ಉತ್ಪಾದನಾ ವಲಯದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಪರೀಕ್ಷೆಗೊಳಪಡಿಸುವುದು ಅತ್ಯಗತ್ಯ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ನ್ಯಾಷನಲ್ ಟೆಸ್ಟ್ ಹೌಸ್ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಪರೀಕ್ಷಾ ಕೇಂದ್ರವನ್ನು ಬೆಂಗಳೂರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಿದರು.


Published : August 29, 2026 at 5:26 PM IST
ಬೆಂಗಳೂರು: ಉತ್ತಮ ಗುಣಮಟ್ಟವೇ ಬಲಶಾಲಿ ಭಾರತದ ತಳಹದಿಯಾಗಿದ್ದು, ದೇಶದಲ್ಲಿ ಉತ್ಪಾದನಾ ವಲಯವನ್ನು ಬಲಪಡಿಸಲು ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷೆಗೊಳಪಡಿಸುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಗ್ರಾಹಕ ವ್ಯವಹಾರಗಳು ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದಲ್ಲಿ ನ್ಯಾಷನಲ್ ಟೆಸ್ಟ್ ಹೌಸ್ (ರಾಷ್ಟ್ರೀಯ ಮಾಪನ ಕೇಂದ್ರ) ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಪರೀಕ್ಷಾ ಕೇಂದ್ರದ ಉದ್ಘಾಟನೆ ಮತ್ತು ಕೇಂದ್ರದ 115ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1912ರಲ್ಲಿ (ಸುಮಾರು 112-115 ವರ್ಷಗಳ ಹಿಂದೆ) ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿದ್ದ ಎನ್ಟಿಹೆಚ್ ಸಂಸ್ಥೆಯನ್ನು 2012ರ ವೇಳೆಗೆ ಮುಚ್ಚಲು ನಿರ್ಧರಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ 'ಮೇಕ್ ಇನ್ ಇಂಡಿಯಾ' ಮತ್ತು ಉತ್ಪಾದನಾ ರಂಗಕ್ಕೆ ಬೆಂಬಲ ನೀಡಲು ಈ ಸಂಸ್ಥೆಗೆ ಮರುಜೀವ ನೀಡಿ ಬೆಳೆಸಲಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಹಾಗೂ ಬ್ಯಾಟರಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮಾನವ ಜೀವದ ಸುರಕ್ಷತೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಅತ್ಯಾಧುನಿಕ ಇವಿ ಬ್ಯಾಟರಿ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ ಎಂದರು.
ಕೇವಲ ನಿರ್ಮಾಣ ಮಾಡುವುದು ಸಾಧನೆಯಲ್ಲ. ಲೋಪದೋಷಗಳನ್ನು ಮುಂಚಿತವಾಗಿಯೇ ಊಹಿಸಿ, ಅವುಗಳನ್ನು ತಡೆಯುವುದು ಎಂಜಿನಿಯರಿಂಗ್ನ ನಿಜವಾದ ಜಾಣ್ಮೆ ಎಂಬ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು.
ಈ ಕೇಂದ್ರ ಸರ್ಕಾರವು 'ಗತಿ ಶಕ್ತಿ' ಯೋಜನೆಯ ಆಶಯದಂತೆ ಈ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಕಾಮಗಾರಿಯು ನಿಗದಿತ ಸಮಯದಲ್ಲೇ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ ಮೂರು ಹೊಸ ಪರೀಕ್ಷಾ ಕೇಂದ್ರಗಳನ್ನು ಬೆಂಗಳೂರಿನ ಎನ್ಟಿಹೆಚ್ನಲ್ಲಿ ಆರಂಭಿಸಲಾಗಿದೆ. ಎನ್ಟಿಹೆಚ್ ನೂತನ ಪ್ರಯೋಗಾಲಯ, ಮೊಬೈಲ್ ಅಪ್ಲಿಕೇಶನ್ ಹಾಗೂ ಇವಿ ಬ್ಯಾಟರಿ ಪರೀಕ್ಷಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಗ್ರಾಹಕರ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಿ.ಎಲ್. ವರ್ಮಾ ಮಾತನಾಡಿ, 1912ರಲ್ಲಿ ಕೋಲ್ಕತ್ತಾದ ಅಲಿಪುರದಲ್ಲಿ 'ಗವರ್ನ್ಮೆಂಟ್ ಟೆಸ್ಟ್ ಹೌಸ್' ಆಗಿ ಪ್ರಾರಂಭವಾದ ಈ ಸಂಸ್ಥೆಯು 114 ವರ್ಷಗಳ ಸುದೀರ್ಘ ಸೇವೆ ಪೂರ್ಣಗೊಳಿಸಿ, 115ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ', 'ಆತ್ಮನಿರ್ಭರ ಭಾರತ' ಮತ್ತು ವಿಕಸಿತ ಭಾರತ 2047 ರ ಕನಸನ್ನು ನನಸು ಮಾಡಲು ಉತ್ಪಾದನೆಯ ಗುಣಮಟ್ಟ ಮತ್ತು ಭದ್ರತೆ ಅತ್ಯಗತ್ಯ ಎಂದು ಸಚಿವರು ಪ್ರತಿಪಾದಿಸಿದರು.
ಕೃಷಿ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ಡ್ರೋನ್ ಬಳಕೆಯನ್ನು ಪ್ರೋತ್ಸಾಹಿಸಲು ಎನ್ಟಿಹೆಚ್ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸುತ್ತಿದೆ. ಇವಿ (ಎಲೆಕ್ಟ್ರಿಕ್ ವಾಹನ) ಬ್ಯಾಟರಿಗಳ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಲು ಆಧುನಿಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಪರಿಸರ ಭದ್ರತೆ ಹಾಗೂ ಕೈಗಾರಿಕಾ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ವೇಗ ನೀಡಲಾಗುತ್ತಿದೆ ಎಂದರು.
ಕೇಂದ್ರದ ಕಾರ್ಮಿಕ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಏರೋಸ್ಪೇಸ್ ಮತ್ತು ರಕ್ಷಣಾ ಸಾಮಗ್ರಿಗಳ ಪರೀಕ್ಷಾ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸಿರುವುದು ಹೆಮ್ಮೆಯ ವಿಚಾರವಾಗಿದೆ. ದೇಶೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಾಗೂ ನವೋದ್ಯಮಗಳಿಗೆ ಸಹಾಯ ಮಾಡುವ ಮಹತ್ವದ ಯೋಜನೆಯಯಾಗಿದೆ ಎಂದು ತಿಳಿಸಿದರು.
ಬೆಂಗಳೂರು ಏರೋಸ್ಪೇಸ್ ವಲಯ ಹಾಗೂ ಹೆಚ್ಎಎಲ್ನಂತಹ ಸಂಸ್ಥೆಗಳ ಕೇಂದ್ರವಾಗಿದೆ. ಹೆಚ್ಎಎಲ್ ಹಾಗೂ ಏರೋಸ್ಪೇಸ್ ವಲಯಕ್ಕೆ ಅಗತ್ಯ ಉಪಕರಣ ಮತ್ತು ಸಾಮಗ್ರಿ ಸರಬರಾಜು ಮಾಡುವ ಎಂಎಸ್ಎಂಇಗಳು ಈ ಹಿಂದೆ ಪರೀಕ್ಷೆಗಾಗಿ ಖಾಸಗಿ ಸಂಸ್ಥೆಗಳು ಅಥವಾ ವಿದೇಶಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಇದೀಗ ವಿದೇಶಗಳಲ್ಲಿ ಅಥವಾ ಖಾಸಗಿಯವರಿಂದ ಪರೀಕ್ಷೆ ನಡೆಸಲು 50 ಲಕ್ಷದವರೆಗೆ ಭಾರಿ ವೆಚ್ಚವಾಗುತ್ತಿತ್ತು. ಇದನ್ನು ಎಂಎಸ್ಎಂಇ ಹಾಗೂ ಸಣ್ಣ ನವೋದ್ಯಮಗಳು ಭರಿಸುವುದು ಕಷ್ಟಕರವಾಗಿತ್ತು. ಆದರೆ, ಈಗ ಬೆಂಗಳೂರಿನಲ್ಲೇ ಜಾಗತಿಕ ಗುಣಮಟ್ಟದ ಸರ್ಕಾರದ ಪರೀಕ್ಷಾ ಕೇಂದ್ರ ಲಭ್ಯವಿರುವುದರಿಂದ ಕಾಲಾವಕಾಶ ಮತ್ತು ವೆಚ್ಚ ಎರಡೂ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ ಎಂದು ತಿಳಿಸಿದರು.
ದೇಶದ ಜಿಡಿಪಿಗೆ ಎಂಎಸ್ಎಂಇ ವಲಯವು ಶೇ.31ಕ್ಕೂ ಹೆಚ್ಚು ಕೊಡುಗೆ ನೀಡುತ್ತಿದ್ದು, ಉತ್ಪಾದನಾ ವಲಯದಲ್ಲಿ ಶೇ.45 ಹಾಗೂ ಒಟ್ಟು ರಫ್ತಿನಲ್ಲಿ ಶೇ.49 ರಷ್ಟು ಪಾಲು ಹೊಂದಿದೆ. ಉದ್ಯಮ್ ಪೋರ್ಟಲ್ನಲ್ಲಿ ಇದುವರೆಗೆ ಸುಮಾರು 9 ಕೋಟಿಗೂ ಹೆಚ್ಚು ನೋಂದಣಿಗಳಾಗಿವೆ ಎಂದು ಅಂಕಿ - ಅಂಶಗಳನ್ನು ಸಚಿವರು ವಿವರಿಸಿದರು.
ಇದನ್ನೂ ಓದಿ:
ಕೆಪಿಎಸ್‌ಸಿ ಹಗರಣದಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿ: ಪ್ರಲ್ಹಾದ್ ಜೋಶಿ

