ಬೆಳಗಾವಿ ಜಿಲ್ಲೆಯಲ್ಲಿ ಬಿತ್ತನೆ ಚುರುಕು: ಗೊಬ್ಬರದ ಬೇಡಿಕೆ ಜೊತೆಗೆ ಬೆಲೆಯೂ ಏರಿಕೆ, ಆತಂಕದಲ್ಲಿ ಅನ್ನದಾತ
ಬೆಳಗಾವಿಯಲ್ಲಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಆದರೆ, ರೈತರಿಗೆ ಅಗತ್ಯ ಪ್ರಮಾಣದಲ್ಲಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಸಿದ್ದನಗೌಡ ಪಾಟೀಲ್ ನೀಡಿರುವ ವರದಿ ಇಲ್ಲಿದೆ.

Published : May 30, 2026 at 5:20 PM IST
ಬೆಳಗಾವಿ : ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿರುವ ಪರಿಣಾಮ ಆ ತಾಲೂಕುಗಳಲ್ಲಿ ಮುಂಗಾರು ಬಿತ್ತನೆ ಚುರುಕುಗೊಂಡಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7,52,312 ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ಇದಕ್ಕಾಗಿ 37,543 ಕ್ವಿಂಟಾಲ್ ವಿವಿಧ ಬೀಜಗಳು ಹಾಗೂ 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಬಂದಿದೆ.
ಮಾರ್ಚ್ 1 ರಿಂದ ಏಪ್ರಿಲ್, ಮೇ 31ರವರೆಗಿನ ಸುರಿಯುವ ಮಳೆಯನ್ನು ಪೂರ್ವ ಮುಂಗಾರು ಮಳೆ ಅಂತಾ ಕರೆಯಲಾಗುತ್ತದೆ. ಮೇ 29ರವರೆಗೆ ಜಿಲ್ಲೆಯಲ್ಲಿ 86 ಮಿ. ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 109 ಮಿ.ಮೀ ಮಳೆ ಆಗಿದೆ. ಇದರಿಂದ ಶೇ.28ರಷ್ಟು ಅಧಿಕ ಮಳೆ ದಾಖಲಾಗಿದೆ.
ನಿಪ್ಪಾಣಿ, ಹುಕ್ಕೇರಿ, ಸವದತ್ತಿ ಸೇರಿ ಕೆಲವು ತಾಲೂಕುಗಳಲ್ಲಿ ಕಡಿಮೆ ಮಳೆ ಆಗಿದ್ದು, ಯರಗಟ್ಟಿ, ಬೈಲಹೊಂಗಲ, ಗೋಕಾಕ್, ಕಾಗವಾಡ, ಬೆಳಗಾವಿ, ಖಾನಾಪುರ ಸೇರಿ ಮತ್ತಿತರ ತಾಲೂಕುಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಹೀಗಾಗಿ, ಈ ತಾಲೂಕುಗಳ ನೆಲ ಹಸಿ ಇರುವುದರಿಂದ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ. ಮಳೆ ಕಡಿಮೆ ಆಗಿರುವ ಕಡೆ ಟ್ರ್ಯಾಕ್ಟರ್ ಮತ್ತು ಎತ್ತುಗಳಿಂದ ಬಿತ್ತನೆಗೆ ಹೊಲಗಳನ್ನು ಹದಗೊಳಿಸಲಾಗುತ್ತಿದೆ.
ಈ ವರ್ಷ 30.05 ಲಕ್ಷ ಟನ್ ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ಬಂದಿದೆ. ಮೇ 30 ರವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಪೊಟ್ಯಾಷ್, ಸೂಪರ್ ಫಾಸ್ಪೆಟ್ ಇತರ ಗೊಬ್ಬರಗಳೂ ಸೇರಿವೆ. ಸದ್ಯಕ್ಕೆ 18.64 ಲಕ್ಷ ಟನ್ ಕೊರತೆ ಕಾಡುತ್ತಿದೆ. ಭಾರತಕ್ಕೆ ಚೀನಾದಿಂದ ರಸಗೊಬ್ಬರ ರಫ್ತು ಸ್ಥಗಿತಗೊಂಡಿದೆ. ಪಶ್ಚಿಮ ದೇಶಗಳಾದ ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಜೋರ್ಡಾನ್, ಇಸ್ರೇಲ್ ದೇಶಗಳನ್ನೇ ರಾಜ್ಯ ರಸಗೊಬ್ಬರಕ್ಕಾಗಿ ಅವಲಂಬಿಸಿದೆ. ಅಲ್ಲಿ ಯುದ್ಧದ ಪರಿಣಾಮ ಇಲ್ಲಿ ಸಮಸ್ಯೆ ಉಂಟಾಗಿದೆ.
| ಬೆಳೆ | ಬಿತ್ತನೆ ಪ್ರದೇಶದ ಗುರಿ |
| ಕಬ್ಬು | 3,05,000 ಹೆಕ್ಟೇರ್ |
| ಸೋಯಾಬಿನ್ | 99,000 ಹೆಕ್ಟೇರ್ |
| ಗೋವಿನಜೋಳ | 1,54,032 ಹೆಕ್ಟೇರ್ |
| ಹೆಸರು | 47,752 ಹೆಕ್ಟೇರ್ |
| ತೊಗರಿ | 15,000 ಹೆಕ್ಟೇರ್ |
| ಹತ್ತಿ | 25,000 ಹೆಕ್ಟೇರ್ |
| ಭತ್ತ | 55,925 ಹೆಕ್ಟೇರ್ |
| ಜೋಳ | 8,000 ಹೆಕ್ಟೇರ್ |
| ತೊಗರಿ | 14,600 ಹೆಕ್ಟೇರ್ |
| ಶೇಂಗಾ | 13,238 ಹೆಕ್ಟೇರ್ |
| ಗೊಬ್ಬರ ಸಂಗ್ರಹ | ಟನ್ |
| ಡಿಎಪಿ | 18,997 |
| ಕಾಂಪ್ಲೆಕ್ಟ್ | 56,475 |
| ಪೊಟ್ಯಾಷ್ | 8,449 |
| ಸೂಪರ್ ಪಾಸ್ಫೆಟ್ | 7,711 |
| ಇತರ ಸೇರಿ ಒಟ್ಟು ಸಂಗ್ರಹ | 1,25,000 ಮೆಟ್ರಿಕ್ ಟನ್ |
| ಬೇಡಿಕೆ | 30.05 ಲಕ್ಷ ಮೆಟ್ರಿಕ್ ಟನ್ |
ಕಳೆದ ವರ್ಷ ಕೂಡ ಇಷ್ಟೇ ಪ್ರಮಾಣದ ಬಿತ್ತನೆ ಗುರಿ ಹಾಗೂ ಬೀಜಗಳ ಬೇಡಿಕೆ ಇತ್ತು. ಆದರೆ, ಈ ಬಾರಿ ರಸಗೊಬ್ಬರ ಬೇಡಿಕೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ಬಾರಿ ಕೃಷಿ ಇಲಾಖೆಯಿಂದ ಬೀಜೋಪಚಾರ ಆಂದೋಲನ ಮಾಡುತ್ತಿರುವುದು ವಿಶೇಷ. ಪ್ರತಿ ವರ್ಷ ಬೀಜೋಪಚಾರ ಇಲ್ಲದ ಕಾರಣ ಕೆಲವು ಕಡೆ ರೈತರಿಂದ ಕಳಪೆ ಬೀಜದ ಪ್ರಕರಣಗಳು ಕಂಡು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೃಷಿ ಇಲಾಖೆ ಅಧಿಕಾರಿಗಳು ಇಲಾಖೆಯಿಂದಲೇ ಗ್ರಾಮ ಮಟ್ಟದಲ್ಲಿ ಬೀಜೋಪಚಾರ ಆಂದೋಲನ ನಡೆಸಲಾಗುತ್ತಿದೆ. ಮೇ 22 ರವರೆಗೆ 392 ಹಳ್ಳಿಗಳಲ್ಲಿ ಆಂದೋಲನ ಮಾಡಲಾಗಿದೆ. ಬೀಜ ಪರೀಕ್ಷೆ ಮಾಡಿಯೇ ನೀಡಬೇಕು ಎಂದು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂಬುದು ಅಧಿಕಾರಿಗಳ ಮಾಹಿತಿ.

ಈಟಿವಿ ಭಾರತದ ಜೊತೆಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೆಚ್. ಡಿ. ಕೋಳೇಕರ್ ಅವರು, 'ಈ ಬಾರಿ ಜಿಲ್ಲೆಯಲ್ಲಿ 3,55,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 35 ರೈತ ಸಂಪರ್ಕ ಕೇಂದ್ರಗಳಿವೆ. ಇದರೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನೂ ಬಳಸಿಕೊಳ್ಳುತ್ತಿದ್ದೇವೆ. ಒಟ್ಟು 172 ಕೇಂದ್ರಗಳಲ್ಲಿ ಅಗತ್ಯ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಈಗಾಗಲೇ ಬೀಜ, ಗೊಬ್ಬರ ವಿತರಿಸಲು ಚಾಲನೆ ನೀಡಲಾಗಿದೆ' ಎಂದರು.
'ಕೆಲವು ತಾಲೂಕುಗಳಲ್ಲಿ ಪೂರ್ವ ಮುಂಗಾರು ಮಳೆ ಆಗಿದ್ದು, ಅಲ್ಲೆಲ್ಲ ಬಿತ್ತನೆ ಶುರುವಾಗಿದೆ. ಹೀಗಾಗಿ, ಇನ್ನುಳಿದಂತೆ ನೆಲವು ಪೂರ್ಣ ಪ್ರಮಾಣದಲ್ಲಿ ಹಸಿ ಹಿಡಿದ ಮೇಲೆಯೇ ಬಿತ್ತನೆ ಮಾಡಬೇಕು. ಮುಂಗಾರು ಒಂದು ವಾರ ತಡವಾಗಿ ಆಗುವ ಸಾಧ್ಯತೆ ಇದೆ. ಹಾಗಾಗಿ, ರೈತರು ಬಿತ್ತನೆಗೆ ಅವಸರ ಮಾಡುವುದು ಬೇಡ. ಅದೇ ರೀತಿ ಬೀಜೋಪಚಾರ, ಧರತಿ ಮಾತಾ ಬಚಾವೋ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಆಗಿ ನಡೆಸಿದ್ದೇವೆ. ಬೀಜೋಪಚಾರದಿಂದ ಕೀಟ, ರೋಗಗಳ ಬಾಧೆ ಕಾಣಿಸುವುದಿಲ್ಲ. ಸದ್ಯ 1.25 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹ ಇದೆ. ಎಂ.ಆರ್.ಪಿ. ದರದಂತೆ ಸಮರ್ಪಕ ಗೊಬ್ಬರ ವಿತರಿಸುವಂತೆ ಎಲ್ಲ ಡೀಲರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದು ತಿಳಿಸಿದರು.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆದ ಯುದ್ಧದ ಕಾರಣ ಮುಂದೆ ಗೊಬ್ಬರ ಯಾವ ರೀತಿ ನಮಗೆ ಪೂರೈಕೆ ಆಗುತ್ತದೆ ಅಂತಾ ಗೊತ್ತಿಲ್ಲ. ಸದ್ಯಕ್ಕೆ 1 ಎಕರೆಗೆ 1 ಚೀಲ ಗೊಬ್ಬರ ಮಾತ್ರ ನೀಡಲಾಗುವುದು. ಅರ್ಧ ಲೀಟರ್ ನ್ಯಾನೋ ಯೂರಿಯಾ ಬಾಟಲ್, ಒಂದು ಯೂರಿಯಾ ಚೀಲಕ್ಕೆ ಸಮನಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ಎಷ್ಟು ಬೇಕೋ ಅಷ್ಟು ಮಾತ್ರ ರಾಸಾಯನಿಕ ಗೊಬ್ಬರ ಬಳಸಿ, ಹೆಚ್ಚು ಸಗಣಿ ಗೊಬ್ಬರ ಬಳಕೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ರೈತರು ಹೇಳುವುದೇನು? : ಬೆಳಗಾವಿ ತಾಲೂಕಿನ ಕೋಳಿಕೊಪ್ಪದ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ರೈತ ಮಹಾದೇವ ಕಾರೇಕರ್ ಅವರನ್ನು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ಅವರು, 'ಮಳೆ ಆಗುತ್ತದೆ ಅಂತಾ ದೇವರ ಮೇಲೆ ಭಾರ ಹಾಕಿ ಭತ್ತ ಬಿತ್ತುತ್ತಿದ್ದೇವೆ. ಗೊಬ್ಬರ, ಕೂಲಿ ಆಳು ಹೆಚ್ಚಾಗಿದೆ. 1 ಗೊಬ್ಬರ ಚೀಲದ ಬೆಲೆ 2,250 ರೂ. ಆಗಿದೆ. ಮೊದಲು 1,700 ರೂಪಾಯಿಗೆ ಸಿಗುತ್ತಿತ್ತು. 4 ಚೀಲ ಗೊಬ್ಬರ ಹಾಕುವಲ್ಲಿ 1 ಚೀಲ ಹಾಕುತ್ತಿದ್ದೇವೆ. ಯುದ್ಧದ ನೆಪ ಹೇಳಿ ಗೊಬ್ಬರ ಸೇರಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಒಂದು ತಿಂಗಳಲ್ಲಿ ಮೂರು ಸಲ ಯಾವುದಾದರೂ ಮಂತ್ರಿ ಏರಿಸಿದ್ದು ಎಲ್ಲಿಯಾದರೂ ನೋಡಿದ್ದಿರಾ? ಹೀಗೆ ನಮ್ಮನ್ನು ಕೊಲ್ಲುತ್ತಿದ್ದಾರೆ. ಹೀಗೆ ಆದರೆ, ರೈತರು ಮತ್ತು ಜನಸಾಮಾನ್ಯರು ಬದುಕುವುದಾದರೂ ಹೇಗೆ?' ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
'ಸ್ವಂತ ಎರಡು ಎಕರೆ, ಗುತ್ತಿಗೆ ಪಡೆದ 4 ಎಕರೆಯಲ್ಲಿ ಬಿತ್ತನೆ ಮಾಡುತ್ತಿದ್ದೇನೆ. ಎಂಟು ದಿನಗಳ ಹಿಂದೆ ಮಳೆ ಆಗಿದೆ. ಒಂದೂವರೆ ಎಕರೆಯಲ್ಲಿ ಭತ್ತ ಬಿತ್ತಿದ್ದೇನೆ. ಭತ್ತದ ಸಸಿ ಹುಟ್ಟುವಷ್ಟರ ಮಟ್ಟಿಗೆ ನೆಲ ಹಸಿ ಇದೆ. ಇನ್ನುಳಿದಂತೆ ಬೀನ್ಸ್, ಗೆಣಸು ಹಾಕಿದ್ದೇನೆ. ಉತ್ತಮವಾಗಿ ಮಳೆ ಆದರೆ ಒಳ್ಳೆಯ ಇಳುವರಿ ಬರುವ ನಿರೀಕ್ಷೆ ಇದೆ' ಎಂದರು ಮತ್ತೊಬ್ಬ ರೈತ ಪೀರಾಜಿ ಬಡ್ಲಿ.
ರೈತ ಮುಖಂಡರ ಆಕ್ರೋಶ : ರೈತ ಮುಖಂಡ ಮಹಾಂತೇಶ ಕಮತ ಮಾತನಾಡಿ, 'ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಂಖ್ಯೆ ಕಡಿಮೆ ಆಗಿದ್ದು, ಕೃಷಿ ಚಟುವಟಿಕೆಗಳಿಗೆ ರೈತರು ಸಂಪೂರ್ಣವಾಗಿ ಟ್ರ್ಯಾಕ್ಟರ್ ಮೇಲೆ ಅವಲಂಬಿತರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಾಗಿದೆ. ಒಂದು ಎಕರೆಗೆ 2 ಸಾವಿರ ರೂ. ಇದ್ದಿದ್ದು, 3500 ರೂಪಾಯಿಗೆ ಏರಿಕೆ ಆಗಿದೆ. ಎತ್ತುಗಳನ್ನಾದರೂ ಖರೀದಿಸೋಣ ಎಂದರೆ ಅವುಗಳ ಬೆಲೆಯೂ ಹೆಚ್ಚಾಗಿದೆ. ಅದರ ಜೊತೆಗೆ ಗೊಬ್ಬರ ದರವೂ ಹೆಚ್ಚಾಗಿದೆ. ಈ ಎಲ್ಲ ಸಂಕಷ್ಟಗಳಿಂದ ರೈತರು ವಲಸೆ ಹೋಗುವ ಸ್ಥಿತಿ ನಿರ್ಮಾಣ ಆಗಲಿದೆ' ಎಂದು ತಮ್ಮ ಬೇಸರ ಹೊರ ಹಾಕಿದರು.
'ಯುದ್ಧದ ನೆಪ ಹೇಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಗೊಬ್ಬರ ಸೇರಿ ಮತ್ತಿತರ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರು ಮತ್ತು ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ರೈತರಿಗೆ ಬೇಕಾದ ಗೊಬ್ಬರ ಪೂರೈಸುತ್ತಿಲ್ಲ. ತಕ್ಷಣ ಸರ್ಕಾರಗಳು ಎಚ್ಚೆತ್ತುಕೊಂಡು ಬೆಲೆ ಏರಿಕೆಗೆ ಕಡಿವಾಣ ಹಾಕಿ, ರೈತರು ಮತ್ತು ಕೃಷಿಯನ್ನು ಉಳಿಸಿ' ಎಂದು ಮತ್ತೋರ್ವ ರೈತ ಮುಖಂಡ ಬಸವರಾಜ ಮೊಖಾಶಿ ಒತ್ತಾಯಿಸಿದರು.
ಇದನ್ನೂ ಓದಿ : ಹಾವೇರಿ: 3ನೇ ದಿನವೂ ಬಿತ್ತನೆ ಬೀಜ ವಿತರಣೆ; ಕೃಷಿ ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನ

