ETV Bharat / state

ಹಾವೇರಿ ಯೋಧ ಸಾವು ; ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

ತರಬೇತಿ ವೇಳೆ ಮಿಸ್​ ಫೈರ್​ ಆಗಿ ಮೃತಪಟ್ಟ ಯೋಧ ಯಶೋಧರ ದುರಗಪ್ಪ ವಡ್ಡರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.

the-funeral-of-yashodhar-duragappa-vadder-was-held-in-her-native-village
ಮೃತ ಯೋಧ ಯಶೋಧರ ದುರಗಪ್ಪ ವಡ್ಡರ್ ಅವರ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : July 4, 2026 at 7:10 PM IST

2 Min Read
Choose ETV Bharat

ಹಾವೇರಿ : ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ಯಶೋಧರಾ ದುರಗಪ್ಪ ವಡ್ಡರ್ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ನೆರವೇರಿತು. ತೆರೆದ ವಾಹನದಲ್ಲಿ ಯಶೋಧರಾ ವಡ್ಡರ್ ಅವರ ಪಾರ್ಥಿವ ಶರೀರವನ್ನು ಇರಿಸಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಸಂಬಂಧಿಕರು, ಮಾಜಿ ಯೋಧರು, ಯಶೋಧರ ವಡ್ಡರ್ ಅಮರ ರಹೇ, ಅಮರ ರಹೇ ಎಂದು ಘೋಷಣೆ ಕೂಗಿದರು.

ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಿಂದ ಸ್ಮಶಾನದವರೆಗೆ ಮೆರವಣಿಗೆ ಮೂಲಕ ಅಂತಿಮಯಾತ್ರೆ ನಡೆಸಲಾಯಿತು. ಅಂತಿಮಯಾತ್ರೆಯಲ್ಲಿ ಗ್ರಾಮಸ್ಥರು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು. ನಂತರ ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಯಶೋಧರ ಅಂತ್ಯಕ್ರಿಯೆ ನಡೆಸಲಾಯಿತು.

ಯಶೋಧರ ಅವರ ತಂದೆ ದುರಗಪ್ಪ ಅವರ ಪ್ರತಿಕ್ರಿಯೆ ಇಲ್ಲಿದೆ (ETV Bharat)

ಹರಿದುಬಂದ ಜನಸಾಗರ : ಜುಲೈ 1 ರಂದು ಕೊಚ್ಚಿಯಲ್ಲಿ ಕರ್ತವ್ಯದಲ್ಲಿದ್ದಾಗ ಮಿಸ್ ಫೈರಿಂಗ್‌ನಿಂದಾಗಿ 29 ವರ್ಷದ ಯಶೋಧರಾ ಸಾವನ್ನಪ್ಪಿದ್ದರು. ಯಶೋಧರ ಪಾರ್ಥಿವ ಶರೀರ ಶನಿವಾರ ಮುಂಜಾನೆ ಸ್ವಗ್ರಾಮ ಉಪ್ಪುಣಸಿ ಗ್ರಾಮಕ್ಕೆ ಆಗಮಿಸಿತು. ನೌಕಾಪಡೆಯ ಸಿಬ್ಬಂದಿ ಮೃತ ಯಶೋಧರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ನೀಡಿದರು. ನಂತರ ಯಶೋಧರಾ ಪಾರ್ಥಿವ ಶರೀರವನ್ನ ಉಪ್ಪುಣಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮದವರು, ಮಾಜಿ ಯೋಧರು, ಯಶೋಧರ ಅವರ ಸ್ನೇಹಿತರು ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಪಡೆಯಲು ಜನರ ದಂಡೇ ಆಗಮಿಸಿತ್ತು. ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ನೇಹಿತರು ತಮ್ಮ ಸ್ನೇಹಿತನ ಕೊನೆಯ ಭೇಟಿಯಾದ ಕ್ಷಣಗಳನ್ನು ಮೆಲುಕು ಹಾಕಿದರು.

ಗಣ್ಯರಿಂದ ಅಂತಿಮ ನಮನ : ಹಾವೇರಿ ಜಿಲ್ಲೆ ಹಾನಗಲ್ ಶಾಸಕ ಶ್ರೀನಿವಾಸ್​ ಮಾನೆ ಯಶೋಧರ ಅವರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹೂಗುಚ್ಛ ಇರಿಸಿ ನಮನ ಸಲ್ಲಿಸಿದರು. ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪಗುಚ್ಛ ಇರಿಸಿ, ಅಂತಿಮ ನಮನ ಸಲ್ಲಿಸಿದರು.

ಕೊಚ್ಚಿಯಿಂದ ಆಗಮಿಸಿದ್ದ ನೌಕಾಪಡೆಯ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ರಾಷ್ಟ್ರಧ್ವಜವನ್ನ ಯಶೋಧರಾ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಗೆ ಜಯಕಾರ ಹಾಕಲಾಯಿತು. ಹಾನಗಲ್ ತಹಶಿಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯಶೋಧರಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಯಶೋಧರ ಮದುವೆಗೆ 2 ತಿಂಗಳು ಬಾಕಿ : ಯಶೋಧರಾ 2016ರಲ್ಲಿ ಭಾರತೀಯ ನೌಕಾಪಡೆಯಲ್ಲಿ ಸೈನಿಕನಾಗಿ ಆಯ್ಕೆಯಾಗಿದ್ದರು. ನಂತರ ಅಂಡಮಾನ್​, ನಿಕೋಬಾರ್‌ನಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಕೆಲ ತಿಂಗಳ ಹಿಂದಷ್ಟೇ ಕೊಚ್ಚಿಗೆ ವರ್ಗಾವಣೆಯಾಗಿದ್ದರು.

ಕೊಚ್ಚಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಮಿಸ್‌ ಪೈರಾಗಿ ಯಶೋಧರಾ ಜುಲೈ 1 ರಂದು ಮೃತಪಟ್ಟಿದ್ದರು. ಯಶೋಧರಾ ಅವರ ವಿವಾಹಕ್ಕೆ ಎರಡು ತಿಂಗಳು ಬಾಕಿ ಇತ್ತು. ಕಳೆದ ಫೆಬ್ರವರಿಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಯಶೋಧರನಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. 12 ವರ್ಷ ಸೇವೆ ಸಲ್ಲಿಸಿದ್ದ ಯಶೋಧರ ಇನ್ನು ಕೆಲ ವರ್ಷಗಳಲ್ಲಿ ನಿವೃತ್ತಿಯಾಗುತ್ತಿದ್ದರು. ಆದರೆ, ಮಿಸ್ ಫೈರಿಂಗ್‌ನಲ್ಲಿ ಯಶೋಧರಾ ಸಾವನ್ನಪ್ಪಿದ್ದಾರೆ.

ತಂದೆ, ಗ್ರಾಮಸ್ಥರು ಹೇಳಿದ್ದೇನು? ಯಶೋಧರ ಅವರ ತಂದೆ ದುರಗಪ್ಪ ಅವರು ಮಾತನಾಡಿದ್ದು, 'ನಮಗೆ ಏನೂ ಗೊತ್ತಿಲ್ಲ. ನಮಗೆ ದೂರವಾಣಿ ಕರೆ ಮಾಡಿದಾಗ ರಾತ್ರಿ 11 ಗಂಟೆಯಾಗಿತ್ತು. ಕರೆಯಲ್ಲಿ ನಿಮ್ಮ ಮಗ ತೀರಿಕೊಂಡಿದ್ದಾನೆ ಎಂದು ತಿಳಿಸಿದರು. ಬೈಕ್ ತೆಗೆದುಕೊಂಡು ಅಲ್ಲಿಗೆ ಹೋದ್ವಿ, ನಾವು ಹೋಗುವಷ್ಟರಲ್ಲಿ ಯಶೋಧರ ಅವರ ಪಾರ್ಥಿವ ಶರೀರವನ್ನ ಶೀಥಲ ಬಾಕ್ಸ್​ನಲ್ಲಿಟ್ಟಿದ್ದರು. ಯಶೋಧರ ಸೇನೆಗೆ ಸೇರಿ 12 ವರ್ಷವಾಗಿತ್ತು' ಎಂದು ಹೇಳಿದ್ದಾರೆ.

ಗ್ರಾಮಸ್ಥ ಆರ್‌. ಸಿ. ಹಿರೇಮಠ ಅವರು ಮಾತನಾಡಿ, 'ಯಶೋಧರ ನಮ್ಮ ಗ್ರಾಮದಿಂದ ದೇಶದ ಯೋಧರಾಗಿ ಕಾರ್ಯನಿರ್ವಹಿಸಿ, ಅವರು ಕಾರ್ಯಾಚರಣೆ ಮಾಡುವ ವೇಳೆ ಅಸುನೀಗಿದ್ದಾರೆ. ದೇಶಸೇವೆ ಸಲ್ಲಿಸುವ ವೇಳೆ ಸಾವನ್ನಪ್ಪಿದ್ದಾರೆ. ಅವರು ವೀರಯೋಧರಾಗಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು, ಸ್ನೇಹಿತರು, ಮಾಜಿ ಯೋಧರು ಪಾಲ್ಗೊಳ್ಳಲಿದ್ದಾರೆ. ಅವರ ಅಂತಿಮ ಯಾತ್ರೆಯಲ್ಲಿ ನಾವೆಲ್ಲ ಪಾಲ್ಗೊಂಡು, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ತರಬೇತಿ ವೇಳೆ ಮಿಸ್​ ಫೈರ್​ ಆಗಿ ಹಾವೇರಿ ಯೋಧ ಸಾವು: ಸ್ವಗ್ರಾಮಕ್ಕೆ ಆಗಮಿಸಿದ ಪಾರ್ಥೀವ ಶರೀರ