ETV Bharat / state

ರಾಜ್ಯ ಪ್ರವಾಸೋದ್ಯಮಕ್ಕೆ ಹೂಡಿಕೆಯ ಉತ್ತೇಜನ: 314.93 ಕೋಟಿ ಮೊತ್ತದ 18 ಹೋಟೆಲ್‌ ಯೋಜನೆಗಳಿಗೆ ಸಹಾಯಧನದ ಅನುಮೋದನೆ

ಹೊಸ ಪ್ರವಾಸೋದ್ಯಮ ನೀತಿಯಡಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದರ ಜೊತೆಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

SUBSIDY APPROVED FOR 18 HOTEL PROJECTS WORTH RS. 314.93 CRORE: K.J. GEORGE
ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ (ETV Bharat)
author img

By ETV Bharat Karnataka Team

Published : September 2, 2026 at 5:27 PM IST

1 Min Read
Choose ETV Bharat

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸುವ ಮತ್ತು ಖಾಸಗಿ ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ರಾಜ್ಯದ ಹೋಟೆಲ್‌ ವಲಯದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಹಾಗೂ 10 ಬಜೆಟ್‌ ಹೋಟೆಲ್‌ಗಳು ಸೇರಿದಂತೆ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ 314.93 ಕೋಟಿ ಹೂಡಿಕೆಯಾಗಿದ್ದು, 655 ಹೋಟೆಲ್‌ ಕೊಠಡಿಗಳು ಸೇರ್ಪಡೆಯಾಗಿವೆ ಹಾಗೂ 1,542 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಯೋಜನೆಗಳಿಗೆ ಅಂದಾಜು ₹47.23 ಕೋಟಿ ಸಹಾಯಧನವನ್ನು ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

2024–29ರ ನೀತಿಯಡಿ 1,080.97 ಕೋಟಿ ಹೂಡಿಕೆ: ಸಭೆಯಲ್ಲಿ 2024– 29ರ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 35 ಪ್ರೀಮಿಯಂ ಹಾಗೂ 43 ಬಜೆಟ್‌ ಹೋಟೆಲ್‌ಗಳು ಸೇರಿದಂತೆ ಒಟ್ಟು 78 ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಯಿತು. ಈ ಯೋಜನೆಗಳು ಅನುಷ್ಠಾನಗೊಂಡ ಬಳಿಕ ರಾಜ್ಯದಲ್ಲಿ 1,080.97 ಕೋಟಿ ಹೂಡಿಕೆಯಾಗಲಿದ್ದು, 3,424 ಹೊಸ ಹೋಟೆಲ್‌ ಕೊಠಡಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ 3,707 ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಹೋಟೆಲ್‌ ಯೋಜನೆಗಳಿಂದ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಹೆಚ್ಚುವುದರ ಜೊತೆಗೆ, ಖಾಸಗಿ ಹೂಡಿಕೆ, ಸ್ಥಳೀಯ ಉದ್ಯೋಗ ಹಾಗೂ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.

ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಗುಣಮಟ್ಟದ ವಸತಿ ಮತ್ತು ಆತಿಥ್ಯ ಮೂಲ ಸೌಕರ್ಯ ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಹೊಸ ಪ್ರವಾಸೋದ್ಯಮ ನೀತಿಯಡಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದರ ಜೊತೆಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ₹1,080 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ 78 ಹೊಸ ಹೋಟೆಲ್‌ ಯೋಜನೆಗಳಿಗೆ ದೊರೆತಿರುವ ತಾತ್ವಿಕ ಅನುಮೋದನೆ ರಾಜ್ಯದ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತಮ ಸೂಚನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾರಂತ ಬಡಾವಣೆಗೆ 16 ಸಾವಿರ ಕೋಟಿ ಹೂಡಿಕೆ: ರೈತರಿಗೆ ನಿವೇಶನ ಪತ್ರ ಹಂಚಿಕೆಗೆ ಸಿಎಂ ಡಿಕೆಶಿ ಚಾಲನೆ