ಹಾವೇರಿ: ಸಂಭ್ರಮದಿಂದ ನಡೆದ ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ರಾಘವೇಂದ್ರಸ್ವಾಮಿಯ 355ನೇ ಆರಾಧನಾ ಮಹೋತ್ಸವ ಹಿನ್ನೆಲೆ ಹಾವೇರಿಯಲ್ಲಿ ಬೆಳ್ಳಿರಥೋತ್ಸವ ನಡೆಯಿತು.

Published : September 1, 2026 at 1:54 PM IST
ಹಾವೇರಿ: ಇಲ್ಲಿನ ರಾಘವೇಂದ್ರಮಠದಲ್ಲಿ ರಾಘವೇಂದ್ರಸ್ವಾಮಿಯ 355ನೇ ಆರಾಧನಾ ಮಹೋತ್ಸವ ಕಳೆಗಟ್ಟಿದೆ. ಶನಿವಾರ ಪೂರ್ವಾರಾಧನೆ ಪುಷ್ಪರಥೋತ್ಸವ, ಭಾನುವಾರ ಮಧ್ಯಾರಾಧನೆ, ಬೆಳ್ಳಿರಥೋತ್ಸವ ಮತ್ತು ಸೋಮವಾರ ಉತ್ತರಾಧನೆ ನಡೆಯಿತು. ಉತ್ತರಾಧನೆಯ ಅಂಗವಾಗಿ ರಾಘವೇಂದ್ರಶ್ರೀಗಳ ರಥೋತ್ಸವ ನಡೆಸಲಾಯಿತು.
ರಥದಲ್ಲಿ ರಾಘವೇಂದ್ರಸ್ವಾಮಿಗಳ ಬೆಳ್ಳಿ ಮೂರ್ತಿಯನ್ನಿಟ್ಟು ರಥೋತ್ಸವ ಆಚರಿಸಲಾಯಿತು. ನಗರದ ಅಗ್ರಹಾರದ ಅಶ್ವತ್ಥ ವೃಕ್ಷದಿಂದ ಆರಂಭವಾದ ರಥೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ರಸ್ತೆ ಉದ್ದಕ್ಕೂ ಭಕ್ತರು ಹಣ್ಣುಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿ ಮೆರೆದರು. ನಂತರ ತೇರುಬಿದಿ ಆಂಜನೇಯ ದೇವಸ್ಥಾನಕ್ಕೆ ರಥೋತ್ಸವ ಆಗಮಿಸಿತು. ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಹರಿಕೃಷ್ಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಬಳಿಕ ರಥೋತ್ಸವ ಬಿದಿ ಆಂಜನೇಯ ದೇವಸ್ಥಾನದಿಂದ ರಾಘವೇಂದ್ರಸ್ವಾಮಿ ಮಠದವರೆಗೆ ಸಾಗಿಬಂದಿತು. ರಥೋತ್ಸವಕ್ಕೆ ಚಂಡೆ ವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ಮೆರುಗು ನೀಡಿತು. ಮಠಕ್ಕೆ ರಥೋತ್ಸವ ಆಗಮಿಸುತ್ತಿದ್ದಂತೆ ರಾಘವೇಂದ್ರಸ್ವಾಮಿಗಳ ಬೆಳ್ಳಿಮೂರ್ತಿಯನ್ನ ರಥೋತ್ಸವಕ್ಕೆ ಪ್ರದಕ್ಷಿಣಿ ಹಾಕಿಸಲಾಯಿತು. ನಂತರ ಧಾರ್ಮಿಕ ವಿಧಾನಗಳನ್ನ ಪೂರೈಸಿ ಮಠದ ಬೃಂದಾವನಕ್ಕೆ ತರಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಅಲಂಕಾರ: ಹಾವೇರಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಪ್ರಾತಃಕಾಲದಿಂದ ದಿನಪೂರ್ತಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಮಠಕ್ಕೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಹಾವೇರಿಯ ರಾಘವೇಂದ್ರಮಠ ರಾಜ್ಯದಲ್ಲಿ ನಿರ್ಮಾಣವಾಗಿರುವ ಮೊದಲ ರಾಘವೇಂದ್ರಮಠವಾಗಿದ್ದು, ಇಲ್ಲಿ ಪ್ರಾಥಃಕಾಲದಲ್ಲಿ ರಾಘವೇಂದ್ರ ಸಾರ್ವಭೌಮರು ಭಕ್ತರಿಗೆ ದರ್ಶನ ನೀಡುತ್ತಾರೆ ಎನ್ನುವ ಪ್ರತೀತಿ ಇದೆ.
ಈ ಕುರಿತಂತೆ ಮಾತನಾಡಿದ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಹರಿಕೃಷ್ಣ, ಹಾವೇರಿಯ ಹೃದಯಭಾಗದಲ್ಲಿರುವ ಶ್ರೀಮಂತ್ರಾಲಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸಾರ್ವಭೌಮ ಆರಾಧನಾ ಮಹೋತ್ಸವ ನಡೆಯುತ್ತಿದೆ. ಹಾವೇರಿ ರಾಘವೇಂದ್ರಸ್ವಾಮಿ ಮಠದ ವಿಶೇಷ ಎಂದರೆ ಸ್ವಪ್ನದಲ್ಲಿ ಸೂಚನೆ ಮಾಡಿಸಿಕೊಂಡು ಮಂತ್ರಾಕ್ಷತೆ ಮೂಲಕ ರಾಮದೇವರ ಶಿಲೆಯಿಂದ ಮಾಡಿಸಿಕೊಂಡ ಬೃಂದಾವನ. ಇಲ್ಲಿ 315 ವರ್ಷಗಳಿಂದ ರಾಘವೇಂದ್ರಸ್ವಾಮಿಗಳು ಭಕ್ತರಿಗೆ ಅನುಗ್ರಹಿಸುತ್ತಿದ್ದಾರೆ. ಅಂತಹ ರಾಘವೇಂದ್ರಸ್ವಾಮಿಗಳ ಮಹೋತ್ಸವದಲ್ಲಿ ಈ ಉತ್ತರಾಧನೆ 200 ವರ್ಷಗಳಿಗಿಂತ ಅಧಿಕ ಹಳೆಯ ರಥೋತ್ಸವ ಹಾವೇರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ಎಲ್ಲ ಭಕ್ತರು ರಾಯರ ಕೃಪೆಗೆ ಪಾತ್ರರಾಗುವಂತೆ ಅಪೇಕ್ಷಿಸುತಿದ್ದೇವೆ. ಹಾವೇರಿಗೆ ಎರಡನೇಯ ಮಂತ್ರಾಲಯ ಎಂದು ಕರೆಯಲಾಗುತ್ತದೆ. ಮೊದಲು ರಾಯರ ಪರಮಾಪ್ತ ಶಿಷ್ಯರಾಗಿದ್ದ ಅಪ್ಪಣಾಚಾರ್ಯರು ಬಿಚ್ಚಾಲೆಯಲ್ಲಿ ರಾಯರ ಏಕಶಿಲಾ ಬೃಂದಾವನ ಪ್ರತಿಷ್ಠಾಪನೆ ಮಾಡಿಸಿದ್ದರು. ಆದಾದ ನಂತರ ರಾಯರ ಸಮಕಾಲೀನರಾದ ಚಿಕ್ಕೂಬಾಯಿ ಎಂಬ ಭಕ್ತರಿದ್ದರು. ರಾಯರ ಒಡನಾಟದಲ್ಲಿದ್ದ ಚಿಕ್ಕೂಬಾಯಿ ರಾಮದೇವರಿಗೆ ಹೂವು ಕಟ್ಟಿಕೊಡುತ್ತಿದ್ದರು. ರಾಯರು ಬೃಂದಾವನ ಪ್ರವೇಶ ಮಾಡಿದ ನಂತರ ಕಾಲದಲ್ಲಿ ಪ್ರತಿ ವರ್ಷ ಮಂತ್ರಾಲಯಕ್ಕೆ ಹೋಗಿ ಸೇವೆ ಮಾಡುತ್ತಿದ್ದರು. ಆದರೆ ವಯಸ್ಸಾದ ಮೇಲೆ ಇಲ್ಲಿಯೇ ವಿಶ್ರಾಂತಿ ಪಡೆದು ನನಗೆ ಮಂತ್ರಾಲಯಕ್ಕೆ ಬರಲು ಆಗುತ್ತಿಲ್ಲ ಎಂದು ದುಃಖಪಡುತ್ತಿದ್ದರು. ಪ್ರಾಯೋಪರೇಶ ವ್ರತ ಮಾಡಲು ಮುಂದಾದರು, ಅಂದರೆ ಜೀವ ಹೋಗುವವರೆಗೆ ಏನನ್ನು ಸೇವನೆ ಮಾಡದೇ ರಾಯರ ಜಪಿಸುತ್ತಾ ಇಲ್ಲೇ ಇರುತ್ತೇನೆ ಎಂದು ಸಂಕಲ್ಪ ಮಾಡಿದ್ದರು. ಈ ಸಂದರ್ಭದಲ್ಲಿ ರಾಯರು ಸ್ವಪ್ನದಲ್ಲಿ ಕಾಣಿಸಿಕೊಂಡು ನಾನು ಇಲ್ಲಿಯೇ ಇದ್ದೇನೆ, ನಿನ್ನ ಜೊತೆ ಇರುತ್ತೇನೆ ನಿನ್ನೊಟ್ಟಿಗೆ ಇರುತ್ತೇನೆ ನಿನ್ನ ನೆಲೆಯಲ್ಲಿ ನೆಲೆಸುತ್ತೇನೆ ಎಂದು ಆಶೀರ್ವಾದ ಮಾಡಿದ್ದರು. ಅಷ್ಟೇ ಅಲ್ಲದೆ ಎಲ್ಲ ಭಕ್ತರ ಸ್ಪಪ್ನದಲ್ಲಿ ರಾಘವೇಂದ್ರಸ್ವಾಮಿ ಕಾಣಿಸಿಕೊಂಡಿದ್ದರು. ಹನುಮಂತ ಕುಳಿತಿರುವ ರಾಮದೇವರು ಸ್ಪರ್ಶ ಮಾಡಿದ ಶಿಲೆಯಿಂದ ವೃಂದಾವನ ನಿರ್ಮಿಸಿಕೊಂಡು ರಾಯರು ಕುಳಿತಿರುವಂತಹ ವಿಶೇಷ ಬೃಂದಾವನ ಇದು. ಅನೇಕ ಜನರ ಇಷ್ಟಾರ್ಥ ಈಡೇರಿಸಿದ ಬೃಂದಾವನ ಇದಾಗಿದ್ದು, ಇದಕ್ಕೆ ಎರಡನೇಯ ಮಂತ್ರಾಲಯ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರಾಯರ ಭಕ್ತ ರಾಜುಪೇಟಕರ್, ಬಹಳ ಸೊಗಸಾಗಿ ಸಂಭ್ರಮದಿಂದ ರಥೋತ್ಸವ ನಡೆಯಿತು. ಪ್ರತಿ ವರ್ಷ ರಾಯರ ಆರಾಧನಾ ಮಹೋತ್ಸವವಿದ್ದಾಗ ಮನೆಯಲ್ಲಿ ಮತ್ತು ಮಠಕ್ಕೆ ಬಂದು ರಾಯರ ಸೇವೆಯಲ್ಲಿ ತೊಡಗುತ್ತೇವೆ. ನಿರಂತರವಾಗಿ ಗುರುಗಳ ಸೇವೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ರಾಯರ ಆಶೀರ್ವಾದದಿಂದ ಉತ್ತಮ ಮಳೆ ಬೆಳೆಯಾಗಿ ದೇಶ ಸುಭೀಕ್ಷೆಯಾಗಲಿ. ಎಲ್ಲರೂ ಈ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ರಾಯರ ಆಶೀರ್ವಾದಕ್ಕೆ ಭಾಜನರಾಗಬೇಕು ಎಂದು ತಿಳಿಸಿದರು.
ರಾಯರ ಭಕ್ತ ರಮೇಶ್ ಮಾತನಾಡಿ, ಹಾವೇರಿ ರಾಘವೇಂದ್ರಸ್ವಾಮಿ ಬೃಂದಾವನ ಎರಡನೇಯ ಮೃತ್ತಿಕಾ ವೃಂದಾವನ. ಹೀಗಾಗಿ ಇದು ತುಂಬಾ ಜಾಗೃತ ಸ್ಥಳ. ಪ್ರತಿ ವರ್ಷ ರಾಯರ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಭಕ್ತರು ಸೇರಿದಂತೆ ರಾಯರ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾವೇರಿಯ ರಾಘವೇಂದ್ರಸ್ವಾಮಿ ಮಠವನ್ನು ವೈದ್ಯ ಮತ್ತು ಕೂಲ್ಲಾಪುರ ಮನೆತನದವರು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನ ಮೂರು ರೀತಿಯ ರಥೋತ್ಸವ ನಡೆಯಿತು. ಮೊದಲ ದಿನ ಚಿಕ್ಕರಥ, ಎರಡನೇಯ ದಿನ ಪುಷ್ಪರಥ, ಮೂರನೇಯ ದಿನ ದೊಡ್ಡರಥೋತ್ಸವ ನಡೆಯುತ್ತದೆ. ಮಠದಲ್ಲಿ ಪ್ರತಿದಿನ ಪಂಚಾಮೃತ ಅಭಿಷೇಕ, ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇವುಗಳನ್ನೂ ಓದಿ:

