ಮಂಗಳೂರು: ತೋಡಕುಕ್ಕಿನಾರ್ ದೇವಸ್ಥಾನ ಕಳವು ಪ್ರಕರಣ; ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ತೋಡಕುಕ್ಕಿನಾರ್ ದೈವಸ್ಥಾನದಲ್ಲಿ ನಡೆದಿದ್ದ ಚಿನ್ನ-ಬೆಳ್ಳಿಯ ಆಭರಣ ಹಾಗೂ ನಗದು ಕಳವು ಪ್ರಕರಣದ ಅಪರಾಧಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ಹಾಗೂ 60 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

Published : August 28, 2026 at 8:01 PM IST
ಮಂಗಳೂರು(ದಕ್ಷಿಣ ಕನ್ನಡ): ಬಂಟ್ವಾಳ ತಾಲೂಕಿನ ಬಾಳೇಪುಣಿ ಗ್ರಾಮದ ಪ್ರಸಿದ್ಧ ತೋಡಕುಕ್ಕಿನಾರ್ ದೈವಸ್ಥಾನದಲ್ಲಿ ನಡೆದಿದ್ದ ಚಿನ್ನ-ಬೆಳ್ಳಿಯ ಆಭರಣ ಹಾಗೂ ನಗದು ಕಳವು ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಕುಖ್ಯಾತ ಆರೋಪಿಯನ್ನು ಮೇಲ್ಮನವಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿ 10 ವರ್ಷಗಳ ಕಠಿಣ ಸಜೆ ಹಾಗೂ 60 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಪರವಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ತಾಲೂಕಿನ ಕಲ್ಲಾಪು ಕಟ್ಟೆಪುಣಿ ಹಳೇಮನೆ ನಿವಾಸಿ ಅಬ್ದುಲ್ ಬಶೀರ್ ಅಲಿಯಾಸ್ ಕಳ್ಳ ಬಶೀರ್ (36) ಶಿಕ್ಷೆಗೆ ಗುರಿಯಾದವ.
ಘಟನೆಯ ವಿವರ: 27-02-2009ರಂದು ತಡರಾತ್ರಿ ಸುಮಾರು 1:30ರ ಸುಮಾರಿಗೆ ಅಬ್ದುಲ್ ಬಶೀರ್ ಬಾಳೇಪುಣಿ ಗ್ರಾಮದ ಕಣಂತೂರು ಎಂಬಲ್ಲಿರುವ ಶ್ರೀಕ್ಷೇತ್ರ ತೋಡಕುಕ್ಕಿನಾರ್ ದೈವಸ್ಥಾನದ ಎದುರಿನ ಬಾಗಿಲಿನ ಬೀಗವನ್ನು ಕಬ್ಬಿಣದ ಲಿವರ್‌ನಿಂದ ಮುರಿದು ಒಳನುಗ್ಗಿದ್ದ. ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದಲ್ಲದೆ, ಪಕ್ಕದಲ್ಲಿದ್ದ ಭಂಡಾರ ಮನೆಯ ಒಳಭಾಗದ ಬೀಗ ಹಾಗೂ ದೈವದ ಕೋಣೆಯ ಬಾಗಿಲನ್ನೂ ಮುರಿದು ಕಳವು ಮಾಡಿದ್ದ.
ಕೋಣೆಯೊಳಗಿದ್ದ 1.20 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನ ಮತ್ತು 120 ಗ್ರಾಂ ಬೆಳ್ಳಿ ಹೊಂದಿದ್ದ 2 ಕಿರುವಾಳುಗಳು (ಖಡ್ಗ), 145 ಗ್ರಾಂ ತೂಕದ ಚಿನ್ನದ ಹೊದಿಕೆಯಿರುವ ಕಬ್ಬಿಣದ ಬಾಣ, 7 ಸಾವಿರ ರೂ ಮೌಲ್ಯದ 260 ಗ್ರಾಂ ತೂಕದ ಬೆಳ್ಳಿಯ ಕಲಶ, 6 ಸಾವಿರ ರೂ ಮೌಲ್ಯದ 250 ಗ್ರಾಂ ತೂಕದ ಬೆಳ್ಳಿಯ ಶಿವನ ಪ್ರತಿಮೆಯ ಸತ್ತಿಗೆ (ಬೆಳ್ಳಿಯ ಹೂ), 2 ಸಾವಿರ ರೂ ಮೌಲ್ಯದ 75 ಗ್ರಾಂ ತೂಕದ ಬೆಳ್ಳಿಯ ದುರ್ಗಾಲಯ ಮೂರ್ತಿಯ ಸತ್ತಿಗೆ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ 2 ಸಾವಿರ ರೂ ನಗದು ಕಳವಾಗಿತ್ತು. ಬಳಿಕ ಕದ್ದ ಬಂಗಾರದ ಗಟ್ಟಿಗಳನ್ನು 2ನೇ ಆರೋಪಿಗೆ ಮಾರಾಟ ಮಾಡಲಾಗಿತ್ತು. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ: 64/2009ರ ಅಡಿಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಬಂಟ್ವಾಳದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಾಲಯವು (JMFC) ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಬಿಡುಗಡೆಗೊಳಿಸಿ ಆದೇಶಿಸಿತ್ತು. ಈ ಖುಲಾಸೆ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ (ಅಭಿಯೋಜನೆ) ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ಮೇಲ್ಮನವಿ (Cri. Appeal No. 182/2019) ಸಲ್ಲಿಸಿತ್ತು.
ಮೇಲ್ಮನವಿಯ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-1 ತ್ವರಿತ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮೋಹನ ಜೆ. ಎಸ್. ಅವರು ವಿಚಾರಣಾ ನ್ಯಾಯಾಲಯದ ಖುಲಾಸೆ ತೀರ್ಪನ್ನು ರದ್ದುಪಡಿಸಿ, ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.
ಐಪಿಸಿ ಕಲಂ 457 ರಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 20,000 ದಂಡ. ಐಪಿಸಿ ಕಲಂ 380 ರಡಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ ದಂಡ. ಐಪಿಸಿ ಕಲಂ 75 ರಡಿ ಆರೋಪಿ ಬಶೀರ್ ಈ ಹಿಂದೆಯೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಕೃತ್ಯಗಳನ್ನು ಎಸಗಿ 2 ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದ ಕಾರಣ, ಆತನಿಗೆ ಹೆಚ್ಚುವರಿಯಾಗಿ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ ದಂಡ ವಿಧಿಸಲಾಗಿದೆ.
ಇವುಗಳನ್ನೂ ಓದಿ:

