ಅರಮನೆ ನಗರಿಯಲ್ಲಿ ಸ್ವಚ್ಛ ಸರ್ವೇಕ್ಷಣೆ ಸಿದ್ಧತೆ ಆರಂಭ
ಅರಮನೆ ನಗರಿಯಲ್ಲಿ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ ನಡೆಯುತ್ತಿದ್ದು, ಸ್ಥಳೀಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸ್ವಚ್ಛತಾ ವಿಭಾಗದ ಅಧಿಕಾರಿ ಮೃತ್ಯುಂಜಯ ಮನವಿ ಮಾಡಿದ್ದಾರೆ.

Published : January 9, 2026 at 5:55 PM IST
ಮೈಸೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ದೇಶಾದ್ಯಂತ 2025–26ನೇ ಸಾಲಿಗೆ ನಡೆಸಲಿರುವ ಸ್ವಚ್ಛ ಸರ್ವೇಕ್ಷಣೆ ಟೂಲ್ ಕಿಟ್ ಬಿಡುಗಡೆಯಾಗಿದ್ದು, ಈ ಬಾರಿ 'ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ' ಎಂಬ ಘೋಷವ್ಯಾಕದೊಂದಿಗೆ ಸರ್ವೇಕ್ಷಣೆ ನಡೆಯಲಿದೆ.
ಅರಮನೆ ನಗರಿ ಮೈಸೂರು ಕಳೆದ ಬಾರಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಈ ಪ್ರಶಸ್ತಿ ಪಡೆದ ದೇಶದ ಕೆಲವೇ ಕೆಲವು ನಗರಗಳ ಪೈಕಿ ಮೈಸೂರು ಒಂದು. ಈ ಬಾರಿಯೂ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ಸಂಸ್ಕೃತಿಕ ನಗರಿ ಮತೊಮ್ಮೆ ಸಜ್ಜಾಗುತ್ತಿದೆ.
ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್(ಮರು ಬಳಕೆ) ಮತ್ತು ರೀ ಸೈಕಲ್ (ಪುನರ್ಬಳಕೆ) ಥೀಮ್ ಅಡಿ ಸ್ವಚ್ಚ ಸರ್ವೇಕ್ಷಣೆ ನಡೆದಿತ್ತು. ಈ ಬಾರಿ 'ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ' ಥೀಮ್ ಅಡಿ ಸ್ವಚ್ಛ ಸರ್ವೇಕ್ಷಣೆ ನಡೆಯಲಿದೆ. ಈ ಬಾರಿ ಅಂಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದಿದ್ದರೂ ಸ್ವಚ್ಛ ಸರ್ವೇಕ್ಷಣಾ ತಂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನಡೆಸುವ ಮೌಲ್ಯಮಾಪನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
12,500 ಅಂಕಗಳಿಗೆ ಸ್ಪರ್ಧೆ: ಕಳೆದ ಬಾರಿಯಂತೆ ಈ ಬಾರಿಯೂ 12,500 ಅಂಕಗಳಿಗೆ ಸ್ಪರ್ಧೆ ನಡೆಯಲಿದೆ. 1 ರಿಂದ 4 ಹಂತಗಳಿಗೆ ಒಟ್ಟು 10,500 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 2,000 ಅಂಕಗಳ ಪೈಕಿ ಒಡಿಎಫ್ + ವಾಟರ್ಗೆ 1,000 ಅಂಕ ಹಾಗೂ ತ್ಯಾಜ್ಯ ಮುಕ್ತ ನಗರಕ್ಕೆ 1,000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. 1 ರಿಂದ 4ರ ವರೆಗಿನ ಹಂತಗಳಲ್ಲಿ ಬರುವ 10,500 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015 ಮತ್ತು 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರಹೊಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 27ನೇ ಸ್ಥಾನ ಪಡೆದಿತ್ತು. 2024–25ರಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದ ನಗರಗಳನ್ನು ರಾಕಿಂಗ್ ವ್ಯಾಪ್ತಿಗೆ ಒಳಪಡಿಸಲಿಲ್ಲ.
ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಟೂಲ್ ಕಿಟ್ ಅನುಸಾರವಾಗಿ ನಗರದಲ್ಲಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದಿದ್ದೇವೆ. ಈ ಬಾರಿಯೂ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯಲು ಸ್ಥಳೀಯರು ಸ್ವಚ್ಛತೆಗೆ ಹೆಚ್ಚಿನ ಸಹಕಾರ ನೀಡಬೇಕು. ಅದೇ ರೀತಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸ್ವಚ್ಛತಾ ವಿಭಾಗದ ಅಧಿಕಾರಿ ಮೃತ್ಯುಂಜಯ ಮನವಿ ಮಾಡಿದ್ದಾರೆ.
ಮೈಸೂರಿಗೆ ಸಂದಿರುವ ಪ್ರಶಸ್ತಿಗಳು: ಸ್ವಚ್ಛತಾ ರ‍್ಯಾಂಕಿಂಗ್ ಜತೆಗೆ ಇದುವರೆಗೆ ಹಲವು ಪ್ರಶಸ್ತಿಗಳನ್ನು ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಪಡೆದುಕೊಂಡಿದೆ. 2018, 2020 ಮತ್ತು 2022ರಲ್ಲಿ ಮಧ್ಯಮ ನಗರ ವಿಭಾಗ(3ರಿಂದ 10 ಲಕ್ಷ ಜನಸಂಖ್ಯೆ)ದಲ್ಲಿ ದೇಶದ ನಂ.1 ಸ್ವಚ್ಛನಗರಿ ಪಟ್ಟವನ್ನು ಪಡೆಯಿತು. 2021ರಲ್ಲಿ ದೇಶದ ನಂ.1 'ಸ್ವಯಂ ಸುಸ್ಥಿರ ನಗರ' (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ, ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಹಾಗೂ 2019ರಿಂದ 2024ವರೆಗೆ ನಿರಂತರವಾಗಿ Five Star ರ್ಯಾಂಕಿಂಗ್ನೊಂದಿಗೆ ತ್ಯಾಜ್ಯ ಮುಕ್ತ ನಗರ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ಮತ್ತು 2024ರಲ್ಲಿ ವಾಟರ್ ಪ್ಲಸ್ ನಗರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಸ್ವಚ್ಛತಾ ವಿಭಾಗದ ಅಧಿಕಾರಿ ಹೇಳುವುದೇನು?: ಈ ಬಾರಿ ಸ್ವಚ್ಛ ಸರ್ವೇಕ್ಷಣೆ ಕಾರ್ಯಕ್ರಮದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಹಾಗಾಗಿ ಸ್ಥಳೀಯರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸ್ವಚ್ಛತಾ ವಿಭಾಗದ ಅಧಿಕಾರಿ ಮೃತ್ಯುಂಜಯ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 'ಪ್ರಾಣಿ ದತ್ತು ಯೋಜನೆ'ಯಿಂದ ಮೈಸೂರು ಮೃಗಾಲಯಕ್ಕೆ ವಾರ್ಷಿಕ ₹1 ಕೋಟಿ ಆದಾಯ: ಹಣ ಬಳಕೆ ಹೇಗೆ?

