ಕೃತ್ಯ ಎಸಗುವ ದಿನ ಆರೋಪಿ ಹೇಳದೇ ಕೇಳದೆ ತಮಿಳುನಾಡಿಗೆ ವಾಪಸ್ ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನನ್ನು ನಾನು ಹುಡುಕಾಡಿದಾಗ ಈಗಾಗಲೇ ಕಳ್ಳತನ ಪ್ರಕರಣವೊಂದರಲ್ಲಿ ಅವನು ತಮಿಳುನಾಡಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬುದು ತಿಳಿದು ಬಂತು. ಇದೀಗ ಅವನನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮಾಡುತ್ತಿದ್ದೇವೆ. ಬಾಲಮುರುಗನ್ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ' ಎಂದಿದ್ದಾರೆ.
ಬಾಲಮುರುಗನ್ ಅವರ ಸೂಚನೆಯಂತೆ ಮೌಳೇಶ್ ಅವರು ಮೃತ ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳ ಮತ್ತು ಆಕೆ ಓಡಾಡುವ ರಸ್ತೆಗಳಲ್ಲಿ ಕೆಲ ದಿನಗಳ ಕಾಲ ರೆಕ್ಕಿ ನಡೆಸಿದ್ದಾರೆ. ಬಾಲಮುರುಗನ್ ರೆಕ್ಕಿ ಮಾಡಿದ್ದರೆ ಗೊತ್ತಾಗುತ್ತೆ ಎಂದು ಮೌಳೇಶ್ ಎಂಬುವವರು ಚಲನವಲನ ಗಮನಿಸಿ ಅವರಿಗೆ ಮಾಹಿತಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಶಿರಸಿ: ಮದುವೆಯಾಗಲು ನಿರಾಕರಿಸಿದ ಯುವತಿಯ ಕೊಲೆಗೈದವ ಆತ್ಮಹತ್ಯೆ

