ಅಂಜನಾದ್ರಿಗೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ: 575 ಮೆಟ್ಟಿಲೇರಿ ಪವನಸುತನ ದರ್ಶನ
ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮಾ ಅವರು ಅಂಜನಾದ್ರಿಗೆ ಭೇಟಿ ನೀಡಿ, ದರ್ಶನ ಪಡೆದರು.

Published : January 10, 2026 at 8:24 AM IST
ಗಂಗಾವತಿ (ಕೊಪ್ಪಳ): ಚಿಕ್ಕರಾಂಪೂರದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ದೇಗುಲಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದೆಹಲಿ ಮೂಲದ ಇಶಾಂತ್ ಶರ್ಮಾ ಅವರು ಶುಕ್ರವಾರ ಭೇಟಿ ನೀಡಿ, ಪವನಸುತನ ದರ್ಶನ ಪಡೆದರು.
ಜನಸಾಮಾನ್ಯರಂತೆ ಆಗಮಿಸಿದ್ದ ಟೀಂ ಇಂಡಿಯಾ ಮಾಜಿ ವೇಗಿ ಇಶಾಂತ್ ಶರ್ಮಾ, ದೆಹಲಿಯಿಂದ ತಮ್ಮೊಂದಿಗೆ ಬಂದಿದ್ದ ಸ್ನೇಹಿತನೊಂದಿಗೆ ಪಾದಗಟ್ಟೆಯಿಂದ 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೆ ಹೋಗಿ ಅಂಜನಾದ್ರಿ ಹನುಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕ ಶ್ರೀನಿವಾಸ್ ಅವರು, ಇಶಾಂತ್ ಶರ್ಮಾ ಪರವಾಗಿ ಆಂಜನೇಯನಿಗೆ ವಿಶೇಷ ಪೂಜೆ, ಅರ್ಚನೆ ಮಾಡಿದರು. ಬಳಿಕ ದೇವಸ್ಥಾನದ ಆಡಳಿತ ಮಂಡಳಿಯಿಂದ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರನಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ದೇಗುಲದಲ್ಲಿ ಪ್ರಸಾದ ಸ್ವೀಕರಿಸಿದರು.
ಈ ಬಗ್ಗೆ ಮಾತನಾಡಿದ ಇಶಾಂತ್ ಶರ್ಮಾ, ದೇವಸ್ಥಾನ ತುಂಬಾ ಪ್ರಶಾಂತವಾದ ಪ್ರದೇಶದಲ್ಲಿದೆ. ಮನಸ್ಸಿಗೆ ತುಂಬಾ ಹಿಡಿಸಿದೆ. ಮುಂದೆ ಮತ್ತೊಮ್ಮೆ ಕುಟುಂಬ ಸಮೇತ ದೇವಸ್ಥಾನಕ್ಕೆ ಬರುವುದಾಗಿ ಹೇಳಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಗುಡ್ ಬೈ ಹೇಳಿರುವ ಇಶಾಂತ್, ದೆಹಲಿ ಪರವಾಗಿ ಐಪಿಎಲ್ ಪಂದ್ಯಾವಳಿ ಆಡುತ್ತಿದ್ದಾರೆ.
ಇದನ್ನೂ ಓದಿ: ಕುಕ್ಕೆಯಲ್ಲಿಂದು ಆಶ್ಲೇಷ ನಕ್ಷತ್ರದಂದು 1400 ಆಶ್ಲೇಷ ಬಲಿ ಸೇವೆ: ಖ್ಯಾತ ನಟ ಸುಮನ್ ತಲ್ವಾರ್ ಭೇಟಿ
ಇತ್ತೀಚೆಗಷ್ಟೇ ಅಂಜನಾದ್ರಿ ದರ್ಶನ ಪಡೆದಿದ್ದ ಕೇಂದ್ರ ಸಚಿವರು: ಕೇಂದ್ರ ಸರ್ಕಾರದ ಪ್ರವಾಸೋದ್ಯಮ, ಜಲಶಕ್ತಿ ಹಾಗೂ ಸಾಂಸ್ಕೃತಿಕ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಜ.6ರಂದು ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹೊಸಪೇಟೆಯಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉದ್ದೇಶಕ್ಕೆ ಆಗಮಿಸಿದ್ದ ಸಚಿವ ಶೇಖಾವತ್, ಆನೆಗೊಂದಿ ರಾಜವಂಶಿಕ ಕೃಷ್ಣದೇವರಾಯ ಅವರ ಮನವಿ ಮೆರೆಗೆ ಆನೆಗೊಂದಿಯ ಪುರಾತನ ಸಾಂಪ್ರದಾಯಕ ಶೈಲಿಯ ನವೀಕೃತ ಅರಮನೆಗೆ ಭೇಟಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಆಡಳಿತ ಭಾಗವಾಗಿದ್ದ ಆನೆಗೊಂದಿ ಮತ್ತು ಹಂಪಿ ಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಬಹುದಾದ ಯೋಜನೆ, ಅಭಿವೃದ್ಧಿಯ ಬಗ್ಗೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರಾಜಕೀಯ ಪ್ರಮುಖರಿಂದ ಮಾಹಿತಿ ಪಡೆದುಕೊಂಡಿದ್ದರು.
ಇದಕ್ಕೂ ಮುನ್ನ ಹೊಸಪೇಟೆಯಿಂದ ಹೊರಟ ಕೇಂದ್ರ ಸಚಿವರು ಹಂಪಿ ಬಳಿ ಇರುವ ವಿಜಯ ವಿಠ್ಠಲ ದೇವಸ್ಥಾನ ಹಾಗೂ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಬಳಿಕ ಕಡ್ಡಿರಾಂಪೂರ ಹಾಗೂ ಆನೆಗೊಂದಿ ಮಧ್ಯ ಇರುವ ತುಂಗಭದ್ರಾ ನದಿಯನ್ನು ಯಾಂತ್ರಿಕ ಬೋಟಿನ ಮೂಲಕ ಈಚೆ ದಡಕ್ಕೆ ಆಗಮಿಸಿದ್ದರು. ಬಳಿಕ ಅಲ್ಲಿಂದ ವಾಹನದಲ್ಲಿ ಅಂಜನಾದ್ರಿಗೆ ಭೇಟಿ ನೀಡಿದ್ದ ಸಚಿವರು, ಹನುಮಂತ ದೇವರ ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ಗಂಗಾವತಿ: ಪತ್ನಿಯನ್ನು ಹೊತ್ತು ಅಂಜನಾದ್ರಿಯ 575 ಮೆಟ್ಟಿಲು ಏರಿದ ಭೂಪ

