ETV Bharat / state

ಚಿನ್ನಸ್ವಾಮಿ ಕ್ರೀಡಾಂಗಣದ ಸುರಕ್ಷತಾ ಕ್ರಮಗಳ ಅನುಷ್ಠಾನದ ಕುರಿತು ಪರಿಶೀಲಿಸಲು ತಜ್ಞರ ಉಪಸಮಿತಿ

ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಅನುಸರಣೆಯಾಗುತ್ತಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಉಪಸಮಿತಿ ವರದಿ ಸಲ್ಲಿಸಲಿದೆ.

BENGALURU  ಚಿನ್ನಸ್ವಾಮಿ ಕ್ರೀಡಾಂಗಣ  CHINNASWAMY STAMPEDE  ಚಿನ್ನಸ್ವಾಮಿಯಲ್ಲಿ ಸುರಕ್ಷತಾ ಕ್ರಮ CHINNASWAMY STADIUM
ಚಿನ್ನಸ್ವಾಮಿ ಕ್ರೀಡಾಂಗಣ (IANS)
author img

By ETV Bharat Karnataka Team

Published : February 27, 2026 at 11:41 AM IST

2 Min Read
Choose ETV Bharat

ಬೆಂಗಳೂರು: ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಅನುಮತಿ ಪಡೆದ ಬಳಿಕ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಸರಣೆಯಾಗುತ್ತಿರುವ ಭದ್ರತಾ ಕ್ರಮಗಳ ಕುರಿತು ಪರಿಶೀಲನೆಗಾಗಿ ತಜ್ಞರ ಉಪಸಮಿತಿ ರಚಿಸಲಾಗಿದೆ.

ಪೊಲೀಸ್, ಅಗ್ನಿಶಾಮಕದಳ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಉಪಸಮಿತಿಯು ಪ್ರತಿ ವಾರ ಕ್ರೀಡಾಂಗಣಕ್ಕೆ ಭೇಟಿ ನೀಡಲಿದೆ. ಹಾಗೂ ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ಅನುಸರಣೆಯಾಗುತ್ತಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಸಮಿತಿಯಲ್ಲಿ ಯಾರೆಲ್ಲ?: ಸಮಿತಿಯಲ್ಲಿ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಡಾ.ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ, ಜಿಬಿಎದ ಎಇಇ ಯೋಗೇಶ್, ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಗಳ ಡಿಎಫ್ಒ ಸುನಿಲ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಶಂಭು ಕುಮಾರ್.ಆರ್, ಕಬ್ಬನ್ ಪಾರ್ಕ್ ಠಾಣೆಯ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಹಾಗೂ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆನಂದ್ ಕುಮಾರ್ ಇರಲಿದ್ದಾರೆ. ಈ ಸಮಿತಿಯು ಪ್ರತಿ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಲಿದೆ. ಹಾಗೂ ಕ್ರೀಡಾಂಗಣದಲ್ಲಿನ ಸುರಕ್ಷತಾ ಅನುಸರಣೆಗಳ ಕುರಿತು ಸದಸ್ಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಲಿದೆ.

2025, ಜೂನ್ 4ರಂದು ಆರ್‌ಸಿಬಿ ತಂಡದ ಆಟಗಾರರ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು‌. ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಇರುವ ಸುರಕ್ಷತಾ ಅಪಾಯಗಳನ್ನ ಉಲ್ಲೇಖಿಸಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು. ನಂತರ ಕ್ರೀಡಾಂಗಣವನ್ನ ಪರಿಶೀಲನೆ ನಡೆಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ಸಮಿತಿ, 32 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದ ಸುತ್ತಮುತ್ತ ಸೂಕ್ತ ಪಾರ್ಕಿಂಗ್, ಪಿಕ್ ಅಂಡ್​ ಡ್ರಾಪ್ ವ್ಯವಸ್ಥೆ ಸೇರಿದಂತೆ ಕೆಲ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಸೂಚಿಸಿತ್ತು. ಸುರಕ್ಷತಾ ಕ್ರಮಗಳ ಅನುಷ್ಠಾನವಾದ ಷರತ್ತು ವಿಧಿಸಿ ಆರ್​ಸಿಬಿ ತಂಡದ ತವರಿನ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕರ್ನಾಟಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿತ್ತು.

ಕ್ರೀಡಾಂಗಣದ ಸಾಮರ್ಥ್ಯದಷ್ಟು ಮಾತ್ರ ಟಿಕೆಟ್ ಮಾರಾಟ ಮಾಡಬೇಕು, ಜನದಟ್ಟಣೆ ಅಗತ್ಯಕ್ಕೆ ತಕ್ಕಂತೆ ದೊಡ್ಡ ಗೇಟ್​​ಗಳ ಅಳವಡಿಕೆ, ಆಂಬ್ಯುಲೆನ್ಸ್ ನಿಯೋಜನೆ ಸೇರಿದಂತೆ ನಿವೃತ್ತ ನ್ಯಾ.ಕುನ್ಹಾ ಅವರ ವರದಿಯ ಶಿಫಾರಸುಗಳ ಅನುಗುಣವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದರು.‌

ಕಳೆದ ವರ್ಷ ಜೂನ್ ತಿಂಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತವಾಗಿದ್ದ ಕ್ರಿಕೆಟ್ ಮುಂಬರುವ ಐಪಿಎಲ್ ಉದ್ಘಾಟನಾ ಪಂದ್ಯದ ಮೂಲಕ ಶುಭಾರಂಭವಾಗಲಿದೆ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ಗೆ ಷರತ್ತುಬದ್ಧ ಅನುಮತಿ: ಕೆಎಸ್​ಸಿಎ ಪಾಲಿಸಬೇಕಾದ ಕಠಿಣ ಮುಂಜಾಗ್ರತಾ ಕ್ರಮಗಳಿವು