ETV Bharat / state

ಕಂಪನಿ ಉದ್ಯೋಗಿ ಮೇಲೆ ಮಾಲೀಕನಿಂದ ಅತ್ಯಾಚಾರವೆಸಗಿದ ದೃಶ್ಯಗಳನ್ನು ಹಂಚಿಕೊಂಡ ಪತ್ನಿ: ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್​

ಕಂಪನಿ ಉದ್ಯೋಗಿಯ ಮೇಲೆ ಮಾಲೀಕನಿಂದ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಹಂಚಿಕೊಂಡ ಪತ್ನಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್​ ನಿರಾಕರಿಸಿದೆ.

High Court
ಹೈಕೋರ್ಟ್​ (ETV Bharat)
author img

By ETV Bharat Karnataka Team

Published : July 2, 2026 at 8:08 PM IST

2 Min Read
Choose ETV Bharat

ಬೆಂಗಳೂರು: ಖಾಸಗಿ ಕಂಪನಿಯ ಮಾಲೀಕನೊಂದಿಗೆ ಮಹಿಳಾ ಉದ್ಯೋಗಿಯೊಬ್ಬರು ಕಳೆದಿದ್ದ ಖಾಸಗಿ ದೃಶ್ಯಗಳನ್ನು ಆ ಮಹಿಳೆಯ ಪತಿ ಹಾಗೂ ಸಂಬಂಧಿಕರಿಗೆ ವಾಟ್ಸ್​ಆ್ಯಪ್​ ಮೂಲಕ ಹರಿಬಿಟ್ಟ ಆರೋಪದಲ್ಲಿ ಮಾಲೀಕನ ಪತ್ನಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಈ ಸಂಬಂಧ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಯನ್ನು ರದ್ದುಕೋರಿ ಆರೋಪಿತರಾಗಿರುವ ಜಯಂತಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೇ, ಪ್ರಕರಣದಲ್ಲಿ ಗಂಭೀರವಾದ ಸಾಕ್ಷ್ಯಾಧಾರಗಳಿವೆ. ಪ್ರಸ್ತುತ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಕಾನೂನು ಪ್ರಕಾರ ವಿಚಾರಣೆ ಎದುರಿಸಬೇಕಾಗಿದೆ ಎಂದು ತಿಳಿಸಿದೆ. ಅಲ್ಲದೆ, ವಿದ್ಯುನ್ಮಾನ ಮಾದ್ಯಮಗಳ ಮೂಲಕ ಅಶ್ಲೀಲವಿರುವ ಅಂಶಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್​ 67ರನ್ನು ಸೇರ್ಪಡೆ ಮಾಡಿರುವ ಶಾಸನ ಸಭೆಯ ಉದ್ದೇಶವಾಗಿದೆ. ಆದ್ದರಿಂದ ಸ್ಪಷ್ಟ ಲೈಂಗಿಕ ಅಂಶಗಳನ್ನು ಹೊಂದಿದ ಎಂಬ ಪದವನ್ನು ಕೇವಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ರವಾನಿಸುವ, ಪ್ರಸಾರ ಮಾಡುವ ಮೂಲಕ ಮಹಿಳೆಯರು, ಮಕ್ಕಳು ಅಥವಾ ಯಾವುದೇ ವ್ಯಕ್ತಿಯ ಶೋಷಣೆಯನ್ನು ತಡೆಯುವುದು ಕಾಯಿದೆಯ ಮುಖ್ಯ ಆಶಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಆದ್ದರಿಂದ, ಪ್ರಕರಣದ ಸತ್ಯಾಸತ್ಯತೆಯು ಸಂಪೂರ್ಣ ವಿಚಾರಣೆಯಿಂದ ಮಾತ್ರ ಹೊರಬರಬೇಕಾಗಿದೆ. ಹೀಗಾಗಿ, ಈ ಹಂತದಲ್ಲಿ ಪ್ರಕರಣವನ್ನು ರದ್ದುಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ದೂರುದಾರೆ ಮಹಿಳೆಯು ನಗರದ ಖಾಸಗಿ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಕಂಪನಿಯ ಮಾಲೀಕ ಆಕೆಗೆ ವಂಚನೆ ಹಾಗೂ ಬೆದರಿಕೆ ಹಾಕಿ ಹೋಟೆಲ್​​ವೊಂದರಲ್ಲಿ ಅತ್ಯಾಚಾರ ಎಸಗಿದ್ದ ಎಂಬ ಆರೋಪವಿತ್ತು. ಅಲ್ಲದೇ, ಆ ದೃಶ್ಯಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದನು. ಈ ವಿಚಾರ ತಿಳಿದ ಮಾಲೀಕನ ಪತ್ನಿ ಜಯಂತಿ, ತನ್ನ ಮೊಬೈಲ್​​ನಿಂದ ಸಂತ್ರಸ್ತೆಯ ಪತಿ ಹಾಗೂ ಸಂಬಂಧಿಕರಿಗೆ ಆ ಅಶ್ಲೀಲ ವಿಡಿಯೋಗಳನ್ನು ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿ ಸಾಮಾಜಿಕವಾಗಿ ಆಕೆಯ ಜೀವನದ ಮೇಲೆ ಕಳಂಕ ತಂದಿದ್ದರು. ಈ ಸಂಬಂಧ ಸಂತ್ರಸ್ತೆ ರಾಜಾಜಿನಗರ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ದೂರುದಾಖಲಿಸಿಕೊಂಡಿದ್ದ ಪೊಲೀಸರು, ವಿಚಾರಣೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಮೊಬೈಲ್ ಕುರಿತಂತೆ ವಿಧಿವಿಜ್ಞಾನ ವರದಿಯಲ್ಲಿ ವಿಡಿಯೋ ಪತ್ತೆಯಾಗಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ : ವಿದೇಶದಲ್ಲಿರುವ ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್