ETV Bharat / state

ಹಾವೇರಿ: ಆರಂಭವಾದ ದಿನವೇ ಬಂದ್ ಆದ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ

ಹಾವೇರಿ ನಗರದ ಎಪಿಎಂಸಿ ಯಾರ್ಡ್‌ನಲ್ಲಿದ್ದ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಆರಂಭವಾದ ದಿನವೇ ಬಂದ್ ಮಾಡಲಾಗಿದೆ.

stray-dog-sterilization-surgery-center-closed-on-the-same-day-it-opened
ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ (ETV Bharat)
author img

By ETV Bharat Karnataka Team

Published : January 6, 2026 at 4:29 PM IST

2 Min Read
Choose ETV Bharat

ಹಾವೇರಿ : ನಗರದಲ್ಲಿರುವ ಸಾವಿರಾರು ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಡಿಸೆಂಬರ್ 20 ರಂದು ನಗರದ ಗುತ್ತಲ ರಸ್ತೆಯಲ್ಲಿ ಎಪಿಎಂಸಿ ಯಾರ್ಡ್‌ನಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿತ್ತು. ಹಾವೇರಿ ನಗರಸಭೆ ಮತ್ತು ಪಶುಸಂಗೋಪನೆ ಇಲಾಖೆಯ ಸಹಭಾಗಿತ್ವದಲ್ಲಿ ಈ ಕೇಂದ್ರ ಆರಂಭ ಮಾಡಲಾಗಿತ್ತು. ಆದರೆ, ಕೇಂದ್ರ ಆರಂಭವಾದ ದಿನವೇ ಬಂದಾಗಿದೆ.

ನಗರದ 25 ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನ ಬಂದ್ ಮಾಡಿದೆ. ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ ಆರಂಭ ಮಾಡಿ 15 ದಿನ ಕಳೆದಿದ್ದರೂ ಕೇಂದ್ರ ಮರು ಆರಂಭವಾಗಿಲ್ಲ. ನಗರದ ಜನ ಮಾತ್ರ ದಿನನಿತ್ಯ ಬೀದಿನಾಯಿ ಹಾವಳಿಯಲ್ಲಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಕೇಂದ್ರಗಳಲ್ಲಿ 50, ಜಿಲ್ಲಾಕೇಂದ್ರದಲ್ಲಿ 25 : ಹಾವೇರಿ ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಕಂಗೆಟ್ಟಿದ್ದ ಜಿಲ್ಲಾಡಳಿತ ಸುಪ್ರೀಂಕೋರ್ಟ್ ಆದೇಶದಂತೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿತ್ತು. ಜಿಲ್ಲೆಯಲ್ಲಿ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ 10 ಬೀದಿ ನಾಯಿಗಳ ಸಂತಾನಹರಣದ ಶಸ್ತ್ರಚಿಕಿತ್ಸಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ.

ಹಾವೇರಿ ನಗರಸಭೆ ಪೌರಾಯುಕ್ತ ಕಾಂತರಾಜು ಅವರು ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಕುರಿತು ಪ್ರತಿಕ್ರಿಯಿಸಿದರು (ETV Bharat)

400ಕ್ಕೂ ಹೆಚ್ಚು ಬೀದಿನಾಯಿಗಳ ಸಂರಕ್ಷಣೆ ಮಾಡಲಾಗಿದೆ. ತಾಲೂಕು ಕೇಂದ್ರಗಳಾದ ಬ್ಯಾಡಗಿ, ಹಾನಗಲ್, ರಾಣೆಬೆನ್ನೂರು ಸೇರಿದಂತೆ ವಿವಿಧೆಡೆ ಪ್ರತಿತಾಲೂಕಿಗೆ 50 ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. ಆದರೆ, ಜಿಲ್ಲಾ ಕೇಂದ್ರದಲ್ಲಿಯೇ ಕೇವಲ 25 ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಕೇಂದ್ರ ಬಂದ್ ಮಾಡಲಾಗಿದೆ.

ಅಧಿಕಾರಿಗಳು ಏನಂತಾರೆ? : ಈ ಕುರಿತಂತೆ ಹಾವೇರಿ ನಗರಸಭೆ ಪೌರಾಯುಕ್ತ ಕಾಂತರಾಜು ಅವರು ಮಾತನಾಡಿದ್ದು, 'ನಗರಸಭೆ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಈಗಾಗಲೇ ಸಂತಾನಹರಣ ಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳಲು ಹಳೆ ಎಪಿಎಂಸಿ ಮಾರುಕಟ್ಟೆಯ ಜಾಗದಲ್ಲಿ ಸ್ಥಳ ನಿಗದಿಪಡಿಸಿದ್ದೇವೆ. ಆಪರೇಷನ್ ಮಾಡಲು ಬೇಕಾದ ಹಾಗೂ ಫೋಷಣೆ ಮಾಡಲು ಬೇಕಾದ ಎಲ್ಲಾ ಸವಲತ್ತುಗಳನ್ನು ನಿಗದಿಪಡಿಸಿ ಪ್ರಾರಂಭ ಮಾಡಿದ್ದೇವೆ. 25 ನಾಯಿಗಳಿಗೆ ಈಗಾಗಲೇ ಸಂತಾನಹರಣ ಚಿಕಿತ್ಸೆ ಮಾಡಿದ್ದೇವೆ. ಇದೀಗ ಟೆಂಡರ್ ಕರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ನಾಯಿಗಳಿಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ' ಎಂದಿದ್ದಾರೆ.

'ಪ್ರತಿ ನಾಯಿಗೆ 1645 ರೂಪಾಯಿಯನ್ನು ಸರ್ಕಾರ ನಿಗದಿಪಡಿಸಿದೆ. ಅದರಂತೆ ಟೆಂಡರ್​ನವರು ಭಾಗವಹಿಸಿದ್ದಾರೆ. ಅದರಂತೆಯೇ ಅದಕ್ಕೆ ಪೇಮೆಂಟ್ ಮಾಡುತ್ತೇವೆ. ಈಗಾಗಲೇ ಪಶು ವೈದ್ಯರ ಸಹಾಯದಿಂದ 25 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಶುಕ್ರವಾರ ಹಾಗೂ ಶನಿವಾರ ಮತ್ತೆ 25 ರಿಂದ 30 ನಾಯಿಗಳನ್ನು ಹಿಡಿದು ಅವುಗಳಿಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. 1500 ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡುತ್ತೇವೆ. ಕೆಲವೊಂದು ನಾಯಿಗಳಿಗೆ ಪೋಷಣೆಯನ್ನೂ ಮಾಡುತ್ತೇವೆ. ಇನ್ನುಳಿದವುಗಳನ್ನು ಹಿಡಿದಲ್ಲಿಯೇ ಕರೆದೊಯ್ದು ಬಿಡುತ್ತೇವೆ' ಎಂದು ತಿಳಿಸಿದ್ದಾರೆ.

ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ವಿಭೂತಿ ಶೆಟ್ಟಿ ಅವರು ಮಾತನಾಡಿ, 'ಹಾವೇರಿ ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿತ್ತು. ಅವು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದವು. ಹೀಗಾಗಿ, ಸರ್ಕಾರ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಮುಂದಾಯಿತು. 15 ದಿನಗಳ ಮುಂಚೆ 25 ನಾಯಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ನಂತರ ಯಾವುದೇ ಓಣಿಯಲ್ಲಿ, ಬೀದಿಯಲ್ಲಿ ನಾಯಿಗಳನ್ನು ಹಿಡಿದಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಬೀದಿ ನಾಯಿಗಳ ಸಂತಾನಹರಣಕ್ಕೆ ಏಕೆ ಮುಂದಾಗಬೇಕಿತ್ತು? ಬೇಜವಾಬ್ದಾರಿಯುತವಾಗಿ ಕೆಲಸ ಮಾಡಬೇಡಿ. ಸಂತಾನಹರಣ ಚಿಕಿತ್ಸೆ ಮಾಡಬೇಕು. ಬೈಕ್​, ಕಾರಿನಲ್ಲಿ ಪ್ರಯಾಣಿಸುವಾಗ ನಾಯಿಗಳು ನಮ್ಮ ಬೆನ್ನತ್ತಿ ಕಚ್ಚಲು ಬಂದಿವೆ. ಈ ವೇಳೆ ಕಡಿಲಿಲ್ಲದಿದ್ದರೂ ಅದಕ್ಕೆ ಹೆದರಿ ನಾವು ಬಿದ್ದಿದ್ದೇವೆ. ಅವುಗಳಿಗೆ ಹೆದರಿ ಕೈ ಕಾಲು ಮುರಿದುಕೊಂಡವರು, ತಲೆ ಒಡೆದುಕೊಂಡವರು ಇದ್ದಾರೆ. ಹೀಗಾಗಿ, ನಮ್ಮ ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಬೇಕು' ಎಂದು ಹೇಳಿದ್ದಾರೆ.

ಇದನ್ನೂ ಓದಿ : ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 100 ಬೀದಿನಾಯಿಗಳಿಗೆ ತಿಂಗಳಿಗೆ 3.33 ಲಕ್ಷ ರೂಪಾಯಿ ಖರ್ಚು