ETV Bharat / state

ವಿಧಾನಸೌಧದಲ್ಲಿ ವಿದ್ಯುತ್, ನೀರಿನ ಪೋಲು ತಡೆಗೆ ಕಟ್ಟುನಿಟ್ಟಿನ ಕ್ರಮ: ಸರ್ಕಾರದ ಸ್ಪಷ್ಟೀಕರಣ

ವಿದ್ಯುತ್​ ಹಾಗೂ ನೀರಿನ ಸಂರಕ್ಷಣೆಗೆ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

BENGALURU  MEASURES TO SAVE ELECTRICITY  ವಿದ್ಯುತ್​ ಹಾಗೂ ನೀರಿನ ಸಂರಕ್ಷಣೆ  ಸಂಪನ್ಮೂಲಗಳ ಸಂರಕ್ಷಣೆ ಕ್ರಮ
ವಿಧಾನಸೌಧ (IANS)
author img

By ETV Bharat Karnataka Team

Published : July 5, 2026 at 9:47 AM IST

2 Min Read
Choose ETV Bharat

​ಬೆಂಗಳೂರು: ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್​​​ ಮತ್ತು ನೀರಿನ ಸಂರಕ್ಷಣೆ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಸ್ಪಷ್ಟೀಕರಣ ನೀಡಿದೆ.

​ರಾಜ್ಯ ಸರ್ಕಾರವು ವಿದ್ಯುತ್​ ಹಾಗೂ ನೀರಿನ ಸಂರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಇಂಧನ ಮತ್ತು ಜಲ ಸಂಪನ್ಮೂಲಗಳ ಮಿತವ್ಯಯದ ಬಳಕೆಯನ್ನು ಖಚಿತಪಡಿಸಲು ಈಗಾಗಲೇ ವಿವಿಧ ಕ್ರಮಗಳನ್ನು ಜಾರಿಗೊಳಿಸಿದೆ. ಈ ಸಂಬಂಧ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು (DPAR) ದಿನಾಂಕ: 21.02.2022 ರಂದೇ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ​ವಿಧಾನಸೌಧದಲ್ಲಿ ಸಂಪನ್ಮೂಲಗಳ ಸಂರಕ್ಷಣೆಗಾಗಿ ಪ್ರಮುಖ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಸ್ವಯಂಚಾಲಿತ ದೀಪಗಳ ವ್ಯವಸ್ಥೆ: ವಿದ್ಯುತ್ ಉಳಿಸಲು ವಿಧಾನಸೌಧದ ಆವರಣದಲ್ಲಿರುವ ಹೊರಾಂಗಣ ವಿದ್ಯುತ್ ದೀಪಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಆನ್ ಮತ್ತ ಆಫ್ (On/Off) ಮಾಡಲಾಗುತ್ತಿದೆ.

ಕಚೇರಿ ಸಮಯದ ನಂತರ ಬಂದ್: ಪ್ರತಿದಿನ ಕಚೇರಿ ಅವಧಿ ಮುಕ್ತಾಯವಾದ ನಂತರ ಗ್ರೂಪ್-ಡಿ ಸಿಬ್ಬಂದಿಯ ಮೂಲಕ ಎಲ್ಲಾ ವಿದ್ಯುತ್ ದೀಪಗಳು ಹಾಗೂ ಅಗತ್ಯವಿಲ್ಲದ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಬಂದ್ ಮಾಡಲಾಗುತ್ತಿದೆ.

ಏರ್ ಕಂಡೀಷನರ್ (AC) ತಾಪಮಾನ ನಿಯಂತ್ರಣ: ಎಲ್ಲಾ ಏರ್ ಕಂಡೀಷನರ್‌ಗಳನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೇ ಬಳಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಸಿಬ್ಬಂದಿಗಳಿಗೆ ಕಡ್ಡಾಯ ಸೂಚನೆ: ಅಧಿಕಾರಿ ಅಥವಾ ಸಿಬ್ಬಂದಿ ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಲೈಟ್, ಫ್ಯಾನ್, ಏರ್ ಕಂಡೀಷನರ್ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಮತ್ತೊಮ್ಮೆ ಸೂಚಿಸಲಾಗಿದೆ.

ಬಾಲ್ ವಾಲ್ವ್ (Ball Valve) ಅಳವಡಿಕೆ: ನೀರಿನ ಸಂರಕ್ಷಣೆಯ ದೃಷ್ಟಿಯಿಂದ, ಮೇಲ್ಮಟ್ಟದ ನೀರಿನ ಟ್ಯಾಂಕ್‌ಗಳಿಂದ (Overhead Tank) ನೀರು ವ್ಯರ್ಥವಾಗಿ ಹರಿಯದಂತೆ ತಡೆಯಲು 'ಬಾಲ್ ವಾಲ್ವ್'ಗಳನ್ನು ಅಳವಡಿಸಲಾಗಿದೆ.

ವಿಶೇಷ ಅಧಿಕಾರಿ ನೇಮಕ: ವಿಧಾನಸೌಧದಲ್ಲಿನ ನೀರಿನ ಸೋರಿಕೆ ಹಾಗೂ ಅನಗತ್ಯ ಬಳಕೆಯನ್ನು ತಡೆಗಟ್ಟಲು ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಿಶೇಷ ಜವಾಬ್ದಾರಿಯನ್ನು ವಹಿಸಲಾಗಿದೆ.

ತ್ಯಾಜ್ಯ ನೀರು ಮರುಬಳಕೆ ಮತ್ತು ಮಳೆನೀರು ಕೊಯ್ಲು: ವಿಧಾನಸೌಧದ ಉದ್ಯಾನಗಳ ನಿರ್ವಹಣೆಗೆ ಕೇವಲ ಸಂಸ್ಕರಿಸಿದ ತ್ಯಾಜ್ಯ ನೀರನ್ನು (Treated Water) ಬಳಸಲಾಗುತ್ತಿದೆ. ಪ್ರಸ್ತುತ ಎರಡು ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, Rain Water Harvesting (ಮಳೆನೀರು ಕೊಯ್ಲು) ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

BWSSB ತಾಂತ್ರಿಕ ಸಹಕಾರ: ನೀರಿನ ಮಿತವ್ಯಯದ ಬಳಕೆ ಹಾಗೂ ಸೋರಿಕೆ ನಿಯಂತ್ರಣಕ್ಕಾಗಿ ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ತಾಂತ್ರಿಕ ಸಹಕಾರವನ್ನು ಪಡೆಯಲಾಗುತ್ತಿದೆ.

ವಿಧಾನಸೌಧದಲ್ಲಿ ಜಾರಿಯಲ್ಲಿರುವ ಈ ಎಲ್ಲಾ ಸಂರಕ್ಷಣಾ ಕ್ರಮಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಕಾರ್ಯಕಾರಿ) ಹಾಗೂ ಕಿರಿಯ ಅಭಿಯಂತರರು (ವಿದ್ಯುತ್) ಅವರು ನಿಯಮಿತವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಈವರೆಗಿನ SIR ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ನಡೆಸುವಂತೆ ಚುನಾವಣೆ ಆಯೋಗಕ್ಕೆ ಆಗ್ರಹ: ಹೆಚ್.ಡಿ. ಕುಮಾರಸ್ವಾಮಿ