ETV Bharat / state

ಪಂಚ ರಾಜ್ಯಗಳ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್​ ಇತಿಶ್ರೀ ಹಾಡಬಹುದು: ಶಾಸಕ ಹೆಚ್.ಸಿ. ಬಾಲಕೃಷ್ಣ

ಹೈಕಮಾಂಡ್​ಗೆ ನಾಯಕತ್ವ ಬದಲಾವಣೆ ಚರ್ಚೆಗೊಂದು ಇತಿಶ್ರೀ ಹಾಡಿ ಎಂಬುದಷ್ಟೇ ನಮ್ಮ ಆಗ್ರಹ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.

H C BALAKRISHNA
ಶಾಸಕ ಹೆಚ್.ಸಿ. ಬಾಲಕೃಷ್ಣ (ETV Bharat)
author img

By ETV Bharat Karnataka Team

Published : March 2, 2026 at 8:21 PM IST

4 Min Read
Choose ETV Bharat

ಬೆಂಗಳೂರು: ಐದು ರಾಜ್ಯಗಳ ಚುನಾವಣೆ ಮುಗಿದ ಬಳಿಕ ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಒಂದು ತೀರ್ಮಾನ ಮಾಡಬಹುದು ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸ್ನೇಹಿತರು ಕೇಳಿದರು, ಹೀಗಾಗಿ ಒಂದು ಪಾರ್ಟಿ ಕೊಟ್ಟಿದ್ದೆ.‌ ಬರ್ತಡೇ ಹಿನ್ನೆಲೆ ಊಟಕ್ಕೆ ಕರೆದಿದ್ವಿ ಸೇರಿದ್ವಿ. ಅಲ್ಲಿ ಲೋಕಾಭಿರಾಮವಾಗಿ ಚರ್ಚೆಯಾಗಿದೆ. ಸುಮಾರು ಜನ ಹಿರಿಯರು ಬಂದಿದ್ದರು. ಆಶೀರ್ವಾದ ಮಾಡಿ ಹೋದರು. ಬಹಳಷ್ಟು ಮಂತ್ರಿಗಳು ಕೂಡ ಬಂದಿದ್ದರು. ಕೆಲವು ಮಂತ್ರಿಗಳು ಬಣದ ಪರವಾಗಿ ಏನು ಬಂದಿರಲಿಲ್ಲ. ನಾನು ಕೆಲವು ಮಂತ್ರಿಗಳನ್ನು ಕರೆದಿದ್ದೆ. ನನಗೆ ವಿಶ್ ಮಾಡುವುದಕ್ಕೆಂದು ಕೆಲವು ಮಂತ್ರಿಗಳು ಕೂಡ ಬಂದಿದ್ದರು. ಇದರಲ್ಲಿ ಬಣದ ರಾಜಕೀಯ ಏನು ಇಲ್ಲ. ಡಿಕೆ ಪರ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಚರ್ಚೆ ಏನು ಇಲ್ಲ. ಇದಕ್ಕೊಂದು ಇತಿಶ್ರೀ ಹಾಡಿ ಎಂಬುದಷ್ಟೇ ನಮ್ಮ ಆಗ್ರಹ. ಪಕ್ಷಕ್ಕೆ ಇದರಿಂದ ಡ್ಯಾಮೇಜ್ ಆಗಬಾರದು ಎಂದು ತಿಳಿಸಿದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಇದ್ದುಕೊಂಡು ಯಾವುದೋ ಸಣ್ಣ ವಿಚಾರಕ್ಕೆ ಡ್ಯಾಮೇಜ್ ಆಗಬಾರದು. ಡ್ಯಾಮೇಜ್ ಕಂಟ್ರೋಲ್ ಮಾಡಿ ಇದಕ್ಕಾಗಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಏನಾದ್ರೂ ಒಂದು ಇತ್ಯರ್ಥಪಡಿಸಿ. ಅವರು ನಮ್ದು, ಇವರು ನಮ್ದು ಎಂದು ಹೇಳುವ ಬದಲು, ಎರಡು ವರ್ಷ ಬಾಯಿ ಮುಚ್ಕೊಂಡು ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಲಿ. ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಹೈಕಮಾಂಡ್ ಹೇಳಿದ್ರೆ ಅಷ್ಟೇ ಸಾಕು. ಮೊನ್ನೆ ನಡೆದ ಡಿನ್ನರ್ ಮೀಟಿಂಗ್​​ನಲ್ಲಿ ಲೋಕಾಭಿರಾಮವಾಗಿ ಚರ್ಚೆಯಾಗಿದೆ ಅಷ್ಟೇ. ಹೈಕಮಾಂಡ್ ಇದಕ್ಕೊಂದು ಅಂತಿಮ ರೂಪ ಎಳೆಯಬೇಕು ಎಂಬುದಷ್ಟೇ ಶಾಸಕರ ಅಭಿಪ್ರಾಯ. ನೀವು ಯಾರನ್ನು ಇಟ್ಕೊಳ್ತಿರೋ ಯಾರನ್ನು ಮುಂದುವರಿಸುತ್ತಿರೋ ಅನ್ನೋದು ಚರ್ಚೆ ಅಲ್ಲ ಎಂದರು.

ಈ ಚರ್ಚೆಗೊಂದು ಇತಿಶ್ರೀ ಹಾಡಿ ಎಂಬುದಷ್ಟೇ ನಮ್ಮ ಆಗ್ರಹ. ಹೈಕಮಾಂಡ್ ಏನು ನಿರ್ಧಾರ ಮಾಡಿದೆ. ಏನು ಮಾತಾಡ್ಕೊಂಡಿದ್ದೀರಾ ಮಾತಾಡಿದಿರೋ ಇಲ್ವೋ ಇದೆಲ್ಲವೂ ಒಂದು ಅಂತಿಮ ನಿರ್ಧಾರಕ್ಕೆ ಬಂದು ಬಿಡಲಿ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬರ್ತಾ ಇದೆ. ಇದೆಲ್ಲದಕ್ಕೂ ಒಂದು ಅಂತಿಮ ರೂಪ ಬೇಕಲ್ಲ. ಜನರು ಹೋದಲ್ಲಿ ಬಂದಲ್ಲಿ ಇದನ್ನೇ ಕೇಳ್ತಿದ್ದಾರೆ. ಯಾವ ಹಳ್ಳಿಗೆ ಹೋದರು ನಾಯಕತ್ವದ ವಿಚಾರವನ್ನೇ ಕೇಳ್ತಿದ್ದಾರೆ. ಏನಾಯ್ತು ಎಂಬುದನ್ನೇ ಎಲ್ಲರೂ ಕೇಳ್ತಿದ್ದಾರೆ. ಅದಕ್ಕೊಂದು ಅಂತಿಮ ರೂಪ ಹೈಕಮಾಂಡ್ ಕೊಡಲಿ. ನೀವು ಏನೇ ನಿರ್ಧಾರವನ್ನು ತಿಳಿಸಿ ಹೈಕಮಾಂಡ್ ಮನಸಲ್ಲಿ ಏನಿದೆಯೋ ನಮಗಂತೂ ಗೊತ್ತಿಲ್ಲ. ಅವರ ಪರ, ಇವರ ಪರ ಅಂತ ನಾವಂತೂ ಕೇಳುತ್ತಿಲ್ಲ. ಇದಕ್ಕೊಂದು ಅಂತಿಮ ತೆರೆ ಎಳಿರಿ, ಚರ್ಚೆ ನಿಲ್ಲಿಸಿ ಎಂಬುದಷ್ಟೇ ನಮ್ಮ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.

ಈ ಚರ್ಚೆಗೊಂದು ತೆರೆ ಎಳೆಯಿರಿ ಎಂಬುದಷ್ಟೇ ನಮ್ಮ ಅಭಿಪ್ರಾಯ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಸಹಜ. ಬಹಳ ಒಳ್ಳೆ ಕೆಲಸ ಮಾಡಿ ಒಂದು ಸಣ್ಣ ಕೆಟ್ಟ ಕೆಲಸ ಮಾಡಿದರೆ ಅದರಿಂದಲೇ ನಮಗೆ ಹಿನ್ನಡೆ ಆಗಬಹುದಲ್ವಾ?. ಆ ಹಿನ್ನಡೆ ಆಗಬಾರದು ಎಂಬುದಷ್ಟೇ ನಮ್ಮ ಅಭಿಪ್ರಾಯ. ದೆಹಲಿಗೆ ಹೋಗಿ, ಅಲ್ಲಿಗೆ ಹೋಗಿ ಹೇಳುವಂತದ್ದು ಏನು ಇಲ್ಲ. ದೆಹಲಿಯಲ್ಲಿ ಇರುವವರಿಗೂ ಇದೆಲ್ಲ ಗೊತ್ತಿದೆ. ಅವರೇ ಒಂದು ತೀರ್ಮಾನ ಮಾಡಲಿ. ನನ್ನ ಬರ್ತಡೇಗೆ ಲೀಡ್ ಮಾಡಿದ್ದೆ ಅಷ್ಟೇ, ಮತ್ತೇನು ನಾನು ಲೀಡ್ ಮಾಡಿಲ್ಲ. ಆಡಳಿತದ ಮೇಲೆ ಏನು ಪರಿಣಾಮ ಬೀರುತ್ತಿಲ್ಲ. ಆದರೆ ಸಾರ್ವಜನಿಕರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಸಾರ್ವಜನಿಕರು ಇದನ್ನೇ ಚರ್ಚೆ ಮಾಡುತ್ತಿದ್ದಾರೆ ಎಂದರು.

ನಾವು ಬರ್ತಡೇ ಮಾಡಿಕೊಂಡರು ಅದನ್ನು ಬಣ ರಾಜಕೀಯ ಎನ್ನುತ್ತೀರಾ ನಾವೇನ್ ಮಾಡಬೇಕು ಹೇಳಿ. ಸಾಕಷ್ಟು ಜನ ಎಂಎಲ್ಎಗಳಲ್ಲೂ ಇದೆ ಅಭಿಪ್ರಾಯ ಇದೆ. ಹೈಕಮಾಂಡ್ ಇದಕ್ಕೊಂದು ಅಂತಿಮ ರೂಪ ಕೊಡಬೇಕು ಎಂಬುದು ಇದೆ. ವಿರೋಧ ಪಕ್ಷದವರು ಇನ್ನೇನು ಆರೋಪ ಮಾಡುವುದಕ್ಕೆ ಸಾಧ್ಯ?. ಅಶೋಕಣ್ಣನ ಆರೋಪ ಏನೇ ಇರಲಿ, ನಮ್ದೇನೋ ಹಿಂಗಿದೆ ಬಿಜೆಪಿಯವರದ್ದು ಹೆಂಗಿದೆ?. ಬಿಜೆಪಿಯಲ್ಲಿ ಒಬ್ಬ ರಾಜ್ಯಾಧ್ಯಕ್ಷನನ್ನು ಮಾಡುವುದಕ್ಕೆ ಆಗಲಿಲ್ಲ. ಯಡಿಯೂರಪ್ಪ ಒಂದು ಬಣ, ಯತ್ನಾಳ್ ಒಂದು ಬಣ, ರಮೇಶ್ ಜಾರಕಿಹೊಳಿ ಇನ್ನೊಂದು ಬಣ. ಒಬ್ಬೊಬ್ಬರದ್ದು ಒಂದೊಂದು ಬಣ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ತಟ್ಟೆಯ ನೊಣ ನೋಡುವುದಕ್ಕೆ ಯಾಕೆ ಬರ್ತೀರಾ ಎಂದು ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.

ಈ ದೇಶವನ್ನೇ ಆಳ್ತಿರೋ ಪಕ್ಷಕ್ಕೆ ಒಬ್ಬ ರಾಜ್ಯಾಧ್ಯಕ್ಷನನ್ನೇ ಮಾಡುವುದಕ್ಕಾಗ್ಲಿಲ್ಲ ಅಂದ್ರೆ ಇನ್ನು ನಾವು ವಿರೋಧ ಪಕ್ಷದಲ್ಲಿರವರು ನಾವೇನ್ ಮಾಡೋದಕ್ಕೆ ಸಾಧ್ಯ?. ಎಲ್ಲ ಪಕ್ಷದಲ್ಲೂ ಸಣ್ಣಪುಟ್ಟ ನ್ಯೂನ್ಯತೆಗಳು ಇರುತ್ತವೆ. ಇದೇ ವಿಚಾರ ದೊಡ್ಡದಾಗಬಾರದು ಎಂದು ಹೈಕಮಾಂಡ್​ಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹೈಕಮಾಂಡ್ ಏನಾದ್ರೂ ತೀರ್ಮಾನ ಮಾಡಲಿ, ಶಾಸಕರು ಒಪ್ಪಿಕೊಳ್ಳುತ್ತೇವೆ. ಇದು ಚರ್ಚೆ ಆಗದ ಹಾಗೆ ನಿಲ್ಲಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದು ಚರ್ಚೆ ಆಗಬಾರದು ಮುಂದೆ. ಇದಕ್ಕೊಂದು ಅಂತಿಮ ರೂಪ ಕೊಡಿ ಅಂತ ಕೇಳಿಕೊಳ್ಳುತ್ತಿದ್ದೇವೆ. ಹೈಕಮಾಂಡ್ ಬೇರೆ ಬೇರೆ ಸಮಸ್ಯೆಗಳಲ್ಲಿ ಬೇರೆ ಬೇರೆ ವಿಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಇಲ್ಲಿಯ ವಿಷಯಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಬೇರೆ ಬೇರೆ ರಾಜ್ಯಗಳಲ್ಲೂ ಚುನಾವಣೆ ಇದೆ. ಹೀಗಾಗಿ ಹೈಕಮಾಂಡ್ ಅಲ್ಲಿ ಗಮನ ಹರಿಸಿದೆ. ಬೇರೆ ಬೇರೆ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಇಲ್ಲಿಯ ವಿಷಯ ಬಗೆಹರಿಯಬಹುದು. ಈ ಗೊಂದಲ ಶುರುವಾಗಿ ಮೂರ್ನಾಲ್ಕು ತಿಂಗಳು ಆಗುತ್ತಿದೆ. ಅಸ್ಸೋಂ, ಕೇರಳ ಚುನಾವಣೆ ಮುಗಿದ ಮೇಲೆ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಇದಕ್ಕೊಂದು ಅಂತಿಮ ತೆರೆ ಎಳೆಯಬಹುದು. ಬೇರೆ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಇದಕ್ಕೊಂದು ಇತಿಶ್ರೀ ಹಾಡಬಹುದು. ಎಪ್ರಿಲ್, ಮೇ ಚುನಾವಣೆವರೆಗೂ ಕೂಡ ಬಹುಶಃ ಇದಕ್ಕೊಂದು ಅಂತಿಮ ರೂಪ ಕಾಣಲ್ಲ ಎಂದು ಭಾವಿಸಿದ್ದೇನೆ. ಆಮೇಲೆ ಮಧ್ಯಪ್ರವೇಶ ಮಾಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇವುಗಳನ್ನೂ ಓದಿ: