ಗೃಹಜ್ಯೋತಿ ಯೋಜನೆ ಪರಿಷ್ಕರಣೆ; ಬಾಡಿಗೆದಾರರು ಆತಂಕಪಡಬೇಕಿಲ್ಲ: ಬೆಸ್ಕಾಂ ಸ್ಪಷ್ಟನೆ
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ ವಿಭಾಗದ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Published : July 5, 2026 at 8:55 PM IST
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಜುಲೈ 1, 2026ರಿಂದ ಆರಂಭಗೊಂಡಿದ್ದು, ಬಾಡಿಗೆದಾರರು ಆಧಾರ್ ಮಾಹಿತಿ ಅಪ್‌ಡೇಟ್ ಕುರಿತು ಗೊಂದಲಪಡಬೇಕಾಗಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದುಹಾಕಿ, ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.
ಯೋಜನೆಯ ಸೌಲಭ್ಯ ನಿಲ್ಲುವುದಿಲ್ಲ: ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ. ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ಕಾರ್ಡ್ ಮತ್ತು ವಿವರಗಳನ್ನು ತೆಗೆದುಹಾಕಿ, ಹೊಸ ಬಾಡಿಗೆದಾರರ ಆಧಾರ್ ಸಂಖ್ಯೆ ನಮೂದು ಮಾಡಿಕೊಳ್ಳಲಾಗುವುದು. ಹೀಗಾಗಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ನಿಲ್ಲುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.
ಮನೆ ಮಾಲೀಕರು ಬಾಡಿಗೆದಾರರಿಗೆ ಮಾರ್ಗದರ್ಶನ ನೀಡಿ: ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆಯ ಸಮಯದಲ್ಲಿ ನಿಮ್ಮ ಆಧಾರ್ ಮತ್ತು ಬಾಡಿಗೆ/ಲೀಸ್ ಕರಾರು ವಿವರಗಳನ್ನು ಅಪ್‌ಡೇಟ್ ಮಾಡಲಿದ್ದಾರೆ. ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದ್ದರಿಂದ ಬಾಡಿಗೆದಾರರು ಯಾವುದೇ ಆತಂಕವಿಲ್ಲದೆ ಬೆಸ್ಕಾಂ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕಾಗಿ ವಿನಂತಿ. ಜೊತೆಗೆ ಮನೆ ಮಾಲೀಕರು ಕೂಡ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ ವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು, ಇಲ್ಲವೇ ಸಂದೇಶ ಕಳುಹಿಸಬಹುದು.
ಬೆಸ್ಕಾಂ ಸಹಾಯವಾಣಿ ಸಂಖ್ಯೆ: 1912;
ವಿಶೇಷ ವಾಟ್ಸ್ಆ್ಯಪ್ (WhatsApp) ಸಂಖ್ಯೆಗಳು: 9480816111, 9480816112, 9480816113, 9480816114. (ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುತ್ತದೆ).
ಇದನ್ನೂ ಓದಿ: ಗೃಹ ಜ್ಯೋತಿ ಪರಿಶೀಲನೆ ವೇಳೆ ಫಲಾನುಭವಿಗಳ ಪ್ರವರ್ಗ ಮಾಹಿತಿ ಕಡ್ಡಾಯವಲ್ಲ: ಬೆಸ್ಕಾಂ ಸ್ಪಷ್ಟನೆ

