ETV Bharat / state

ಅಟ್ಟಿಕಾ ಗೋಲ್ಡ್ ಸಂಸ್ಥೆಯೊಂದಿಗೆ ನನಗೆ ಸಂಬಂಧವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿ, ನಾನೇ ಮಾಲೀಕ ಎಂದ ಬೊಮ್ಮನಹಳ್ಳಿ ಬಾಬು : ಹೈಕೋರ್ಟ್​ನಿಂದ ನೋಟಿಸ್

ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಸಂಬಂಧ ಹೈಕೋರ್ಟ್‌ ಬೊಮ್ಮನಹಳ್ಳಿ ಬಾಬು ಎಂಬುವರಿಗೆ ನೋಟಿಸ್ ಜಾರಿ ಮಾಡಿದೆ.

High court
ಹೈಕೋರ್ಟ್‌ (ETV Bharat)
author img

By ETV Bharat Karnataka Team

Published : July 4, 2026 at 8:23 PM IST

1 Min Read
Choose ETV Bharat

ಬೆಂಗಳೂರು : ಅಟ್ಟಿಕಾ ಗೋಲ್ಡ್ ಸಂಸ್ಥೆಯೊಂದಿಗೆ ನನಗೆ ಸಂಬಂಧವಿಲ್ಲ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಸಂಬಂಧ ಹೈಕೋರ್ಟ್‌ ಸಂಸ್ಥೆಯ ಪಿ. ಎಸ್‌. ಅಯೂಬ್‌ ಅಲಿಯಾಸ್‌ ಬೊಮ್ಮನಹಳ್ಳಿ ಬಾಬುಗೆ ನೋಟಿಸ್‌ ಜಾರಿಗೊಳಿಸಿದೆ.

ಪ್ರಕರಣ ರದ್ದು ಕೋರಿ ಮಹಾರಾಷ್ಟ್ರದ ಸಾಂಗ್ಲಿಯ ಭಾಗ್ವತ್‌ ವಸಂತ್‌ ತಮ್‌ಖಡೆ, ತಮಿಳುನಾಡಿನ ಚೆಟ್ಟಿಕುಲಂನ ಥಾನೇಶ್‌ ಕುಮಾರ್‌ ಮತ್ತು ತೂತುಕುಡಿಯ ವೆಂಕಟೇಶ್‌ ವೆಲ್ಲೈಸಮಿ ಮತ್ತು ಬೆಂಗಳೂರಿನ ಅಕ್ಕಿಪೇಟೆಯ ಆರ್‌. ಮಿಥುನ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಅಟ್ಟಿಕಾ ಗೋಲ್ಡ್‌ನ ಮಾಜಿ ನೌಕರನ ವಿರುದ್ಧ ಚಿನ್ನ ಕಳವು ದೂರಿನ ಮೇರೆಗೆ ಬಾಬು ದಾಖಲಿಸಿದ್ದ ಪ್ರಕರಣದ ಎಫ್‌ಐಆರ್‌ಗೆ ನ್ಯಾಯಾಲಯ ತಡೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಿ. ಎಸ್‌. ಅಯೂಬ್‌ ಅಲಿಯಾಸ್‌ ಬೊಮ್ಮನಹಳ್ಳಿ ಬಾಬು ಈ ಹಿಂದೆ ಅಟ್ಟಿಕಾ ಗೋಲ್ಡ್​ನೊಂದಿಗೆ ಸಂಬಂಧವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ ಮಾಜಿ ನೌಕರರ ವಿರುದ್ಧ ಚಿನ್ನ ಕಳವಿನ ದೂರಿನಲ್ಲಿ ತಾನೇ ಅಟ್ಟಿಕಾ ಗೋಲ್ಡ್​​ ಮಾಲೀಕನೆಂದು ಉಲ್ಲೇಖಿಸಿದ್ದಾರೆ. ಹಾಗಾಗಿ, ಮೊದಲು ಅವರ ವಿರುದ್ಧ ಕ್ರಮ ಜರುಗಿಸಲು ನ್ಯಾಯಾಲಯ ಆದೇಶಿಸಬೇಕೆಂದು ಕೋರಿದರು.

ಅಲ್ಲದೇ, ಅರ್ಜಿದಾರರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ದೂರು ಸಲ್ಲಿಸಿದ್ದಾರೆ. ಅವರಿಗೂ ಚಿನ್ನ ಕಳವು ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ಈ ವೇಳೆ ಸರ್ಕಾರದ ಪರ ವಕೀಲರು, ಅಟ್ಟಿಕಾ ಗೋಲ್ಡ್​ ಸಂಸ್ಥೆಯೊಂದಿಗೆ ಸಂಬಂಧವಿಲ್ಲ ಎಂದು ಕೆಲ ಕೇಸ್​​ಗಳಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಈ ಪ್ರಕರಣದ ದೂರಿನಲ್ಲಿ ತಾನೇ ಅಟ್ಟಿಕಾ ಗೋಲ್ಡ್​ ಮಾಲೀಕನೆಂದು ಹೇಳಿದ್ದಾರೆ ಎಂದರು.

ನಂತರ ನ್ಯಾಯಾಲಯ ಬೊಮ್ಮನಹಳ್ಳಿ ಬಾಬು ದಾಖಲಿಸಿದ್ದ ಪ್ರಕರಣದ ಎಫ್‌ಐಆರ್‌ಗೆ ತಡೆ ನೀಡಿ, ಬಾಬು ಸಲ್ಲಿಸಿರುವ ಪ್ರಮಾಣಪತ್ರ, ಪ್ರಕರಣದ ದಾಖಲೆ ಹಾಜರುಪಡಿಸಲು ಸೂಚನೆ ನೀಡಿ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.

ಇದನ್ನೂ ಓದಿ : ಕಾರಿಗೆ ₹53 ಸಾವಿರ ಇಎಂಐ ಪಾವತಿಸುವ ವ್ಯಕ್ತಿ ಅನಾರೋಗ್ಯ ಪೀಡಿತ ಮಗುವಿನ ಪೋಷಣೆಗೆ ಜೀವನಾಂಶಕ್ಕೆ ನಿರಾಕರಿಸುವಂತಿಲ್ಲ: ಹೈಕೋರ್ಟ್​