ETV Bharat / state

ನನಗೆ ಮೂರು ಮತಗಳಿವೆ ಎಂಬ ಆರೋಪ ಹಸಿ ಸುಳ್ಳು, ಬೊಮ್ಮಾಯಿ ಕ್ಷಮೆ ಕೇಳಬೇಕು: ಹೆಚ್. ಕೆ. ಪಾಟೀಲ್​

ನನಗೆ ಮೂರು ಮತಗಳಿವೆ ಎಂಬ ಬಸವರಾಜ ಬೊಮ್ಮಾಯಿ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಶಾಸಕ ಹೆಚ್.ಕೆ. ಪಾಟೀಲ್​ ಆಗ್ರಹಿಸಿದ್ದಾರೆ.

H K PATIL
ಹೆಚ್.ಕೆ. ಪಾಟೀಲ್​ (ETV Bharat)
author img

By ETV Bharat Karnataka Team

Published : July 5, 2026 at 7:44 PM IST

1 Min Read
Choose ETV Bharat

ಗದಗ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ವಿರುದ್ಧ ಮಾಡಿರುವ "ಮೂರು ಮತಗಳಿವೆ" ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಶಾಸಕ ಹೆಚ್. ಕೆ. ಪಾಟೀಲ್​ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಅನುಭವಿ ಹಾಗೂ ಬುದ್ಧಿವಂತ ರಾಜಕಾರಣಿಯಾಗಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಆರೋಪ ಮಾಡಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು.

ಶಾಸಕ ಹೆಚ್.ಕೆ. ಪಾಟೀಲ್​ (ETV Bharat)

"ರಾಜಕೀಯದಲ್ಲಿ ವೈಯಕ್ತಿಕ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಬೊಮ್ಮಾಯಿ ಅವರು ನನ್ನ ಹಿತೈಷಿಯೂ ಹೌದು, ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರುವ ನಾಯಕರೂ ಹೌದು. ಆದ್ದರಿಂದ ಕನಿಷ್ಠ ಮಟ್ಟದಲ್ಲಾದರೂ ವಾಸ್ತವಾಂಶಗಳನ್ನು ಪರಿಶೀಲಿಸಬೇಕಿತ್ತು. ಅವರು ಮಾಡಿರುವ ಆರೋಪ ಹಸಿ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದೆ" ಎಂದು ತಿಳಿಸಿದರು.

ಹುಲಕೋಟಿಯಲ್ಲಿ ತಮ್ಮ ಹೆಸರಿನಲ್ಲಿ ಮೂರು ಮತಗಳಿವೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, "ನಮ್ಮ ಹುಲಕೋಟಿಯಲ್ಲಿ ಹೆಚ್.ಕೆ. ಪಾಟೀಲ ಎಂಬ ಹೆಸರಿನ ಇಬ್ಬರು ಮತದಾರರಿದ್ದಾರೆ. ಅವರಲ್ಲಿ ಒಬ್ಬರು ನಮ್ಮ ಸಂಬಂಧಿಕರು. ಹೆಸರಿನ ಸಾಮ್ಯತೆಯನ್ನು ಆಧರಿಸಿ ನನ್ನ ವಿರುದ್ಧ ತಪ್ಪು ಆರೋಪ ಮಾಡಲಾಗಿದೆ" ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದರು.

"ಗದಗ ಜಿಲ್ಲೆಯ ಶಾಸಕನಾಗಿರುವ ನನ್ನ ಮೇಲೆ ಇಂತಹ ಆರೋಪ ಮಾಡುವ ಮೊದಲು ಜಿಲ್ಲೆಯ ಪ್ರಬುದ್ಧ ಜನತೆಯ ಮನೋಭಾವವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿತ್ತು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನನ್ನ ರಾಜಕೀಯ ಜೀವನವನ್ನು ರಾಜ್ಯದ ಜನರು ನೋಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ವ್ಯಕ್ತಿಗೆ ಇಂತಹ ಆಧಾರರಹಿತ ಆರೋಪಗಳು ಶೋಭೆ ತರುವುದಿಲ್ಲ. ಇದರಿಂದ ಅವರ ವ್ಯಕ್ತಿತ್ವಕ್ಕೂ ಧಕ್ಕೆ ಉಂಟಾಗುತ್ತದೆ" ಎಂದು ಹೇಳಿದರು.

ತಮ್ಮ ಹೆಸರನ್ನು ಉಲ್ಲೇಖಿಸಿ ಆಧಾರವಿಲ್ಲದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಹೆಚ್. ಕೆ. ಪಾಟೀಲ್​ ಆಗ್ರಹಿಸಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯದಲ್ಲಿ ಹುಲಕೋಟಿಯಲ್ಲಿ ಹೆಚ್. ಕೆ. ಪಾಟೀಲ ಹೆಸರಿನಲ್ಲಿ ಮೂರು ಮತಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್. ಕೆ. ಪಾಟೀಲ್​ ಈ ಸ್ಪಷ್ಟನೆ ನೀಡಿದ್ದಾರೆ.

ಇವುಗಳನ್ನೂ ಓದಿ: